Advertisement

1995ರ ಆದೇಶ ಬದಲಿಗೆ ಬದ್ಧ

01:02 PM Jun 07, 2022 | Team Udayavani |

ಧಾರವಾಡ: ಕಾಂಗ್ರೆಸ್‌ ಅಭ್ಯರ್ಥಿ ಆಗಿರುವ ಬಸವರಾಜ ಗುರಿಕಾರ ಅವರನ್ನು ಆರಿಸಿ ತರುವ ಮೂಲಕ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಬೇಕು ಎಂಬ ಚರ್ಚೆ ಕ್ಷೇತ್ರ ವ್ಯಾಪ್ತಿಯಲ್ಲಿ ಕೇಳಿ ಬರುತ್ತಿದ್ದು, ಹೀಗಾಗಿ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಬೇಕು ಎಂದು ಮಾಜಿ ಸಚಿವ, ಶಾಸಕ ಆರ್‌.ವಿ.ದೇಶಪಾಂಡೆ ಹೇಳಿದರು.

Advertisement

ನಗರದ ಕೆ.ಇ.ಬೋರ್ಡ್‌ ಶಿಕ್ಷಣ ಸಂಸ್ಥೆಯಲ್ಲಿ ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ಗುರಿಕಾರ ಪರ ಹಮ್ಮಿಕೊಂಡಿದ್ದ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ತರಗತಿಯಲ್ಲಿ ಮಕ್ಕಳಿಗೆ ಏನು ಕಲಿಸಬೇಕು ಎಂಬುದನ್ನು ಸರ್ಕಾರ ನಿರ್ಧರಿಸಬಾರದು. ಆದರೆ ಆದರ್ಶ ನಾಗರಿಕರನ್ನಾಗಿ ಮಾಡಲು ಸರ್ಕಾರ ಸೂಕ್ತಅನುದಾನ ಒದಗಿಸಬೇಕು. ಎಳೆಯ ಮಕ್ಕಳನ್ನು ಪಕ್ಷದ ಸೇನಾನಿಗಳನ್ನಾಗಿ ಮಾಡಿ ಈಗಿನ ಸರ್ಕಾರ ಏನು ಮಾಡುತ್ತದೋ ತಿಳಿಯದು. ರಾಷ್ಟ್ರ, ನಾಡು, ಅಭಿವೃದ್ಧಿ ಹಾಗೂ ಮಕ್ಕಳ ಭವಿಷ್ಯ ಕುರಿತು ಚಿಂತಿಸಬೇಕಾದ ಸರ್ಕಾರ, ಕೇಸರಿಕರಣ ಕುರಿತು ಚಿಂತಿಸುವ ಅವಶ್ಯಕತೆಯಾದರೂ ಏನು? ಎಂದು ಪ್ರಶ್ನಿಸಿದರು.

50 ವರ್ಷಗಳ ರಾಜಕೀಯ ಜೀವನದಲ್ಲಿ ಎಂಟು ಮುಖ್ಯಮಂತ್ರಿಗಳೊಂದಿಗೆ ಕೆಲಸ ಮಾಡಿದ ಅನುಭವ ನನ್ನದು. ಜತೆಗೆ ವಿರೋಧ ಪಕ್ಷದಲ್ಲೂ ಕೆಲಸ ಮಾಡಿದ್ದೇನೆ. ಆದರೆ ಎಂದಿಗೂ ಯಾವ ಸರ್ಕಾರ ಅಥವಾ ಮುಖ್ಯಮಂತ್ರಿಯೂ ಶಿಕ್ಷಣ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಿದ್ದನ್ನು ನೋಡಿಲ್ಲ. ಆದರೆ, ಈಗಿನ ಸರ್ಕಾರವು ಪವಿತ್ರ ಶಿಕ್ಷಣ ರಂಗದಲ್ಲಿ ಮಾಡುತ್ತಿರುವ ರಾಜಕೀಯ ಹಸ್ತಕ್ಷೇಪದಿಂದ ಯಾವ ಗಂಡಾಂತರ ಕಾದಿದೆ ಎನ್ನುವುದು ಅಂದಾಜು ಮಾಡಲು ಸಾಧ್ಯವಿಲ್ಲ ಎಂದರು.

ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ಗುರಿಕಾರ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಅವುಗಳಿಗೆ ಪರಿಹಾರ ಒದಗಿಸಬೇಕಾದ ಕಾಲ ಸನ್ನಿಹಿತವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಾಕಷ್ಟು ತೊಂದರೆ ಇದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುದಾನಿತ ಸಂಸ್ಥೆಗಳು ರಾಜ್ಯದಲ್ಲಿ ಬಲಹೀನವಾಗಿದೆ. ಶಿಕ್ಷಕರ ಹೆಚ್ಚುವರಿ ನೆಪದಲ್ಲಿ ವರ್ಗಾವಣೆ ಮಾಡಲಾಗುತ್ತಿದೆ. 1995ರ ಆದೇಶದಲ್ಲಿ ಬದಲಾವಣೆ ಆಗಬೇಕಿದೆ. ಈಗಿನ ಚುನಾವಣೆಯಲ್ಲಿ ಆಯ್ಕೆ ಮಾಡಿದರೆ ಖಂಡಿತಾ ಈ ಆದೇಶದಲ್ಲಿ ಬದಲಾವಣೆ ಮಾಡಲು ನಾನು ಬದ್ಧ ಎಂದು ಭರವಸೆ ನೀಡಿದರು.

Advertisement

ಕಾಂಗ್ರೆಸ್‌ ಮುಖಂಡ ದೀಪಕ ಚಿಂಚೋರೆ ಮಾತನಾಡಿ, ಬಿಜೆಪಿ 75 ವರ್ಷ ಮೇಲ್ಪಟ್ಟವರಿಗೆ ಅವಕಾಶ ನೀಡಲ್ಲ ಎಂದೆಲ್ಲ ಹೇಳಿತ್ತು. ಆದರೀಗ ಏನು ಮಾಡಿದೆ ಎನ್ನುವುದು ತಿಳಿಯದಂತಾಘಿದೆ. ಅದಕ್ಕಾಗಿ ಮತದಾರ ಶಿಕ್ಷಕರೇ ಅವರಿಗೆ ಬುದ್ಧಿ ಕಲಿಸಬೇಕಿದೆ ಎಂದರು.

ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್‌. ನೀರಲಕೇರಿ ಮಾತನಾಡಿ, ಸುಮಾರು 130 ಪಿಯು ಕಾಲೇಜುಗಳನ್ನು ಹಿಂದೆ ಆರಂಭಿಸಲಾಯಿತು. ಆದರೆ, ಅಲ್ಲಿ ಎಷ್ಟು ಶಿಕ್ಷಕರಿದ್ದಾರೆ ಎನ್ನುವುದನ್ನು ಇಂದಿಗೂ ನೋಡಿಲ್ಲ. ಅದೇ ರೀತಿ ಪ್ರಥಮ ದರ್ಜೆ ಪದವಿ ಕಾಲೇಜು ಆರಂಭಿಸಿದರೆ ಅವುಗಳಿಗೆ ಪ್ರಾಂಶುಪಾಲರು ಇಲ್ಲದಂತಾಗಿದೆ. ಇದೇ ರೀತಿಯಾದರೆ ಮುಂದಿನ ದಿನಗಳಲ್ಲಿ ಶಿಕ್ಷಕರ ಪರಿಸ್ಥಿತಿ ಹದಗೆಡುತ್ತದೆ. ಅದಕ್ಕಾಗಿ ಶಿಕ್ಷಕ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಬದಲಾವಣೆ ಮಾಡಬೇಕು ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ, ಮುಖಂಡ ಇಸ್ಮಾಯಿಲ್‌ ತಮಟಗಾರ, ಸಂಸ್ಥೆ ಅಧ್ಯಕ್ಷ ಶ್ರೀಕಾಂತ ಪಾಟೀಲ, ಕಾರ್ಯದರ್ಶಿ ಡಿ.ಎಸ್‌.ರಾಜಪುರೋಹಿತ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next