Advertisement
ದೇವರು ಹೇಗೆ ನಮಗೆ ಕಷ್ಟ ಎದುರಾದಾಗ ಪಾರುಮಾಡುತ್ತಾನೋ ಅದೇ ರೀತಿ ಶಿಕ್ಷಕರು ನಮ್ಮಲ್ಲಿರುವ ಅಜ್ಞಾನವೆಂಬ ಅಂದಕಾರವ ಹೋಗಲಾಡಿಸಿ ಸುಜ್ಞಾನದ ಬೆಳಕನ್ನು ಬೀರುವವರು. ಶಿಕ್ಷಕರು ವಿದ್ಯಾರ್ಥಿಗಳ ಜೀವನದ ಶಿಲ್ಪಿ ಇದ್ದಂತೆ, ಜೇಡಿಮಣ್ಣಿನಂತಿರುವ ವಿದ್ಯಾರ್ಥಿಯ ಜೀವನಕ್ಕೆ ಸರಿಯಾದ ರೂಪುರೇಷೆಯನ್ನು ನೀಡಿ ಸಮಾಜದಲ್ಲಿ ಗೌರವಯುತವಾಗಿ ಬಾಳುವಂತೆ ಮಾಡುವವರು.
Related Articles
Advertisement
ನಾನು ಪದವಿ ಪೂರ್ವ ಶಿಕ್ಷಣಕ್ಕೆ ಸೇರಿದಾಗ ನಮಗೆ ಹಿಂದಿ ಭಾಷೆಯನ್ನು ಕಲಿಸಿದ ಜಯಶೀಲ ಮ್ಯಾಮ್ ನೆನಪಿಗೆ ಬರುತ್ತಾರೆ. ಎಲ್ಲ ಮಕ್ಕಳನ್ನು ತಮ್ಮ ಮಕ್ಕಳಂತೆ ಕಂಡವರು. ಪ್ರಸ್ತುತ ನಾನು ಡಾ| ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ ಇಲ್ಲಿ ನಮಗೆ ಕಲಿಸುವ ಪ್ರತಿಯೊಬ್ಬ ಪ್ರಾಧ್ಯಾಪಕರು ಒಂದೊಂದು ಅಮೂಲ್ಯ ರತ್ನವಿದ್ದಂತೆ.
ಪದವಿ ಶಿಕ್ಷಣದಲ್ಲಿ ಕೇವಲ ಪಾಠ ಮಾಡುತ್ತಾರೆ. ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದಿಲ್ಲ ಎಂದು ಈ ಮೊದಲು ಕೇಳಿದ್ದೆ. ಆದರೆ ನಮ್ಮ ಕಾಲೇಜಿನ ಪ್ರಾಧ್ಯಾಪಕರು ಎಲ್ಲರಿಗಿಂತ ವಿಭಿನ್ನರು, ಅವರು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಒತ್ತುನೀಡುತ್ತಾ ಬಂದಿದ್ದಾರೆ. ಮಕ್ಕಳ ಯಾವುದೇ ಸಮಸ್ಯೆಗೆ ಪರಿಹಾರವನ್ನು ಸೂಚಿಸಿ ಸರಿಯಾದ ಸಮಯಕ್ಕೆ ಪಾಠ ಪ್ರವಚನಗಳನ್ನು ಮುಗಿಸಿ ನಮ್ಮ ಹೊರೆಯನ್ನು ಕಡಿಮೆಗೊಳಿಸುತ್ತಿದ್ದಾರೆ.
ನಾವು ಪ್ರತೀ ವರ್ಷ ಸೆಪ್ಟಂಬರ್ 5ರಂದು ನಮ್ಮ ದೇಶದ ಎರಡನೇ ರಾಷ್ಟ್ರಪತಿಯಾಗಿದ್ದ ಡಾ| ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸುತ್ತ ಬರುತ್ತಿದ್ದೇವೆ. ತತ್ತÌಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಅವರು ವಿದ್ಯಾರ್ಥಿ ಸಮೂಹದ ಮಧ್ಯೆ ಜನಪ್ರಿಯತೆ ಗಳಿಸಿದ್ದರು. ಅವರು ಉಪನ್ಯಾಸ ನೀಡಲು ನಿಂತರೆ ತರಗತಿಯ ತುಂಬಾ ವಿದ್ಯಾರ್ಥಿಗಳು ತುಂಬಿರುತ್ತಿದ್ದರು.
ಭೌತಶಾಸ್ತ್ರದ ವಿದ್ಯಾರ್ಥಿಗಳು ಸಹ ತಮ್ಮ ಪಾಠ ಪ್ರವಚನಗಳನ್ನು ಬಿಟ್ಟು ತತ್ತ್ವಶಾಸ್ತ್ರದ ಉಪನ್ಯಾಸ ಕೇಳಲು ಕಾರಿಡಾರಿನಲ್ಲಿ ಸೇರುತ್ತಿದ್ದರು. ಇವರು ಕಲ್ಕತ್ತ ವಿಶ್ವವಿದ್ಯಾಲಯಕ್ಕೆ ಉಪಕುಲಪತಿಯಾಗಿ ನೇಮಕಗೊಂಡಾಗ ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅವರು ಮೈಸೂರಿನಿಂದ ಹೊರಡಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಅದರಲ್ಲಿ ಕೆಲವರು ಅವರನ್ನು ಕೂರಿಸಿ ರೈಲು ನಿಲ್ದಾಣಕ್ಕೆ ಹೊರಟಿದ್ದ ಗಾಡಿಯಿಂದ ಕುದುರೆಗಳನ್ನು ಬಿಡಿಸಿ ತಾವೇ ಸ್ವತಃ ಗಾಡಿಯನ್ನು ರೈಲು ನಿಲ್ದಾಣದ ವರೆಗೆ ಎಳೆದೊಯ್ದರಂತೆ. ಅದೊಂದು ಉದಾತ್ತ ಗುರುವಿನ ಭಕ್ತಿಯ ಅಪೂರ್ವ ದೃಶ್ಯವಾಗಿತ್ತು.
ಅಂತಹ ಮಹಾನ್ ಶಿಕ್ಷಕರನ್ನು ಪಡೆದ ಆ ವಿದ್ಯಾರ್ಥಿಗಳೇ ಧನ್ಯರು. ಇಂದಿಗೂ ಅಂತಹ ಮಹಾನ್ ಶಿಕ್ಷಕರು ನಮ್ಮ ನಡುವೆಯೂ ಇದ್ದಾರೆ. ನಾವು ಕೇವಲ ಸೆಪ್ಟಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸದೇ ಪ್ರತಿನಿತ್ಯವೂ ಶಿಕ್ಷಕರ ದಿನಾಚರಣೆಯೆಂದು ತಿಳಿದು ಅವರನ್ನು ಗೌರವಿಸಿ ಅವರು ನಮಗೆ ತೋರಿದ ದಾರಿಯಲ್ಲಿ ಮುನ್ನಡೆಯೋಣ.
-ಸಮೃದ್ಧಿ ಕಿಣಿ
ಡಾ| ಬಿ.ಬಿ. ಹೆಗ್ಡೆ, ಕಾಲೇಜು, ಕುಂದಾಪುರ