Advertisement

ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅಪಾರ

01:06 PM Sep 07, 2020 | Suhan S |

ಗುಂಡ್ಲುಪೇಟೆ: ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರವಿದೆ ಎಂದು ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಹೇಳಿದರು. ಪಟ್ಟಣದ ಗುರುಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ಸಮಾಜದಲ್ಲಿ ವ್ಯಕ್ತಿಗಳ ಬೆಳವಣಿಗೆಯ ಹಿಂದೆ ಶಿಕ್ಷಕರ ಪಾತ್ರವಿದೆ. ಇದರಿಂದಲೇ ಎಷ್ಟೇ ದೊಡ್ಡವರಾದರೂ ತಮ್ಮ ಗುರು ಗಳಿಗೆ ಗೌರವ ನೀಡುತ್ತಿದ್ದಾರೆ ಎಂದರು.

Advertisement

ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ: ಸಾಮಾನ್ಯ ವಿದ್ಯಾರ್ಥಿ ಯಲ್ಲಿರುವಪ್ರತಿಭೆಯನ್ನು ಗುರುತಿಸಿ ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಿದರೆ, ಆತನ ಜೀವನದಲ್ಲಿ ಮಹತ್ವದ ತಿರುವು ದೊರೆಯುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಮನಸ್ಸನ್ನು ಅರ್ಥಮಾಡಿ ಕೊಂಡು, ಅವರ ಪ್ರತಿಭೆಯನ್ನು ಗುರುತಿಸಬೇಕು ಎಂದರು.

ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಕ್ರಮ: ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳು ಶಾಲೆ, ಕಾಲೇಜುಗಳನ್ನು ಮರೆಯುವಂತಾಗಿದ್ದ ರಿಂದ ಸರ್ಕಾರ ವಿದ್ಯಾಗಮ ಯೋಜನೆಮೂಲಕ ಶಿಕ್ಷಕರು, ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಶಿಕ್ಷಣ ನೀಡುವಂತೆ ಮಾಡಿದೆ. ಸಮವಸ್ತ್ರ, ಬಿಸಿಯೂಟ, ವಿದ್ಯಾರ್ಥಿ ವೇತನ ಸೇರಿದಂತೆ ಅಗತ್ಯ ಸೌಲಭ್ಯ ನೀಡುವ ಮೂಲಕ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಂಡಿದೆ. ಇದನ್ನು ಬಳಸಿ ಕೊಂಡು ಶಿಕ್ಷಕರು ನಿಸ್ವಾರ್ಥ ಸೇವೆ ಮಾಡಬೇಕು ಎಂದರು.

ನಿವೃತ್ತ ಶಿಕ್ಷಕರು, ಕ್ರೀಡಾಕೂಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಇಬ್ಬರು ಶಿಕ್ಷಕರನ್ನು ಸನ್ಮಾನಿಸಲಾಯಿತು. ಬಿಇಒ ಎಸ್‌.ಸಿ. ಶಿವಮೂರ್ತಿ, ತಹಶೀಲ್ದಾರ್‌ ನಂಜುಂಡಯ್ಯ, ಜಿಪಂ ಸದಸ್ಯ ಕೆ.ಎಸ್‌. ಮಹೇಶ್‌, ತಾಪಂ ಅಧ್ಯಕ್ಷ ಎಸ್‌.ಎಸ್‌.ಮಧುಶಂಕರ್‌, ತಾಪಂ ಇಒ ವಿ.ಪಿ. ಕುಲದೀಪ್‌, ಪುರಸಭೆ ಮುಖ್ಯಾಧಿಕಾರಿ ಎ.ರಮೇಶ್‌, ಬಿಆರ್‌ಸಿ ನಂದೀಶ್‌, ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ್‌, ಪದಾಧಿಕಾರಿ ದಿನೇಶ್‌ ಹಾಜರಿದ್ದರು.

………………………………………………………………………………………………………………………………………………………

Advertisement

ಪ್ರತಿಯೊಬ್ಬ ವಿದ್ಯಾರ್ಥಿಗೂ ಗುರಿ, ಗುರು ಮುಖ್ಯ : ಚಾಮರಾಜನಗರ: ಪ್ರತಿಯೊಬ್ಬ ವಿದ್ಯಾರ್ಥಿಗೂ ತನ್ನ ವಿದ್ಯಾರ್ಥಿ ಜೀವನದಲ್ಲಿ ಗುರಿ ಮತ್ತು ಪ್ರೋತ್ಸಾಹ ನೀಡುವ ಗುರು ಬಹಳ ಮುಖ್ಯ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ,ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮತ್ತು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಯಾಗಿದ್ದು, ಗುರು ತನ್ನ ವಿದ್ಯಾರ್ಥಿಗಳನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡ್ಯೊಯುವಂತಹ ಮಹತ್ತರವಾದ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಕರು ಮಕ್ಕಳನ್ನು ತಮ್ಮ ಮಕ್ಕಳೆಂದು ಪ್ರೀತಿ, ವಿಶ್ವಾಸದಿಂದ ಕಂಡು ಸಮಾಜದಲ್ಲಿ ವ್ಯಕ್ತಿತ್ವಯುಳ್ಳ ಪ್ರಜೆಯಾಗಿ ರೂಪಿಸುವಂತಹ ಜವಾಬ್ದಾರಿಯನ್ನು ಹೊತ್ತಿದ್ದಾರೆ ಎಂದರು.

ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ಸು ಸಾಧಿಸಲು ತಂದೆ, ತಾಯಿ ಹಾಗೂ ಗುರುವಿನ ಪಾತ್ರ ಮಹತ್ತರವಾಗಿರುತ್ತದೆ. ಶಿಕ್ಷಕ ತನ್ನ ವಿದ್ಯಾರ್ಥಿ ತನಗಿಂತ ಬಹಳ ಎತ್ತರಕ್ಕೆ ಬೆಳೆದಾಗ ಬಹಳ ಸಂತ್ತೋಷ, ಸಂಭ್ರಮಪಡುತ್ತಾರೆ ಎಂದರು.

ಆದರ್ಶ ವ್ಯಕ್ತಿಗಳಾಗಿ ರೂಪುಗೊಳ್ಳಿ: ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ಮಾತನಾಡಿ, ರಾಧಾಕೃಷ್ಣನ್‌ ದಾರ್ಶನಿಕ ಶಿಕ್ಷಕರಾಗಿದ್ದವರು. ಶಿಕ್ಷಣ ಎಂದರೇ ಕೇವಲ ಮಾಹಿತಿ ನೀಡುವುದಲ್ಲ. ವ್ಯಕ್ತಿಯ ವ್ಯಕ್ತಿತ್ವ ನಿಮಾರ್ಣದ ಜೊತೆ ಭವಿಷ್ಯ ರೂಪಿಸುವುದಾಗಿದೆ. ಶಿಕ್ಷಣ ಜ್ಞಾನಕ್ಕಾಗಿಯೇ ಹೊರತು, ಉದ್ಯೋಗಕ್ಕಾಗಿ ಅಲ್ಲ ಎಂಬುದನ್ನು ವಿದ್ಯಾರ್ಥಿ ಗಳು ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದರು.

2020-21ನೇ ಸಾಲಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ಶಾಲಾ ಶಿಕ್ಷಕರು ಹಾಗೂ ನಿವೃತ್ತಿ ಹೊಂದಿರುವ ಶಿಕ್ಷಕರನ್ನು ಸನ್ಮಾನಿಸಲಾಯಿತು. ಜಿಪಂ ಸಿಇಒ ಭೋಯರ್‌ ಹರ್ಷಲ್‌ ನಾರಾಯಣ ರಾವ್‌, ಜಿಪಂ ಅಧ್ಯಕ್ಷೆ ಎಂ.ಅಶ್ವಿ‌ನಿ, ಜಿಪಂ ಉಪಾಧ್ಯಕ್ಷೆ ಶಶಿಕಲಾ ಮಾತನಾಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಬಿ.ಶಾಂತಮೂರ್ತಿ, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್‌, ಸದಸ್ಯ ಕೆರೆಹಳ್ಳಿ ನವೀನ್‌, ತಾಪಂ ಉಪಾಧ್ಯಕ್ಷ ಕೆ. ರವೀಶ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಟಿ. ಜವರೇಗೌಡ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next