ಯಾದಗಿರಿ: ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಸುಸಂಸ್ಕೃತ ಸಮಾಜ ಮತ್ತು ಸದೃಢ ದೇಶ ನಿರ್ಮಾಣ ಮಾಡಬೇಕು ಎಂದು ಜಿಲ್ಲಾಪಂಚಾಯತಿ ಅಧ್ಯಕ್ಷ ಬಸನಗೌಡ ಪಾಟೀಲ ಯಡಿಯಾಪುರ ಹೇಳಿದರು.
ಜಿಲ್ಲಾ ಪಂಚಾಯತ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಮೆಥೋಡಿಸ್ಟ್ ಚರ್ಚ್ ಕೆ.ಎನ್. ಎಚ್. ಹಾಲ್‌ನಲ್ಲಿ ನಡೆದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾಜದ ಬೆಳವಣಿಗೆಗೆ ಶಿಕ್ಷಕರ ಸೇವೆ ಅಪಾರವಾಗಿದೆ. ಸಮಾಜದ ಒಳಿತಿಗೆ ನಾವೆಲ್ಲರೂ ಕೈ ಜೋಡಿಸಬೇಕು. ಪ್ರಶಸ್ತಿ ಶಿಕ್ಷಕರ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದ್ದು ದೇಶವನ್ನು ಮತ್ತಷ್ಟು ಸುಭದ್ರ ಮತ್ತು ವಿವಿಧ ಕ್ಷೇತ್ರದಲ್ಲಿ ಗಣನೀಯವಾಗಿ ಸಾಧನೆ ಮಾಡಲು ಮಕ್ಕಳಿಗೆ ಉತ್ತಮ ಬೋಧನೆ ಮಾಡಿ ಪ್ರೋತ್ಸಾಹಿಸುವುದು ಶಿಕ್ಷಕರ ಕರ್ತವ್ಯವಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್. ಮಾತನಾಡಿ, ಗುರು ನಿರಂತರವಾಗಿ ಓದುಗನಾಗಿರಬೇಕು ಅಂದಾಗ ಮಾತ್ರ ಶಿಷ್ಯರೂ ನಿರಂತರ ಓದುಗರಾಗಿರುತ್ತಾರೆ. ಶಿಷ್ಯರ ಮುಂದಿನ ಭವಿಷ್ಯ ರೂಪಿಸಿ, ಅಮೂಲ್ಯ ರತ್ನವನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಗುರು ತಪ್ಪಿದರೆ ಸಮಾಜ ಹಾಳಾಗುತ್ತದೆ.ವಿದ್ಯಾರ್ಥಿಗಳಿಗೆ ದೃಢ ನಿಶ್ಚಿತ, ಆತ್ಮ ವಿಶ್ವಾಸ, ಸ್ವಾವಲಂಬಿಯಾಗಿ ಬದುಕಲು ಕಲಿಸಬೇಕು ಎಂದರು.
ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗಪ್ಪ ಪುಟಗಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸಿಇಒ ಶಿಲ್ಪಾ ಶರ್ಮಾ, ಡಿಡಿಪಿಐ ಶ್ರೀನಿವಾಸರಡ್ಡಿ, ಡಯಟ್ ಕಾಲೇಜಿನ ಪ್ರಾಂಶುಪಾಲ ನಾಗರತ್ನ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹಿಪಾಲ ರಡ್ಡಿ ಪಾಟೀಲ, ಶಿಕ್ಷಣಾ ಧಿಕಾರಿಚಂದ್ರಕಾಂತರಡ್ಡಿ, ಹಳ್ಳೆಪ್ಪ ಸೇರಿದಂತೆ ವಿವಿಧ ಶಾಲಾ ಮುಖ್ಯಗುರುಗಳು, ಶಿಕ್ಷಕರು ಹಾಜರಿದ್ದರು. ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಸಂಗೀತ ಶಿಕ್ಷಕ ಶರಣಬಸವ ವಠಾರ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಮಲ್ಲಿಕಾರ್ಜುನ ವಂದಿಸಿದರು.
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ: ಸುರಪುರ ತಾಲೂಕಿನ ಹೊಸ ಸಿದ್ದಾಪುರ ಸ.ಕಿ.ಪ್ರಾ. ಶಾಲೆಯ ಸುರೇಶ, ಯಾದಗಿರಿ ತಾಲೂಕಿನ ವರ್ಕನಳ್ಳಿ ಸ.ಉರ್ದು ಕಿ.ಪ್ರಾ. ಶಾಲೆಯ ಖಮರುನ್ನಿಸಾ ಬೇಗಂ, ಯಾದಗಿರಿ ತಾಲೂಕಿನ ಬಂಗಾರಮ್ಮನಗುಟ ಸ.ಕಿ.ಪ್ರಾ. ಶಾಲೆಯ ಲಲಿತಮ್ಮ, ಸುರಪುರ ತಾಲೂಕಿನ ಯಾಳಗಿ ಸ.ಮಾ.ಪ್ರಾ. ಶಾಲೆಯ ಸಿದ್ಧಪ್ಪ ಧನಗೊಂಡ, ಖುರೇಶ ಮೊಹಲ್ಲಾ ಸ.ಹಿ.ಪ್ರಾ. ಶಾಲೆಯ ಸ್ಯಾಮುಯಲ್, ಶಹಾಪುರ ತಾಲೂಕಿನ ಬುದುನೂರು ಸ.ಹಿ.ಪ್ರಾ. ಶಾಲೆಯ ರಾಮಚಂದ್ರ, ಯಾದಗಿರಿ ತಾಲೂಕಿನ ಕಂದಕೂರ ಸ.ಮಾ.ಪ್ರಾ. ಶಾಲೆಯ ಸಾವಿತ್ರಿ, ಸುರಪುರ ತಾಲೂಕಿನ ಹುಣಸಗಿ ಬಾಲಕಿಯರ. ಸ .ಪ್ರೌ.ಶಾಲೆಯ ದೈಹಿಕ ಶಿಕ್ಷಕ ನಾಗನಗೌಡ, ಹಗರಟಗಿ ಸ.ಪ್ರೌ.ಶಾಲೆಯ ಶಿವಲಿಂಗಪ್ಪ ಎಸ್. ಮಾರನಾಳ, ಶಹಾಪುರ ತಾಲೂಕಿನ ಉರ್ದು ನಗರ ಸ.ಪ್ರೌ.ಶಾಲೆಯ ನವೀದ್ ಅಂಜುಮ, ಶಿರವಾಳ ಸ.ಪ್ರೌ. ಶಾಲೆಯ ಅನುಪಮ, ಯಾದಗಿರಿ ತಾಲೂಕಿನ ಹೊನಗೇರಾ ಸ.ಪ್ರೌ. ಶಾಲೆಯ ಮಹಾವೀರ ಬಿ.ಬಂಬಾಡಿ. ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಕೋವಿಡ್ ವಾರಿಯರ್ ಆಗಿ ಕಾರ್ಯನಿರ್ವಹಿಸಿದ ಸ್ಕೌಟ್ಸ್ ಮತ್ತು ಗೈಡ್ಸ್‌ಗಳನ್ನು ಸನ್ಮಾನಿಸಲಾಯಿತು.