Advertisement

Teachers’ Day: ಪೆಟ್ಟು ಮರೆತು ನಕ್ಕವನು…

03:17 PM Sep 03, 2023 | Team Udayavani |

ಹದಿನೈದು ವರ್ಷಗಳ ಉಪನ್ಯಾಸಕ ವೃತ್ತಿಯಲ್ಲಿ ಮಕ್ಕಳಿಗೆ ಕಲಿಸಿದ್ದಕ್ಕಿಂತ ಹೆಚ್ಚಾಗಿ ಅವರಿಂದ ನಾನೇ ಕಲಿತಿದ್ದೇನೆ. ಮಕ್ಕಳು ಎಷ್ಟು ಮುಗ್ಧರಾಗಿರುತ್ತಾರೆ, ನಾವೆಷ್ಟೇ ಕಟುವಾಗಿ ವರ್ತಿಸಿದರೂ ನಮ್ಮನ್ನು ಕ್ಷಣಾರ್ಧದಲ್ಲಿ ಕ್ಷಮಿಸಿಬಿಡುತ್ತಾರೆ ಎಂದು ನನಗೆ ಅರ್ಥವಾದ ಘಟನೆಯ ವಿವರ ಇಲ್ಲಿದೆ.

Advertisement

ನಾಲ್ಕು ವರ್ಷಗಳ ಹಿಂದಿನ ಘಟನೆಯಿದು. ದ್ವಿತೀಯ ಪಿಯುಸಿಯ ಒಬ್ಬ ಹುಡುಗ ತರಗತಿಯ ಹೊರಗೆ ಕಾರಿಡಾರಲ್ಲಿ ನಿಂತಿದ್ದ. ಒಳಗೆ ಕುಳಿತು ಇನ್ನೇನು ಶುರುವಾಗುವ ತರಗತಿಯ ಪುಸ್ತಕ ಜೋಡಿಸಿ­ಕೊಳ್ಳುವು­ದನ್ನು ಬಿಟ್ಟು ಹೊರಗಿದ್ದಾನಲ್ಲ ಎಂದು ನನಗೆ ಸಿಟ್ಟು ಬಂತು. ಅವನಿಗೆ ಸ್ಟಾಫ್ ರೂಮಿಗೆ ಬರಲು ಹೇಳಿ ಕಳಿಸಿದೆ. ಎರಡು ನಿಮಿಷವಾದರೂ ಬರಲಿಲ್ಲ. ಇನ್ನೊಬ್ಬ ಹುಡುಗನ ಹತ್ತಿರ ಹೇಳಿಕಳಿಸಿದೆ. ಆದರೂ ಬರಲಿಲ್ಲ. ಕೋಪ ನೆತ್ತಿಗೇರಿ ಅಲ್ಲೇ ಇದ್ದ ತೆಳುವಾದ ಕೋಲನ್ನು ತೆಗೆದುಕೊಂಡು ಅವನ ಕ್ಲಾಸಿಗೆ ಹೋದೆ. ಅವನನ್ನು ನಿಲ್ಲಿಸಿ ಬೈದು ನಾಲ್ಕು ಪೆಟ್ಟು ಕೊಟ್ಟೆ. ಅವನು ಅಲ್ಲಾಡಲಿಲ್ಲ. ಮತ್ತೂ ಎರಡೇಟು ಬಿಗಿದೆ. ಸುಮ್ಮನೆ ನಿಂತಿದ್ದ, ಮತ್ತೂಂದೇಟು ಬಿಗಿದು ವಾಪಸಾದೆ. ಏಕೆಂದರೆ ಹತ್ತು ಗಂಟೆಗೆ ನಾನು ತರಗತಿಗೆ ಹೋಗಬೇಕಿತ್ತು. ನೋಡಿದರೆ, ಅದೇ ತರಗತಿಗೇ ಮೊದಲ ಪೀರಿಯಡ್‌ ಇತ್ತು. ನಾನು ಒಳಹೋದ ಕೂಡಲೇ ಎಲ್ಲರೂ ಎದ್ದು ನಿಂತು “ಗುಡ್‌ ಮಾರ್ನಿಂಗ್‌ ಮೇಡಂ’ ಎಂದರು. ಮೊದಲ ಬೆಂಚಿನಲ್ಲೇ ಇದ್ದವನು, ನಾನು ಅವನ ಕಡೆಗೆ ನೋಡಿದ ಕೂಡಲೇ ಮುಗುಳ್ನಕ್ಕ. ಒಂದೇ ಕ್ಷಣ!

ನನ್ನ ಕಣ್ಣುಗಳು ತುಂಬಿಬಂದವು. ಈಗ ತಾನೇ ಬೈದು ಪೆಟ್ಟು ಕೊಟ್ಟಿದ್ದನ್ನು (ನೋವಾಗುವ ಹಾಗೆ ಹೊಡೆಯದೇ ಇರಬಹುದು, ಆದರೆ ತರಗತಿಯ ಮಕ್ಕಳ ಎದುರು ಅದು ಅವಮಾನವೇ) ಒಂದು ಚೂರೂ ಮನಸ್ಸಿನಲ್ಲಿಟ್ಟುಕೊಳ್ಳದೇ ಮುಗುಳ್ನಕ್ಕ ಹುಡುಗ ನನಗೆ ಬಹುದೊಡ್ಡ ಪಾಠ ಕಲಿಸಿದ್ದ. ಸಣ್ಣಪುಟ್ಟ ಮಾತುಗಳನ್ನು ವರ್ಷಗಟ್ಟಲೆ ನೆನಪಿಟ್ಟುಕೊಂಡು ಹಗೆ ಸಾಧಿಸುವ ನಮ್ಮಂಥ ಹಿರಿಯರಿಗೆ ಆ 17 ವರ್ಷದ ಚಿಕ್ಕ ಹುಡುಗನ ಪಾಠ ಎಂತಹ ಅಮೂಲ್ಯವಾದುದಲ್ಲವೇ? ಅವನಿಗೆ ಧನ್ಯವಾದ ಹೇಳಿ ಎಲ್ಲರೆದುರಿಗೆ ಅವನ ಕ್ಷಮೆ ಕೇಳಿದೆ. ಭಯಕ್ಕಿಂತ ಪ್ರೀತಿ ಹೆಚ್ಚು ಪ್ರಭಾವಶಾಲಿ ಎಂಬುದನ್ನು ಅರ್ಥಮಾಡಿಕೊಂಡೆ. ಈಗಲೂ ಟೀಚರ್ಸ್‌ ಡೇಗೆ ಮೊದಲ ವಿಶ್‌ ಅವನದ್ದೇ. ಈಗಲೂ ತರಗತಿಗಳಲ್ಲಿ ಆ ಘಟನೆಯನ್ನು ಹೇಳುವಾಗ ನನ್ನ ಕಣ್ಣಂಚು ಒದ್ದೆಯಾಗುತ್ತದೆ.

ದೀಪಾ ಹಿರೇಗುತ್ತಿ, ಆಂಗ್ಲ ಉಪನ್ಯಾಸಕಿ,

ಕೊಪ್ಪ, ಚಿಕ್ಕಮಗಳೂರು ಜಿಲ್ಲೆ 

Advertisement
Advertisement

Udayavani is now on Telegram. Click here to join our channel and stay updated with the latest news.

Next