ಪಾಠ ಮಾಡುವುದೆಂದರೆ ಹೆಣ್ಣುಮಕ್ಕಳಿಗೆ ಹಿಗ್ಗು. ಆದರೆ, ನಮ್ಮ ಜನರ ಲೆಕ್ಕಾಚಾರವೇ ಬೇರೆ. “ಅಯ್ಯೋ, ಅವರಿಗೇನ್ರಿ? ಟೀಚರ್ ಕೆಲಸ…ಆರಾಮಾಗಿದಾರೆ ‘- ಎಂದೆಲ್ಲ ಮಾತಾಡಿಬಿಡುತ್ತಾರೆ. ಇಂಥ ಸಂದರ್ಭದಲ್ಲಿಯೇ ತಮ್ಮ ಅಂತರಂಗದ ಮಾತುಗಳನ್ನು ಶಿಕ್ಷಕಿಯೊಬ್ಬರು ಇಲ್ಲಿ ತೆರೆದಿಟ್ಟಿದ್ದಾರೆ. ಶಿಕ್ಷಕರ ದಿನದ ಸಂದರ್ಭದಲ್ಲಿ ಈ ಬರಹ ಪ್ರಕಟಿಸಲು “ಅವಳು ‘ಗೆ ಹೆಮ್ಮೆ-ಹಿಗ್ಗು.
ಮಳೆ ಬಂದು ನಿಂತಾದ ಮೇಲೂ ಟಪ್ ಟಪ್ ಎಂದು ಬೀಳುವ ಮೇಲ್ಛಾವಣಿಯ ಹನಿಗಳಂತೆ, ಕೆದಕಿದ ನೆಲದ ಹಸಿ ಮೊಳಕೆಗಳಂಥ ನೆನಪುಗಳು… ನಿತಾಂತ ಧ್ಯಾನದ ನಂತರ ನಿರಾಳತೆಯೊಂದು ಆವರಿಸುತ್ತದಲ್ಲ; ಅಂತಹುದೇ ಆಹ್ಲಾದಕರ ಮನಸ್ಥಿತಿ… ನೆನೆಯುತ್ತಲೇ ಶಾಲೆಗೆ ಬಂದದ್ದು, ನೆನೆಯುತ್ತಲೇ ಮನೆಗೆ ಹೋದದ್ದು, ನೆಂದ ಮರುದಿನ ಕೆಂಡದಂಥಾ ಜ್ವರ… ತುಂತುರು ಹನಿಗಳ ಮೇಲೆ ಮುದ್ದಾಗಿ ಬಾಗಿ ನಿಂತ ಕಾಮನಬಿಲ್ಲು… ಕಾಮನೆಗಳು ಬೀಜಗಟ್ಟುವ ಸಂಭ್ರಮವ ಮಡಿಲಲ್ಲಿ ತುಂಬಿಕೊಂಡು ಕಾಪಿಟ್ಟುಕೊಂಡದ್ದು…. ಎಷ್ಟೊಂದು ವಿಚಿತ್ರ! ನಮ್ಮೊಳಗೇ ತಾಜಾ ಮಗುತನವನ್ನಿಟ್ಟುಕೊಂಡು ಮಕ್ಕಳ ಮುಂದೆ ಹುಸಿ ಗಂಭೀರತೆ ನಟಿಸುತ್ತಾ ಟೀಚರ್ ಆಗಿಬಿಡುವುದು…
ಅಂದು ಶಾಲೆಗೆ ಹೋಗಿ ಕುಳಿತವಳಿಗೆ ಅಳು ತಡೆಯಲಾಗಲಿಲ್ಲ. ಎದುರಿಗೆ ನನ್ನನ್ನೇ ತದೇಕಚಿತ್ತದಿಂದ ನೋಡುತ್ತಿರುವ ಮಕ್ಕಳು. ಒಂದೇ ಒಂದು ಹನಿ ಜಾರಿದರೂ ಅವರೆಲ್ಲರೂ ಗಾಬರಿಯಾಗುತ್ತಾರೆ. ಯಾಕೆ ಮಿಸ್, ಯಾಕೆ ಮಿಸ್ ಎನ್ನುವ ಪ್ರಶ್ನೆಗಳ ಸುರಿಮಳೆ… ಅವನ್ನು ಎದುರಿಸುವ ಶಕ್ತಿ ನನ್ನಲ್ಲೂ ಇಲ್ಲ ಅನಿಸಿದಾಗ ಕಿಟಕಿಯಾಚೆ ನೋಡುತ್ತಾ ಉದುರಿದ ಎರೆಡು ಹನಿಯನ್ನು ಮರೆಮಾಚಿ ತೊಡೆದು, ಉಳಿದ ದುಮ್ಮಾನವನ್ನು ಕೊರಳಲ್ಲೇ ಕಟ್ಟಿ ಹಾಕಿ ಮಕ್ಕಳ ಕಡೆ ತಿರುಗಿದ್ದೆ. ಪಟಪಟ ಅರಳು ಸಿಡಿದಂಥಾ ಮಾತುಗಳು… ಚಿಂತೆ ಮಾಡಲಿಕ್ಕೂ ಸಮಯ ಕೊಡದೆ ಸುತ್ತುವರಿದು ಮಿಸ್- “ಆ ಹಾಡು ಹೇಳ್ಕೊಡಿ, ಮ್ಯಾಮ್ ಈ ನೋಟ್ಸು ಬರೆಸಿ, ಮಿಸ್ ಆ ಪಾಠ ಮಾಡ್ತೀರಾ, ಮಿಸ್ ಇವತ್ತೂಂದಿನ ಸ್ವಲ್ಪ ಆಟಾಡ್ತೀವಿ…. ‘ ಓಹ್, ಅದ್ಯಾವಾಗ ಚಿಂತೆಯೆನ್ನುವುದರ ಎಳೆ ಬೆಂಕಿ ಸೋಕಿದ ಕರ್ಪೂರದಂತೆ ಮಾಯವಾಯಿತೋ… ಇದು ಅದೆಷ್ಟನೆ ಬಾರಿಯೋ ಹೀಗಾಗಿರುವುದು. ಅದೆಷ್ಟೇ ನೋವಿರಲಿ, ಸಂಕಟವಿರಲಿ, ಚಾಕ್‌ಪೀಸ್ ಹಿಡಿದು ಬೋರ್ಡಿನ ಮುಂದೆ ನಿಂತುಬಿಟ್ಟರೆ ಸಾಕು; ಮಕ್ಕಳ ಈಕ್ಷಿತ ಮುಖಗಳು ಎಲ್ಲವನ್ನೂ ಮರೆಸಿಬಿಡುತ್ತವೆ.
ಪುಟ್ಟ ಮಗಳ ತಾಯಿ ನಾನು. ನಿತ್ಯವೂ ನನ್ನೊಂದಿಗೆ ಮಗಳೂ ಶಾಲೆ ಕಡೆ ಪಯಣ ಬೆಳೆಸುತ್ತಾಳೆ. ಕರೆದುಕೊಂಡು ಹೋಗಲೇಬೇಕಾದ ಅನಿವಾರ್ಯತೆಯ ನಾನು, ಕೆಲವೊಮ್ಮೆ ಸರಿಯಾದ ವೇಳೆಗೆ ತಲುಪಲಾಗದೆ ಒದ್ದಾಡುತ್ತಿರುತ್ತೇನೆ. ಬೇರೆಯವರಿಗೆ ನಾನು ಮಗುವನ್ನು ಶಾಲೆಗೆ ಕರೆತರುತ್ತೇನೆ ಎಂಬುದು ತಕರಾರಿನ ವಿಷಯವಾದರೆ, ನನಗೆ..?! ನನಗಾದರೂ, ಮಗುವಿಗೆ ಸರಿಯಾಗಿ ಉಣಿಸದೆ, ತಿನಿಸದೆ, ಗಾಳಿಯಲ್ಲಿ ,ಚಳಿಯಲ್ಲಿ, ಬಿಸಲಲ್ಲಿ ಕರೆದುಕೊಂಡು ಓಡಾಡುವುದು ಇಷ್ಟವಾ?! ಶಿಕ್ಷಕಿಯಲ್ಲದೆ ನಾನು ತಾಯಿಯೂ ಹೌದು… ಮಗುವಿಗೆ ಸಣ್ಣ ಶೀತ ಜ್ವರ ಬಂದರೂ ಮನಸ್ಸು ತಹಬದಿಗೆ ಬರಲಾಗದಷ್ಟು ತಲ್ಲಣಿಸಿಬಿಡುತ್ತದೆ. ಮತ್ತೆ ನನ್ನ ಮಗು ಬರೀ ನನ್ನದೇ ಜವಾಬ್ದಾರಿಯಾ?! ಸಮಾಜದ ಹೊಣೆ ಏನೂ ಇಲ್ಲವಾ?! ಆ ಮಗು ಮುಂದಿನ ಪೀಳಿಗೆಯ ಪ್ರತಿನಿಧಿ ತಾನೆ?! ಅಂತನ್ನುವ ಪ್ರಶ್ನೆಗಳೂ ಬದಿಯಲ್ಲಿ ನಿಂತು ಕಾಡುತ್ತವೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಂತಹದೊಂದು ಹೊಣೆಗಾರಿಕೆ ಇರಲೇಬೇಕಿರುತ್ತದೆ ಅಲ್ಲವಾ…. ಆದರೆ ಇದನ್ನೆಲ್ಲಾ ಕೃತಿಯಲ್ಲಿ ಬಯಸುವುದು ಬಹಳ ಕಷ್ಟಸಾಧ್ಯ. ಮಗು ಅಳುತ್ತಿರುವಾಗಲೂ ಮಕ್ಕಳಿಗೆ ಏನೋ ಕಲಿಸಿದ್ದಿದೆ, ಪಾಠ ಮಾಡಿದ್ದಿದೆ, ಏಳುತಿಂಗಳ ಗರ್ಭಿಣಿಯಾಗಿದ್ದಾಗಲೂ, ಪ್ರತಿಭಾ ಕಾರಂಜಿಗೆ ಮಕ್ಕಳನ್ನು ಅಣಿಗೊಳಿಸಿ ಕರೆದುಕೊಂಡು ಹೋಗಿಬಂದದ್ದಿದೆ…. ಇದರ ಹಿಂದಿರುವುದು ಮಕ್ಕಳ ಬಗೆಗಿನ ಅದೇ ತಾಯಿ ಮಮತೆ…
ಎಷ್ಟೇ ಜಾಗರೂಕರಾಗಿದ್ದರೂ, ಒಮ್ಮೊಮ್ಮೆ ನಾವು ನಮ್ಮ ಅತಿ ಖಾಸಗೀ ತೊಂದರೆಗಳಿಗೆ ಸಿಕ್ಕು ಚಡಪಡಿಸುವುದುಂಟು. ಶಾಲೆಗೆ ಹೋದ ನಂತರ ಪೀರಿಯಡ್ಸ್ ಶುರುವಾಗಿ ಮನೆಗೆ ಹೊರಡಲೇಬೇಕಾಗಿ ಬಂದಾಗ, ರಜೆ ಪಡೆದುಕೊಳ್ಳಲು ಯಾವ ಕಾರಣ ಕೊಡಬೇಕೆನ್ನುವ ಮುಜುಗರವನ್ನೂ ಅನುಭವಿಸುತ್ತಿರುತ್ತೇವೆ. ಮತ್ತೆ ಆದಿನಗಳ ಸಂಕಟ ಮತ್ತು ದೈಹಿಕ ಸುಸ್ತನ್ನೂ ಮರೆತು ಮಕ್ಕಳೊಂದಿಗೆ ಬೆರೆಯುತ್ತೇವೆ. ಆದರೆ ತಮ್ಮ ಎಷ್ಟೋ ತಾಪತ್ರಯಗಳ ನಡುವೆ ಮಹಿಳೆಯರು ಕೆಲಸವನ್ನು ಪ್ರಾಮಾಣಿಕವಾಗಿ ನಿಭಾಯಿಸಲು ಪ್ರಯತ್ನಿಸುತ್ತಿರುತ್ತಾರೆ. ಬಹುಶಃ ಹೆಣ್ಣಿಗೆ ಹೊಣೆ ಹೊರುವುದು ಅವಳ ಜೈವಿಕ ಅವಸ್ಥೆಗಳ ಪಾಠವೂ ಇರಬಹುದು.
ಆದರೂ, ಮಹಿಳೆಯರು ಎನ್ನುವ ಕಾರಣಕ್ಕೇ ಕೆಲವೊಮ್ಮೆ ಅಘೋಷಿತ ತಾರತಮ್ಯವನ್ನೂ ಎದುರಿಸಬೇಕಾಗಿ ಬಂದದ್ದಿದೆ. ನಮ್ಮ ನೈಸರ್ಗಿಕ ಕೊರತೆಗಳನ್ನು ಮುಂದು ಮಾಡಿಕೊಂಡು ತುಳಿಯುವ ಪ್ರಯತ್ನವೂ ಕೆಲವೊಮ್ಮೆ ನಡೆಯುತ್ತದೆ. ಆದರೆ, ಪ್ರಾಮಾಣಿಕ ಕೆಲಸದಿಂದ ಮಾತ್ರ ಅಂಥವಕ್ಕೆ ಉತ್ತರಿಸಲು ಸಾಧ್ಯ. ನಾವು ಮಕ್ಕಳು ಎಂದುಕೊಳ್ಳುವ ಅದೇ ಮಕ್ಕಳು, ನಮ್ಮ ಕಷ್ಟದಲ್ಲಿ ಬಲಿಷ್ಠ ತೋಳುಗಳಾಗಿ ಬೆನ್ನಿಗೆ ನಿಲ್ಲುತ್ತಾರೆ.
ಹದಿಹರೆಯದ ಮಕ್ಕಳಾದರೆ ಇನ್ನೊಂಥರ. ಕೆಲವೊಮ್ಮೆ ಯಾವನೋ ಬೆನ್ನಿಗೆ ಬಿದ್ದು ಪ್ರೀತಿ ಪ್ರೇಮ ಎಂದು ಕಾಡುತ್ತಿರುತ್ತಾನೆ. ಅಪ್ಪ, ಅಮ್ಮ, ಗೆಳತಿಯರು.. ಯಾರಲ್ಲಿಯೂ ಹೇಳಿಕೊಳ್ಳುವಂತಿಲ್ಲ. ಹೇಳಿಕೊಂಡರೆ, ನಿನ್ನದೇ ತಪ್ಪಿರಬಹುದೆಂದು ತನಗೇ ಬಯ್ಯುತ್ತಾರೇನೋ ಎನ್ನುವ ಭಯ. ಆಗ ಅವರು ಓಡಿ ಬರುವುದು ನಮ್ಮ ಬಳಿಗೆ. ಅವರ ಸಮಸ್ಯೆಯನ್ನು ನಮ್ಮದೆನ್ನುವ ಹಾಗೆ ಹಚ್ಚಿಕೊಂಡು ಅವರನ್ನು ಸಮಸ್ಯೆಯಿಂದ ಹೊರ ತರುವವರೆಗೂ ನಮಗೂ ನೆಮ್ಮದಿಯಿಲ್ಲ. ಹೀಗೆ, ಒಬ್ಬರಿಗೊಬ್ಬರು ಹಚ್ಚಿಕೊಳ್ಳುತ್ತಾ ಅದ್ಯಾವ ಮಾಯದಲ್ಲಿ ಗೆಳತಿಯರಾಗಿಬಿಡುತ್ತೇವೋ… ನಮ್ಮ ನೋವು-ಖುಷಿಯನ್ನೂ ಅವರಲ್ಲಿ ಹೇಳಿಕೊಳ್ಳದಿದ್ದರೆ, ಇರಲು ಸಾಧ್ಯವೇ ಇಲ್ಲ ಎನ್ನುವಂಥ ಚಡಪಡಿಕೆ. ಈ ಪುಟ್ಟ ಗೆಳತಿಯರ ಭಾಗ್ಯ ಯಾವ ಜನ್ಮದ್ದೋ
ಶಿಕ್ಷಕಿಯರಾಗಿ ನಾವು ಪಡೆದದ್ದು ಏನು ಅಂದುಕೊಳ್ಳುವಾಗ ನಾವು ನಮ್ಮ ನೋವುಗಳನ್ನು ಮರೆತದ್ದು ಇಲ್ಲಿ, ಕಷ್ಟ ಸಹಿಸುವ ಶಕ್ತಿ ಪಡೆದದ್ದು ಇಲ್ಲಿ. ಕಷ್ಟಗಳನ್ನು ಎದುರಿಸುವ ಛಾತಿ ದೊರೆತದ್ದು ಇಲ್ಲಿ, ಒತ್ತಡವನ್ನು ನಿವಾರಿಸುವ, ತೃಪ್ತಿ ಕೊಡುವ ಮುಗ್ಧ ನಗು, ಮಾತು, ಆಟ, ಪ್ರೀತಿ, ಗೌರವ…. ಏನೆಲ್ಲ ಸಿಕ್ಕಿದೆ ಇಲ್ಲಿ… ಇಂದಿಗೂ ನಮ್ಮ ಬಳಿ ಓದಿದ ಮಕ್ಕಳು ಸಂಪರ್ಕದಲ್ಲಿದ್ದಾರೆ. ಹೈಯರ್ ಸ್ಟಡೀಸ್ ಮಾಡುತ್ತಿದ್ದಾರೆ, ಕೆಲವರು ಕೆಲಸವನ್ನೂ ಮಾಡುತ್ತಿದ್ದಾರೆ. ಆದರೆ, ಈಗಲೂ ಅವರು ಈ ಶಿಕ್ಷಕರ ಬಗ್ಗೆ ತೋರಿಸುವ ಪ್ರೀತಿ ಗೌರವ ಕಾಣುವಾಗ ಬದುಕಿದ್ದು ಸಾರ್ಥಕ ಎನಿಸಿಬಿಡ್ತದೆ.
ಹಾಗಾಗಿ ಬೇಸರವೆನ್ನುವುದು ನಮ್ಮ ಬಳಿ ಸುಳಿಯುವುದಿಲ್ಲ…. ಶಾಲೆಗಳೆಂಬ ತೋಟದ ಮಾಲಿಗಳು ನಾವು, ಇಲ್ಲಿ ಅರಳುವ ಯಾವ ಹೂಗಳನ್ನೂ ಬಾಡಲು ಬಿಡುವುದಿಲ್ಲ….
ಶಿಕ್ಷಕಿಯರಾಗಿ ನಾವು ಪಡೆದದ್ದು ಏನು ಅಂದುಕೊಳ್ಳುವಾಗ ನಾವು ನಮ್ಮ ನೋವುಗಳನ್ನು ಮರೆತದ್ದು ಇಲ್ಲಿ, ಕಷ್ಟ ಸಹಿಸುವ ಶಕ್ತಿ ಪಡೆದದ್ದು ಇಲ್ಲಿ. ಕಷ್ಟಗಳನ್ನು ಎದುರಿಸುವ ಛಾತಿ ದೊರೆತದ್ದು ಇಲ್ಲಿ, ಒತ್ತಡವನ್ನು ನಿವಾರಿಸುವ, ತೃಪ್ತಿ ಕೊಡುವ ಮುಗ್ಧ ನಗು, ಮಾತು, ಆಟ, ಪ್ರೀತಿ, ಗೌರವ…. ಏನೆಲ್ಲ ಸಿಕ್ಕಿದೆ ಇಲ್ಲಿ…
-ಆಶಾ ಜಗದೀಶ್