ಬಾಗಲಕೋಟೆ: ಅಪರೂಪದ ರಾಜಕಾರಣಿ, ಅತ್ಯುತ್ತಮ ವ್ಯಕ್ತಿತ್ವವುಳ್ಳ ತತ್ವಜ್ಞಾನಿ, ರಾಜನೀತಿಜ್ಞ, ಶಿಕ್ಷಕ, ಪ್ರಾದ್ಯಾಪಕರು ಹಾಗೂ ಮೇರು ವ್ಯಕ್ತಿತ್ವದ ಮಹಾಪುರುಷ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನವನಗರದ ಡಾ|ಬಿ.ಆರ್.ಅಂಬೇಡ್ಕರ ಭವನದಲ್ಲಿಂದು ಜಿಲ್ಲಾಡಳಿತ, ಜಿಪಂ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದರು. ಅವರ ಧ್ಯೇಯ ವಾಕ್ಯ ಅನ್ನ-ಹಸಿವನ್ನು ನೀಗಿಸಿದರೆ, ಅಕ್ಷರ ಅಜ್ಞಾನವನ್ನು ನೀಗಿಸುವುದಾಗಿತ್ತು ಎಂದರು.
ದೇಶದಲ್ಲಿ ಕೋವಿಡ್ ಭೀತಿಯ ಮಧ್ಯೆ ನೆರೆ,ಪ್ರವಾಹದಿಂದಾಗಿ ಸಾಕಷ್ಟು ಬೆಳೆ, ಆಸ್ತಿ ಹಾನಿಗೀಡಾಗಿವೆ. ಆರ್ಥಿಕವಾಗಿ ತೊಂದರೆಯಾಗಿದ್ದು, ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯವಾಗಿಲ್ಲ ಎಂದರು. ಜಿಲ್ಲೆಯಲ್ಲಿ ನೀರಿಕ್ಷಿತ ಮಟ್ಟದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಬರಲಿಲ್ಲ. ಇದಕ್ಕೆಲ್ಲ ಶಿಕ್ಷಕರು, ಅಧಿಕಾರಿಗಳು ಹೊಣೆಗಾರರಾಗಿದ್ದು, ಅದನ್ನು ಅರಿತು ಕೆಲಸ ಮಾಡಬೇಕು. ಜಿಲ್ಲೆಯ ಬೀಳಗಿ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿ ಆನಂದ ಹೊಸಮನಿ 625ಕ್ಕೆ 623 ಅಂಕ ಪಡೆದು ರಾಜ್ಯಕ್ಕೆ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ಮುರಾರ್ಜಿ ವಸತಿ ಶಾಲೆಗಳು ಫಲಿತಾಂಶದಲ್ಲಿ ರಾಜ್ಯದ 14 ಜಿಲ್ಲೆಗಳಲ್ಲಿ ಮೊದಲನೇ ಸ್ಥಾನ, 19 ಜಿಲ್ಲೆಗಳಲ್ಲಿ 2ನೇ ಸ್ಥಾನ, 16 ಜಿಲ್ಲೆಗಳಲ್ಲಿ 3ನೇ ಸ್ಥಾನ ಪಡೆದಕೊಂಡಿದೆ. ರಾಜ್ಯದಲ್ಲಿ ಸರಾಸರಿ ಶೇ.61 ಇದೆ. 158 ವಸತಿ ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿರುತ್ತವೆ ಎಂದು ಹೇಳಿದರು.
ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಶಿಕ್ಷಣದಲ್ಲಿ ದೇಶದ ಭವಿಷ್ಯ ಅಡಗಿದ್ದು, ಶಿಕ್ಷಣ ನೀಡುವ ಶಿಕ್ಷಕರಿಗೆ ಗೌರವ ಸಲ್ಲಿಸುವ ಸಲುವಾಗಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಸಮಾನ ಅವಕಾಶ ದೊರಕಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿದೆ. ಗುಣಾತ್ಮಕ ಶಿಕ್ಷಣ ನೀಡಿ ಮಕ್ಕಳನ್ನು ಶಿಕ್ಷಣವಂತರು ಹಾಗೂ ಬುದ್ದಿವಂತರನ್ನಾಗಿ ಮಾಡಬೇಕು ಎಂದರು.
ವಿಧಾನಪರಿಷತ್ ಸದಸ್ಯ ಹನಮಂತ ನಿರಾಣಿ, ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ|ವೀರಣ್ಣ ಚರಂತಿಮಠ ಮಾತನಾಡಿದರು. ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡ, ಜಿ.ಪಂ ಸದಸ್ಯೆ ಹನಮವ್ವ ಕರಿಹೊಳೆ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ.ರಾಜೇಂದ್ರ, ಜಿಪಂ ಸಿಇಒ ಟಿ.ಭೂಬಾಲನ, ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ, ಸಾರ್ವಜನಿಕ ಶಿಕ್ಷಣಇಲಾಖೆಯ ಉಪನಿರ್ದೇಶಕ ಎಸ್.ಎಸ್. ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.