Advertisement

ದಕ್ಷಿಣ ಕನ್ನಡ, ಉಡುಪಿಯ ಮೂವರಿಗೆ ಉತ್ತಮ ರಾಜ್ಯ ಶಿಕ್ಷಕ ಪ್ರಶಸ್ತಿ

09:00 AM Sep 03, 2022 | Team Udayavani |

ಬೆಳ್ತಂಗಡಿ/ ಕಾರ್ಕಳ: ರಾಜ್ಯ ಸರಕಾರ ನೀಡುವ 2022ನೇ ಸಾಲಿನ ಉತ್ತಮ ರಾಜ್ಯ ಶಿಕ್ಷಕ ಪ್ರಶಸ್ತಿ ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಮಿತಾನಂದ ಹೆಗ್ಡೆ ಮತ್ತು ರಾಧಾಕೃಷ್ಣ ಟಿ. ಹಾಗೂ ಕಾರ್ಕಳದ ಮಿಯಾರಿನ ಸಂಜೀವ ದೇವಾಡಿಗ ಆಯ್ಕೆಯಾಗಿದ್ದಾರೆ.

Advertisement

ಅಮಿತಾನಂದ ಹೆಗ್ಡೆ
ಬೆಳ್ತಂಗಡಿ: ಅಮಿತಾನಂದ ಹೆಗ್ಡೆ ಅವರು ಬಂಗಾಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ. ಉಜಿರೆ ಪಿಲಿಕುಂಜೆ ನಿವಾಸಿಯಾಗಿರುವ ಅವರು ಸ.ಹಿ.ಪ್ರಾ. ಶಾಲೆ ಉಪ್ಪಿನಂಗಡಿ, ಹಳೆಪೇಟೆ ಉಜಿರೆಯಲ್ಲಿ ಶಿಕ್ಷಕರಾಗಿ, ಸಮೂಹ ಸಂಪನ್ಮೂಲ ಕೇಂದ್ರ ಬೆಳ್ತಂಗಡಿಯಲ್ಲಿ ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಭಾರತ್‌ ಸೌಟ್ಸ್‌ ಮತ್ತು ಗೈಡ್ಸ್‌ನ ಕಾರ್ಯದರ್ಶಿಯಾಗಿ ತಾಲೂಕಿನ ವಿವಿಧ ಕಡೆಗಳಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಮುದಾಯಕ್ಕಾಗಿ ವಿವಿಧ ಕಾರ್ಯಕ್ರಮಗಳು ಹಾಗೂ ಜಿಲ್ಲಾ ತಾಲೂಕು ಮಟ್ಟದ ಸಮಾವೇಶಗಳನ್ನು ಆಯೋಜಿಸಿದ್ದಾರೆ.

ಉತ್ತಮ ಸಂಘಟಕ: ತಾಲೂಕು ಹಾಗೂ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳ ಸಂಯೋಜಕರಾಗಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ ಅನುಭವ ಅವರದು. ಹಲವಾರು ಕಾರ್ಯಕ್ರಮಗಳ ಉತ್ತಮ ಸಂಘಟಕರಾಗಿ ನೃತ್ಯ, ನಾಟಕಗಳ ತರಬೇತುದಾರರಾಗಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿರುತ್ತಾರೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಳ್ತಂಗಡಿ ಘಟಕದ ಸದಸ್ಯರಾಗಿದ್ದು, ಜಿಲ್ಲಾ ಘಟಕದ ಜತೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

2021ರ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.

***

Advertisement

ರಾಧಾಕೃಷ್ಣ ಟಿ.
ಬೆಳ್ತಂಗಡಿ: ರಾಧಾಕೃಷ್ಣ ಟಿ. ಅವರು ಕೊಯ್ಯೂರು ಸರಕಾರಿ ಪ.ಪೂ. ಪ್ರೌಢ ಶಾಲಾ ವಿಜ್ಞಾನ ಶಿಕ್ಷಕರಾಗಿದ್ದಾರೆ. ಮೂಲತಃ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ತಚ್ಚಾಮೆ ನಿವಾಸಿಯಾಗಿರುವ ಅವರು ಪ್ರಸ್ತುತ ಬೆಳ್ತಂಗಡಿಯ ಕುತ್ಯಾರು ಬಳಿ ನೆಲೆಸಿದ್ದಾರೆ.

24 ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿರುವ ಅವರು ಕೊಯ್ಯೂರು ಪ್ರೌಢ ಶಾಲಾ ಪ್ರಭಾರ ಮುಖ್ಯ ಶಿಕ್ಷಕರಾಗಿ, ಬೆಳ್ತಂಗಡಿ ತಾಲೂಕು ವಿಜ್ಞಾನ ಶಿಕ್ಷಕರ ವೇದಿಕೆಯ ಅಧ್ಯಕ್ಷರಾಗಿ, ದ.ಕ. ಜಿಲ್ಲಾ ವಿಜ್ಞಾನ ಶಿಕ್ಷಕರ ವೇದಿಕೆ ಅಧ್ಯಕ್ಷರಾಗಿ, ಬೆಳ್ತಂಗಡಿ ತಾಲೂಕು ಜೀವಜಲ ಮರುಪೂರಣ ತಾಲೂಕು ನೋಡಲ್‌ ಅಧಿಕಾರಿಯಾಗಿ, ರಾಷ್ಟ್ರೀಯ ಸೇವಾ ಯೋಜನೆಯ ಅನುಷ್ಠಾನ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ದ.ಕ. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಮೈಸೂರು ವಿಭಾಗ ಅತ್ಯುತ್ತಮ ವಿಜ್ಞಾನ ಕೇಂದ್ರ ಪ್ರಶಸ್ತಿ ಮಂಡ್ಯ ಜಿಲ್ಲೆ, ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ ಮಂಡ್ಯ ಜಿಲ್ಲೆ ಸಹಿತ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಜತೆಗೆ ಜೀವ ವೈವಿಧ್ಯ ಸಂರಕ್ಷಣೆಯಡಿ ಅವನತಿಯಲ್ಲಿರುವ ಗಿಡಗಳನ್ನು ರಕ್ಷಿಸುವ ಮಹತ್ಕಾರ್ಯದಲ್ಲಿ ತೊಡಗಿದ್ದಾರೆ.

***

ಸಂಜೀವ ದೇವಾಡಿಗ
ಕಾರ್ಕಳ: ಮಿಯ್ನಾರು ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಂಜೀವ ದೇವಾಡಿಗ ಕಳೆದ 29 ವರ್ಷಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದ ತೆಳ್ಳಾರು ನಿವಾಸಿ.

1994ರಲ್ಲಿ ಸಾಣೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿಗೆ ಸೇರ್ಪಡೆಗೊಂಡಿದ್ದರು. ಅನಂತರ ಹೆರ್ಮುಂಡೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ವರ್ಷ ಸೇವೆಗೈದು ತಾಲೂಕು ಕ್ಷೇಮ ಸಂಪನ್ಮೂಲ ಕೇಂದ್ರದಲ್ಲಿ 8 ವರ್ಷ ಕಾಲ ಕರ್ತವ್ಯ ನಿರ್ವಹಿಸಿದ್ದರು. ಕೆರ್ವಾಶೆ ಬಂಗ್ಲೆಗುಡ್ಡೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 8 ವರ್ಷ ಕಾಲ ಸೇವೆಗೈದಿದ್ದ ಅವರು ಕಳೆದ ನಾಲ್ಕು ತಿಂಗಳ ಹಿಂದೆ ಮಿಯಾರಿಗೆ ವರ್ಗಾವಣೆಗೊಂಡಿದ್ದಾರೆ.

2011-12ರಲ್ಲಿ ಮೈಸೂರು ಗ್ರಾಮೀಣ ವಿಶಿಷ್ಟ ಸೇವಾ ಪುರಸ್ಕಾರ, 2017-18ರಲ್ಲಿ ಭಾರತ ಸೇವಾದಳ ಅತ್ಯುತ್ತಮ ಶಾಂತ ನಾಯಕ ಪ್ರಶಸ್ತಿ ಅವರಿಗೆ ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next