Advertisement
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿನ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಈ ನಡುವೆ ಜಿಲ್ಲಾ ಕೇಂದ್ರ ಮಂಗಳೂರಿನಲ್ಲಿ ಜು. 13ರಿಂದ ಎಸೆಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯ ಆರಂಭವಾಗುತ್ತಿದೆ. ಆದರೆ ದೂರದ ಊರುಗಳಿಂದ ಬರಬೇಕಾದ ಶಿಕ್ಷಕರು ಕೋವಿಡ್ ಭೀತಿಯಿಂದಾಗಿ ಮೌಲ್ಯಮಾಪನಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಏಕೆಂದರೆ ಕೋವಿಡ್ ಕಾರಣದಿಂದಾಗಿ ಜಿಲ್ಲೆಯಲ್ಲಿ ಸರಕಾರಿ ಹಾಗೂ ಖಾಸಗಿ ಬಸ್‌ಗಳ ಸಂಚಾರ ವ್ಯವಸ್ಥೆ ಈಗ ಸಮರ್ಪಕವಾಗಿಲ್ಲ. ಅದರಲ್ಲಿಯೂ ಸ್ವಂತ ವಾಹನದ ವ್ಯವಸ್ಥೆ ಇಲ್ಲದ ಗ್ರಾಮೀಣ ಭಾಗದಿಂದ ಮಂಗಳೂರಿಗೆ ಬರಬೇಕಾದ ಶಿಕ್ಷಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಎಲ್ಲ ಕಾರಣಗಳಿಗೆ ತಾಲೂಕು ಕೇಂದ್ರಗಳಲ್ಲಿ ಈ ಬಾರಿ ಮೌಲ್ಯ ಮಾಪನಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ಶಿಕ್ಷಕರು ಆಗ್ರಹಿಸುತ್ತಿದ್ದಾರೆ.
Related Articles
ಶಿಕ್ಷಕರ ಸಮಸ್ಯೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಶಿಕ್ಷಣ ಸಚಿವ ಹಾಗೂ ಎಸೆಸೆಲ್ಸಿ ಪರೀಕ್ಷಾ ಮಂಡಳಿಯ ನಿರ್ದೇಶಕರ ಗಮನಕ್ಕೆ ತಂದಾಗ ಮೂಲ ಸೌಕರ್ಯಗಳನ್ನು ತಾಲೂಕು ಕೇಂದ್ರಗಳಲ್ಲಿ ವ್ಯವಸ್ಥೆಗೊಳಿಸಲು ಕನಿಷ್ಠ 20 ದಿನಗಳು ತಗಲುತ್ತವೆ. ಹಾಗಾಗಿ ತಾಲೂಕು ಕೇಂದ್ರಗಳಲ್ಲಿ ತತ್‌ಕ್ಷಣಕ್ಕೆ ವ್ಯವಸ್ಥೆ ಮಾಡುವುದು ಸಾಧ್ಯವಾಗುವುದಿಲ್ಲ ಎಂಬ ಉತ್ತರ ಬಂದಿದೆ.
Advertisement
ಪುತ್ತೂರಲ್ಲಿ ಉಪಕೇಂದ್ರ ತೆರೆಯಿರಿತಾಲೂಕು ಕೇಂದ್ರಗಳಲ್ಲೇ ಮೌಲ್ಯಮಾಪನ ಕೇಂದ್ರ ತೆರೆಯಬೇಕೆಂಬುದು ಶಿಕ್ಷಕರ ಆಗ್ರಹ. ಒಂದು ವೇಳೆ ಸಾಧ್ಯವಾಗದಿದ್ದಲ್ಲಿ ಪುತ್ತೂರಲ್ಲಿ ಉಪಕೇಂದ್ರ ಸ್ಥಾಪಿಸಬೇಕು ಎಂಬ ಮನವಿಯನ್ನು ಸರಕಾರಕ್ಕೆ ಮಾಡಲಾಗಿದೆ. ಪುತ್ತೂರಲ್ಲಿ ಕೇಂದ್ರ ತೆರೆದರೆ ಬೆಳ್ತಂಗಡಿ, ಸುಳ್ಯ, ಪುತ್ತೂರಿನ ಶಿಕ್ಷಕರಿಗೆ ಅನುಕೂಲವಾಗಲಿದೆ. ಬಂಟ್ವಾಳ, ಮೂಡುಬಿದಿರೆ, ಮಂಗಳೂರಿನ ಶಿಕ್ಷಕರು ಮಂಗಳೂರಿನ ಕೇಂದ್ರಗಳಲ್ಲಿ ಮೌಲ್ಯಮಾಪನ ಕಾರ್ಯ ನಡೆಸಬಹುದು ಎಂದು ಕ. ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷ ರಾಮಕೃಷ್ಣ ಶಿರೂರು ತಿಳಿಸಿದ್ದಾರೆ. ಈ ಬೇಡಿಕೆ ಪ್ರಸ್ತುತ ಪರಿಶೀಲನ ಹಂತದಲ್ಲಿದ್ದು, ಶಿಕ್ಷಣ ಸಚಿವರ ಅಭಿಪ್ರಾಯಕ್ಕೆ ಕಾಯಲಾಗುತ್ತಿದೆ. ಶಿಕ್ಷಣ ಸಚಿವರಿಗೆ ಒತ್ತಾಯ
ತಾಲೂಕು ಕೇಂದ್ರಗಳಲ್ಲಿ ಮೌಲ್ಯಮಾಪನ ಕೇಂದ್ರ ತೆರೆಯುವುದು ತ್ರಾಸದಾಯಕ ಎಂಬುದಾಗಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಆದರೆ ಪುತ್ತೂರಿನಲ್ಲಿ ಉಪಕೇಂದ್ರ ತೆರೆಯುವಂತೆ ಶಿಕ್ಷಣ ಸಚಿವರನ್ನು ಒತ್ತಾಯಿಸಲಾಗಿದೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
-ಕೋಟ ಶ್ರೀನಿವಾಸ ಪೂಜಾರಿ
ದ.ಕ. ಜಿಲ್ಲಾ ಉಸ್ತುವಾರಿ ಸಚಿವರು