Advertisement

ಶಿಕ್ಷಕರ ದಿನಾಚರಣೆ: ಮನದಲ್ಲಿ ಅಚ್ಚಾಗಿ ಬಿಡುವ ಗುರು ಎಂಬ ದೇವಮುದ್ರೆ

04:49 PM Sep 05, 2022 | Team Udayavani |

ಬಾಲ್ಯವೇ ಹಾಗೆ. ಯಾವುದೇ ಚಿಂತೆಗಳಿಲ್ಲದೆ ಆಟ ಪಾಠಗಳಲ್ಲಿ ನಿರಾಂತಕವಾಗಿ ಕಳೆಯುವ ಮತ್ತೆಂದೂ ತಿರುಗಿಬಾರದ ಸಮಯಗಳಲ್ಲೊಂದಾಗಿರುತ್ತದೆ. ಮಕ್ಕಳಲ್ಲಿನ ಮುಗ್ಧತೆ ನಮ್ಮಲ್ಲಿ ಕೂಡ ಬಾಲ್ಯವನ್ನು ಮರಳಿ ಪಡೆಯುವ ಅಥವಾ ಪುನಃ ಅನುಭವಿಸುವ ಆಸೆಯನ್ನೊಮ್ಮೆ ಹುಟ್ಟಿಸದೆ ಇರದು. ಅಂತಹ ಬಾಲ್ಯವನ್ನು ದಾಟಿ ಬಂದ ನಾವು ನಮ್ಮ ಧಾವಂತದ ಜೀವನದಲ್ಲಿ ಮುಳುಗಿಯೋ ಅಥವಾ ಕಳೆದೋ ಹೋಗಿರುತ್ತೇವೆ. ಮಸ್ತಕದ ಮೂಲೆಯಲ್ಲೆಲ್ಲೋ ಅಡಗಿ ಮರೆಯಾಗಿ ಕುಳಿತ ಬಾಲ್ಯದ ನೆನಪುಗಳನ್ನು ನೆನಪಿಸಿಕೊಳ್ಳುವ ಪ್ರಯತ್ನ ನಡೆಸಲೂ ಕೂಡ ಸಮಯವಿರದಂತಹ ಯಾಂತ್ರಿಕ ಜೀವನವನ್ನು ನಡೆಸುತ್ತಿರುತ್ತೇವೆ. ಕೆಲವೊಮ್ಮೆ ನೆನಪಿಸಿಕೊಳ್ಳಲೇಬೇಕೆಂಬ ಹಟಕ್ಕೆ ಬಿದ್ದಾಗ ಕೆಲವು ಸಂಗತಿಗಳು ನೆನಪಿಗೆ ಬರುತ್ತವೆಯಷ್ಟೆ.

Advertisement

ಬಾಲ್ಯದ ವಿವಿಧ ಹಂತಗಳಲ್ಲಿ ಸಾಮಾನ್ಯವಾಗಿ ಕೆಲವು ವ್ಯಕ್ತಿಗಳ ಅಥವಾ ಪರಿಸರದ ಪ್ರಭಾವಕ್ಕೆ ಒಳಗಾಗಿರುತ್ತೇವೆ. ಮುಗ್ಧ ಮನಸ್ಸುಗಳ ಮೇಲೆ ಪ್ರಭಾವ ಬೀರುವ ಅಂಶಗಳು ಒಳ್ಳೆಯದೂ ಆಗಿರಬಹುದು ಅಥವಾ ಕೆಟ್ಟದೂ ಕೂಡ ಆಗಿರಬಹುದು. ಆದರೆ ಆ ಪ್ರಭಾವ ನಮ್ಮ ಭವಿಷ್ಯವನ್ನೂ ಕೂಡ ನಿರ್ಧರಿಸುವ ಅಂಶಗಳಲ್ಲಿ ಒಂದಾಗಬಹುದು. ಅಂತಹ ಒಂದು ಸಂಗತಿ ನನ್ನ ನೆನಪಿನಂಗಳದಿಂದ ಹುಡುಕಿ ಹೆಕ್ಕಿ ತಂದಿದ್ದೇನೆ.

“Student life is golden life” ಎಂಬ ಮಾತು ಅಕ್ಷರಶಹ ಸತ್ಯವಾದುದು. ಮತ್ತೆ ಮರಳಲು ಬಯಸಿದರೂ ದೊರೆಯದ ಬಾಳಿನ ಆನಂದದ ಹಂತವದು. ಆ ನೆನಪುಗಳನ್ನು ಹಂಚಿಕೊಳ್ಳಲು ತೊಡಗಿದರೆ ಹಲವು ದಿನಗಳೇ ಬೇಕಾಗಬಹುದು. ಅದರಲ್ಲಿಯೂ ಹೈಸ್ಕೂಲ್ ದಿನಗಳು ನಮ್ಮಲ್ಲಿ ಹೆಚ್ಚಿನ ಸಮಯದವರೆಗೆ ನೆನಪಿನಲ್ಲುಳಿಯುವಂತದ್ದು. ನಮ್ಮ ಬೌಧ್ಧಿಕ ಬೆಳವಣಿಗೆಯು ವಿಕಸನಗೊಳ್ಳಲು ಆರಂಭಿಸುವ ಹಂತವದು. ಮಾನಸಿಕ ಮತ್ತು ದೈಹಿಕ  ಬದಲಾವಣೆಗಳಿಗೊಳ ಪಡುವ ಕಾಲಘಟ್ಟವಾದ್ದರಿಂದ ಮಗುವಿನ ಸುತ್ತಮುತ್ತಲಿನ ಪರಿಸರ ಮತ್ತು ವ್ಯಕ್ತಿಗಳು ಬಹಳವಾಗಿ ಪ್ರಭಾವವನ್ನು ಬೀರುವಂತಹ ಹಂತವಾಗಿರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡ ಶಿಕ್ಷಕರನ್ನೇ ಅನುಕರಿಸುವ ಮತ್ತು ರೋಲ್ ಮಾಡೆಲ್ಲನ್ನಾಗಿ ಮಾಡಿಕೊಳ್ಳಲಾರಂಭಿಸಿರುತ್ತಾರೆ. ಅಂದರೆ ಈ ಸಮಯದಲ್ಲಿ ವಿದ್ಯಾರ್ಥಿಗಳು ಹೆಚ್ಚು ಪ್ರಭಾವಕ್ಕೊಳಗಾಗುವುದು ಶಿಕ್ಷಕರಿಂದ.

ಎಂಟನೇ ತರಗತಿಯಲ್ಲಿ ಉತ್ತೀರ್ಣರಾದ ನಾವುಗಳು ಒಂಬತ್ತನೆಯ ತರಗತಿಗೆ ಬಡ್ತಿಹೊಂದಿದ ನಂತರದ ಮೊದಲ ದಿನದ ಶಾಲೆಯಾಗಿತ್ತು. ಹಿಂದಿನ ವರ್ಷ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಜ್ಞಾನ ಶಿಕ್ಷಕರು ನಿವೃತ್ತರಾಗಿ ನಮ್ಮ ಶಾಲೆಯ ವಿಜ್ಞಾನ ಶಿಕ್ಷಕರ ಹುದ್ದೆ ಖಾಲಿಯಿದ್ದ ಕಾರಣ ಶಾಲೆಯ ಮೊದಲ ದಿನವೇ ಶಿಕ್ಷಕರ ಸಂದರ್ಶನವನ್ನೇರ್ಪಡಿಸಲಾಗಿತ್ತು. ಸಂದರ್ಶನಗಳೆಂದರೇನು ಅಥವಾ ನೇಮಕಾತಿಯ ತಲೆಬುಡ ಅರಿಯದ ನಾವುಗಳು ಒಬ್ಬೊಬ್ಬರೇ ಶಿಕ್ಷಕರು ಶಾಲೆಗೆ ಪ್ರವೇಶಿಸುತ್ತಿದ್ದಂತೆ ಇವರೇ ಇರಬಹುದು ನಮ್ಮ ಹೊಸ ಟೀಚರ್ ಎಂಬ ಊಹೆಗಳನ್ನು ಮಾಡಲು ಆರಂಭಿಸಿದ್ದೆವು. ಅಂಥದ್ದರಲ್ಲಿ ಅದೃಷ್ಟವಶಾತ್ ಸಂದರ್ಶನಕ್ಕೆ ಬಂದಂತಹ ಶಿಕ್ಷಕರು ನಮ್ಮ ತರಗತಿಗೇ ಮಾದರಿ ಪಾಠವನ್ನು (model lesson) ಕೊಡುವುದೆಂದು ತೀರ್ಮಾನವಾಗಿತ್ತು. ಒಬ್ಬೊಬ್ಬರೇ ಬಂದು ತಮ್ಮ ಮಾದರಿ ಪಾಠವನ್ನು ಮಂಡಿಸುತ್ತಾ ಬಂದಂತೆ ಇದು ಯಾವಾಗ ಮುಗಿಯುವುದೋ? ಎಂಬಷ್ಟು ನಮ್ಮ ತಾಳ್ಮೆ ಮೀರಿತ್ತು.

ಸಿನಿಮಾಗಳಲ್ಲಿ ಹೀರೋವಿನ ಧಮಕೆದಾರ್ ಎಂಟ್ರಿ ಆದಂತೆ ಕೊನೆಯಲ್ಲಿ ಬಂದಂತಹ ಶಿಕ್ಷಕರು ಪಾಠ ಶುರುಮಾಡುವ ಮೊದಲೇ ನಾವೆಲ್ಲಾ ಅವರು ದಿಟ್ಟ ಮತ್ತು ವಿಶ್ವಾಸದ ನಿಲುವಿಗೆ ಪ್ರಭಾವಿತರಾಗಿದ್ದೆವು. ಅವರ ಪಾಠದಲ್ಲಿ ಅವರ ವಿಷಯ ಜ್ಞಾನದ ಹಿಡಿತ, ಬಳಸುತ್ತಿದ್ದ ಪದಗಳು, ಅನುಸರಿಸುತ್ತಿದ್ದ ಪಾಠವಿಧಾನಗಳು ನಮ್ಮಲ್ಲಿ ನಮ್ಮ ವಿಜ್ಞಾನ ಶಿಕ್ಷಕರು ಅವರೇ ಆಗಬೇಕೆಂಬ ಬಯಕೆಯನ್ನು ಹುಟ್ಟಿಹಾಕಿತ್ತು. ಅಂತೂ ಎಲ್ಲರ ಮಾದರಿ ಪಾಠಗಳು ಮುಗಿದಿದ್ದವು. ಇನ್ನು ನಾವೆಲ್ಲರೂ ಕೂಡ ನಮಗೆ ಇವರಲ್ಲಿ ಟೀಚರ್ ಆಗಿ ಬರುವವರು ಯಾರಿರಬಹುದು? ಎಂಬ ಕಾತರದಿಂದ ಕಾಯುತ್ತಾ ಕುಳಿತಿದ್ದೆವು. ನಿಮಗೆ ಯಾರ ಪಾಠ ಹಿಡಿಸಿತೆಂಬ ಪ್ರಶ್ನೆಯನ್ನು ಮುಖ್ಯೋಪಧ್ಯಾಯರಿಂದ ನಿರೀಕ್ಷಿಸುತ್ತಾ ಕುಳಿತಿದ್ದೆವು. ಆದರೆ ನಮ್ಮ ಆಸೆಗೆ ತಣ್ಣೀರೆರಚಿದಂತೆ ಯಾರೊಬ್ಬರೂ ಕೂಡ ನಮ್ಮ ಅಭಿಪ್ರಾಯವನ್ನು ಕೇಳಲೇ ಇಲ್ಲ. ನಮ್ಮೆಲ್ಲರ ಆಶಯ ಕೊನೆಯಲ್ಲಿ ಪಾಠವನ್ನು ಕೊಟ್ಟ ಶಿಕ್ಷಕರೇ ಆಯ್ಕೆಯಾಗಲೆಂಬುದಾಗಿತ್ತು.

Advertisement

ಮಾರನೆಯ ದಿನ ನಮ್ಮೆಲ್ಲರ ಕಣ್ಣುಗಳು ಕೂಡ ಹೊಸ ಟೀಚರನ್ನು ಹುಡುಕ ಹತ್ತಿತ್ತು. ನಮ್ಮೆಲ್ಲರ ಆಸೆ ಮತ್ತು ಹಾರೈಕೆಯಂತೆ ಅದೇ ಶಿಕ್ಷಕರೇ ನಮ್ಮ ಶಾಲೆಗೆ ಆಯ್ಕೆಯಾಗಿದ್ದರು. ಅಂದು ಆದ ಸಂತಸ ಅಷ್ಟಿಷ್ಟಲ್ಲ. ವಿಜ್ಞಾನವನ್ನು ತಮ್ಮ ಆಕರ್ಷಕ ಪಾಠವೈಖರಿಯಿಂದ ನಮಗೆ ತಿಳಿಯಪಡಿಸುತ್ತಿದ್ದ ಆ ಟೀಚರ್ ನಾನು ಮುಂದೆ ಪಿಯುಸಿ ಯಲ್ಲಿ ವಿಜ್ಞಾನವನ್ನೇ ವಿಷಯವಾಗಿ ಆಯ್ಕೆ ಮಾಡಿಕೊಂಡು ಗಣಿತ ಮತ್ತು ವಿಜ್ಞಾನ ಶಿಕ್ಷಕಿಯಾಗುವಂತೆ ಪ್ರೇರೇಪಿಸುವಷ್ಟು ಪ್ರಭಾವವನ್ನು ಬೀರಿದ್ದರು. ವಿಭಿನ್ನವಾದ ಚಟುವಟಿಕೆಗಳನ್ನು ಮಾಡಿಸುವುದರ ಮೂಲಕ, ಲಭ್ಯ ಉಪಕರಣಗಳನ್ನು ಬಳಸಿಕೊಂಡು ಹೊಸ ಬಗೆಯ ಪಾಠ ನಿರೂಪಣಾ ಶೈಲಿಯ ಮೂಲಕ ವಿದ್ಯಾರ್ಥಿಗಳನ್ನು ತಮ್ಮತ್ತ ಆಕರ್ಷಿಸುತ್ತಿದ್ದ ಆ ಟೀಚರ್ ನನಗೆಂದಿಗೂ ಚಿರಸ್ಮರಣೀಯರು. ನಾನು ಕಲಿತಿದ್ದು ಗ್ರಾಮೀಣ ಪ್ರದೇಶದಲ್ಲಿದ್ದ ಸರ್ಕಾರದ ಅನುದಾನಿತ ಶಾಲೆಯಾಗಿದ್ದರೂ ಕೂಡ ಅಲ್ಲಿನ ಶಿಕ್ಷಣ ಇಂದಿನ ಯಾವ ಇಂಗ್ಲಿಷ್ ಮೀಡಿಯಮ್ ಶಾಲೆಗಳಿಗೆ ಯಾವುದಕ್ಕೂ ಕಡಿಮೆಯಿರಲಿಲ್ಲ. ಅಂತಹ ಶಾಲೆಯ ಮತ್ತು ಅಂತಹ ಶಿಕ್ಷಕರ ವಿದ್ಯಾರ್ಥಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ವಿದ್ಯಾರ್ಥಿಗಳಲ್ಲಿ ನಾನೂ ಕೂಡ ಒಬ್ಬಳು.

ಕಣ್ಣಿಗೆ ಕಾಣುವ ದೇವರೆಂದರೆ ಒಂದು ತಾಯಿ ಇನ್ನೊಂದು ವಿದ್ಯೆಕಲಿಸಿದ ಗುರುವಂತೆ. ಅಜ್ಞಾನದ ಕತ್ತಲನ್ನು ದೂರಮಾಡಿ ಜ್ಞಾನದ ದೀವಿಗೆಯ ಹಚ್ಚುವುದರ ಜೊತೆಗೆ ಬದುಕಿನ ಅಂಗಳಕ್ಕೆ ಕಾಲಿಡುವ ನಮಗೆ ಮಾರ್ಗದರ್ಶಕರಾಗಿಯೂ ನಮ್ಮ ತಪ್ಪುಗಳನ್ನು ತಿದ್ದಿ ನಡೆಸುವ ಶಕ್ತಿಯಾಗಿಯೂ ನಮ್ಮಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತರುವ ಮೂರ್ತಿಯಾಗಿಯೂ ಎಷ್ಟೋ ಮಕ್ಕಳ ಬಾಳನ್ನು ಬೆಳಗಿಸಿದ ಕೀರ್ತಿ ಶಿಕ್ಷಕನಾದವನಿಗೆ ಸಿಗಬೇಕಾದಂತಹುದೇ ಆಗಿದೆ. ನಮ್ಮ ಮನಸ್ಸಿನಲ್ಲಿ ಒಳ್ಳೆಯ ನಡೆನುಡಿಗಳನ್ನು ಅಚ್ಚೊತ್ತುವ ದೇವಮುದ್ರೆಯೂ ನಮ್ಮ ಶಿಕ್ಷಕರು ಎಂಬುದು ನಿಸ್ಸಂಶಯವಾದುದು.

“A teacher who establishes rapport with the taught, becomes one with them, learns more from them than he teaches them”
-Mahatma Gandhi

*ಪ್ರಭಾ ಭಟ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next