ಕೋವಿಡ್ ಎನ್ನುವ ಮಹಾಮಾರಿ ವಿಶ್ವದ ಎಲ್ಲಾ ರಂಗಗಳಿಗೆ ಹೊಡೆತ ನೀಡುವುದರ ಜತೆಗೆ ಕೆಲವೊಂದು ಬದಲಾವಣೆಗಳನ್ನು ತಂದಿದೆ. ಅದೇ ರೀತಿ ಈ ಸಂಕಷ್ಟದಿಂದಾಗಿ ಶಾಲೆ, ಕಾಲೇಜುಗಳಲ್ಲಿ ನಾಲ್ಕು ಗೋಡೆಗಳ ನಡುವೆ ನಡೆಯುತ್ತಿದ್ದ ತರಗತಿಗಳು ಆನ್ ಲೈನ್ ಕ್ಲಾಸ್ ಗಳ ಹೆಸರಲ್ಲಿ ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್ ಪರದೆಗಳ ಸಹಾಯದಿಂದ ಮನೆಯಲ್ಲೇ ಕುಳಿತು ನಡೆಯುವಂತಾಗಿದೆ. ಹೀಗಾಗಿ ಮಕ್ಕಳ ಜತೆಗೆ ಶಿಕ್ಷಕರಾದ ನಮಗೂ ಇದೊಂದು ಹೊಸ ಅನುಭವ. ಚಾಕ್ ಪೀಸ್ – ಬ್ಲ್ಯಾಕ್ ಬೋರ್ಡ್ ಬಿಟ್ಟು ಈ ಹೊಸ ಪದ್ಧತಿ ಗೆ ಒಗ್ಗಿಕೊಳ್ಳುವುದು ನಿಜಕ್ಕೂ ಕಷ್ಟ ಮೊದ – ಮೊದಲು ಕಷ್ಟವಾಗಿತ್ತು. ಎಲ್ಲೋ ಮನೆಯಲ್ಲಿ ಇರುವ ವಿದ್ಯಾರ್ಥಿಗಳಿಗೆ ತಾವು ಮಾಡುವ ಪಾಠಗಳು ಅರ್ಥವಾಗುತ್ತಾ ಅದಕ್ಕೆ ಪೂರಕ ವಾತಾವರಣ ಸಿಗಬಹುದ ಎಂಬ ಗೊಂದಲ ಹಾಗೂ ಹೋಮ್ ವರ್ಕ್‌ಗಳನ್ನು ಮಕ್ಕಳು ಮಾಡ್ತಾರಾ? ನೋಟ್ಸ್ ಎಲ್ಲರೂ ಕೊಟ್ಟ ಸಮಯದಲ್ಲಿ ಬರೆಯುತ್ತಾರಾ ? ಎಂಬ ನೂರಾರು ಯೋಚನೆ ನಮ್ಮಲ್ಲಿತ್ತು.
ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಮೊಬೈಲ್ ನೆಟ್ ವರ್ಕ್ ಸಮಸ್ಯೆಯಿಂದ ಪಾಠಗಳನ್ನು ಕೇಳಿಸಿಕೊಳ್ಳಲಾರದ ಪರಿಸ್ಥಿತಿ ಬಂದಾಗ ನಿರಾಸೆಯಾಗುತಿತ್ತು.
ಮೊಬೈಲ್ ,ಕಂಪ್ಯೂಟರ್ ಗಳ ಮೂಲಕ ತಿಳಿಯದ ಆ್ಯಪ್ ಗಳನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಪಿ.ಪಿ.ಟಿ, ಆ್ಯನಿಮೇಶನ್ , ವಾಯ್ಸ್ ರೆಕಾರ್ಡಿಂಗ್ ಹೀಗೆ ಏನೇನೋ ಕಸರತ್ತು ಗಳನ್ನು ಮಾಡುತ್ತಾ ವಿಷಯ ವಸ್ತುವನ್ನು ಸರಿಯಾಗಿ ಮಕ್ಕಳಿಗೆ ಮನದಟ್ಟು ಮಾಡಲು ಪಾಠದೆಡೆಗೆ ಅವರ ಆಸಕ್ತಿಯನ್ನು ಹಿಡಿದಿಡಲು ನೂರಾರು ಸರ್ಕಸ್ ಗಳನ್ನು ಮಾಡಿ ಇದೀಗ ಒಂದು ಹಂತದಲ್ಲಿ ಯಶಸ್ವಿಯಾಗಿದ್ದೇವೆ. ಮಕ್ಕಳೂ ನಮ್ಮ ಜತೆ ಹೊಂದಿಕೊಂಡು ಆಸಕ್ತಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ತರಗತಿಯಂತೆ ವಿದ್ಯಾರ್ಥಿಗಳೊಂದಿಗೆ ನೇರ ಭಾವನಾತ್ಮಕ ಸಂಬಂಧ ಅವರ ಪ್ರತಿಕ್ರಿಯೆ, ಪ್ರಶ್ನೆಗಳು, ನಗು, ಹರಟೆ, ಗದರುವಿಕೆ ಯಾವುದೂ ಇಲ್ಲದೆ ವಿದ್ಯಾ ದೇಗುಲ ದೇವರಿಲ್ಲದೆ ಗುಡಿಯಂತೆ ಕಳಾಹೀನವಾಗಿದೆ ಎನ್ನುವುದು ಹೊರತು ಪಡಿಸಿದರೆ ಮತ್ತೆಲ್ಲವೂ ಒಕೆ.
ಮಕ್ಕಳು ಇದೀಗ ಪರಿಸ್ಥಿತಿಗೆ ಒಗ್ಗಿಕೊಳ್ಳುತ್ತಿದ್ದಾರೆ ಹಾಗೂ ಅವರಿಗೆ ನಮ್ಮ ವಾಟ್ಸ್ ಆಪ್ ನಂಬರ್ ಗಳು ಸಿಕ್ಕಿದ್ದರಿಂದ ನಾವು ಹಾಕುವ ಡಿ.ಪಿ, ಸ್ಟೇಟಸ್ ಗಳಿಗೆ ಕಾಮೆಂಟ್ ಮಾಡುವುದು, ನಮ್ಮ ಹುಟ್ಟು ಹಬ್ಬಇನ್ನಿತರ ವಿಶೇಷ ದಿನಗಳಿಗೆ ವಿಶ್ ಮಾಡುವುದು, ಅವರ ಸಂತಸದ ಕ್ಷಣಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದು ತುಂಬಾ ಖುಷಿ ಕೊಡುತ್ತೆ. ಹೀಗೆ ಸಮಸ್ಯೆ ಗಳ ನಡುವೆಯೂ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ಶಿಕ್ಷಣ ಒದಗಿಸುವಲ್ಲಿ ನಮ್ಮ ಶಿಕ್ಷಕ ವರ್ಗ ಮುಂದಿದೆ. ಎಷ್ಟೇ ಬೇಸರಿಕೆಗಳಿದ್ದರೂ ಅದನ್ನೆಲ್ಲ ಬದಿಗಿರಿಸಿಕೊಂಡು ಹೊಸ ಸಾಧ್ಯತೆಗಳ ಆಸರಿಕೆಯನ್ನು ಜೊತೆಗಿರಿಸಿಕೊಂಡು ಮುಂದುವರಿಯುತ್ತಿದ್ದೇವೆ ಎನ್ನುವುದೇ ಸಮಾಧಾನ.
– ಶ್ರೀಮತಿ ರಮಾ ಎಂ. ಕನ್ನಡ ಶಿಕ್ಷಕಿ, ನಿರ್ಮಲಾ ಆಂಗ್ಲಮಾಧ್ಯಮ ಶಾಲೆ, ಬ್ರಹ್ಮಾವರ