ತುಮಕೂರು: ಪ್ರವಾಸಕ್ಕೆ ತೆರಳಿದ್ದ ಕೊರಟಗೆರೆಯ ಬೊಮ್ಮಲದೇವಿ ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಮೂವರು ಶಿಕ್ಷಕರು ಮದ್ಯ ಕುಡಿಸಿದ ಆರೋಪ ಕೇಳಿ ಬಂದಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕರಾವಳಿಯ ಪುಣ್ಯ ಕ್ಷೇತ್ರಗಳು ಮತ್ತು ಪ್ರೇಕ್ಷಣಿಯ ಸ್ಥಳಗಳನ್ನು ಸಂದರ್ಶಿಸಿ ವಾಪಾಸಗುತ್ತಿದ್ದ ವೇಳೆ ವಿದ್ಯಾರ್ಥಿಗಳು ಬಸ್‌ನಲ್ಲಿ ಡ್ಯಾನ್ಸ್ ಮಾಡಿ ಸುಸ್ತಾಗಿದ್ದಾರೆ. ಈ ವೇಳೆ ಕುಡಿಯಲು ನೀರು ಕೇಳಿದಾಗ ಶಿಕ್ಷಕರಾದ ಸಚ್ಚಿದಾನಂದ್, ಶೇಕ್ ಮುಜಾಮಿಲ್ ಮತ್ತು ಧನ್‌ಸಿಂಗ್ ರಾಥೋಡ್ ಅವರು ಮದ್ಯ ಬೆರೆಸಿದ ನೀರನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಮದ್ಯ ಮಿಶ್ರಿತ ನೀರು ಕುಡಿದ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ ಹಲವರು ವಾಂತಿ ಮಾಡಿಕೊಂಡರೆ, ಇನ್ನು ಕೆಲವರು ತಲೆ ಸುತ್ತು ಬಂದು ಕುಸಿದು ಬಿದ್ದರು ಎಂದು ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮೂವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದರು.
ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ದೂರು ನೀಡಲಾಗಿದ್ದು,ಮೂವರನ್ನು ಅಮಾನತು ಮಾಡಿರುವ ಬಗ್ಗೆ ವರದಿಯಾಗಿದೆ.