Advertisement

UV Fusion: ನಗುವ ಚೆಲ್ಲಿ ಬದುಕ ಜೀವಿಸಿ ಕಣ್ಣೀರೇ ಅಸೂಯೆ ಪಡುವಂತೆ

02:23 PM Nov 03, 2024 | Team Udayavani |

ಕನಸುಗಳೇ ಹಾಗೆ ನನಸಾಗುವುದೋ ಇಲ್ಲ ಕನಸಾಗಿಯೇ ಉಳಿದುಹೋಗುವುದೋ ಎನ್ನುವ ಪರಿವಿಲ್ಲದೆ ನಾವು ಕನಸು ಕಾಣುತ್ತಲೇ ಇರುತ್ತೇವೆ. ಅದು ನನಸಾದರೆ ಆ ಭಗವಂತ ನಮ್ಮವನಾಗಿ ಬಿಡುತ್ತಾನೆ. ಅದೇ ಕನಸು ಹುಸಿಯಾದರೆ, ನಮ್ಮ ಕಣ್ಣಲ್ಲಿ ಆ ಭಗವಂತನೇ ಕ್ರೂರಿಯಾಗಿರುತ್ತಾನೆ ಅಲ್ಲವೇ?

Advertisement

ಬದುಕೇ ಹಾಗೆ. ಸಂತೋಷಕ್ಕಿಂತ ನಿರಾಸೆಗಳೇ ಹೆಚ್ಚು. ಮನುಷ್ಯ ಸ್ವಭಾವ ಅರ್ಥ ಆಗುವಾಗುವುದು ಸ್ವಲ್ಪ ನಿಧಾನ. ಕಾರಣ ಮನಸ್ಸು ಮರ್ಕಟ. ಅದು ಅನೇಕ ಬಾರಿ ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ಕೆಲವೊಂದು ಸಂದರ್ಭಗಳೇ ನಮ್ಮನ್ನು ಅಂತಹ ಸ್ಥಿತಿಗೆ ತಳ್ಳಿಬಿಡುತ್ತವೆ. ವಿರಳವಾಗಿ ಕಂಡ ಕನಸು ಹರಿಯೋ ನೀರಿನಲ್ಲಿ ಕೊಚ್ಚಿಹೋದಾಗ, ಗೆಲುವಿನ ನಿರೀಕ್ಷೆಯಲ್ಲಿದ್ದಾಗ ಸೋಲು ಬಿಗಿದಪ್ಪಿದಾಗ, ನಮ್ಮವರೇ ನಮ್ಮನ್ನು ತ್ಯಜಿಸಿದಾಗ ಮನಸ್ಸಾದರೂ ಹೇಗೆ ತಾಳ್ಮೆಯಿಂದಿರುತ್ತದೆ? ನನಸಾಗದ ಕನಸು ಹಾರಿ ಹೋದ ಹಕ್ಕಿಯಂತೆ ಉಳಿಯುವುದು ಬರೀ ನಿರಾಸೆ. ಆ ಹಕ್ಕಿ ಹಿಂದಿರುಗಿ ಬರುವುದು ಎಂದರೆ ನಿರೀಕ್ಷೆ ಅತಿಯಾಯಿತಲ್ಲವೇ?

ಯಾವುದೇ ವಸ್ತುವಾಗಲಿ, ವ್ಯಕ್ತಿಯಾಗಲಿ ನಮ್ಮನ್ನು ಸೇರಬೇಕೆಂದಿದ್ದರೆ ಅದು ಖಂಡಿತ ನಮ್ಮನ್ನು ಸೇರೇ ಸೇರುತ್ತದೆ. ನನಗದು ಸೇರಲೇಬೇಕು ಅನ್ನು ಸ್ವಾರ್ಥವ ಬಿಟ್ಟು ನನ್ನಲ್ಲಿದ್ದಷ್ಟು ಸಾಕು ಅನ್ನುವ ಮನೋಭಾವವಿದ್ದರೆ ಬದುಕನ್ನು ಸವಿದಂತೆ. ಅದಕ್ಕೇ ಅಲ್ವೇ ಲೈಫ್‌ ಈಸ್‌ ಬ್ಯೂಟಿಫುಲ್‌ ಅನ್ನುವದು.

ಮನುಷ್ಯನಿಗೆ ತೃಪ್ತಿ ಅನ್ನುವದೇ ಇಲ್ಲ. ಸಿಕ್ಕಷ್ಟು ಆಸೆಗಳು ಹೆಚ್ಚಾಗುತ್ತಲೇ ಹೋಗುತ್ತವೆ ಹೊರತು ಸಾಕು ಎಂಬ ಮನಸ್ಥಿತಿಯಿಲ್ಲ. ಅದಕ್ಕಾಗಿಯೇ ಗೆಲುವೆಂಬ ಸಿಹಿಯ ಜತೆ ನಿರಾಸೆ, ಸೋಲು ಅನ್ನುವಂತಹ ಕಹಿ ರುಚಿಗಳನ್ನು ಇಟ್ಟಿದ್ದು. ಬದುಕಿನಲ್ಲಿ ಗೆಲುವೊಂದೇ ಜತೆಗಿರುವುದಕ್ಕಿಂತ ಸೋಲು ಕೂಡ ಜತೆಗಿದ್ದರೆ ಜೀವನದ ಪಾಠಗಳನ್ನು ಅರಿತಂತೆ. ಜೀವನದಲ್ಲಿ ಸುಖವೊಂದೇ ಸಿಕ್ಕರೆ ನೋವಿಗೆಲ್ಲಿದೆ ಬೆಲೆ.

ನೋವನ್ನು ಜೀವಿಸಿದಾಗಲೇ ಸುಖವನ್ನು ಅನುಭವಿಸಲು ಸಾಧ್ಯ. ಕಷ್ಟಗಳು ನಮ್ಮ ಬೆನ್ನೇರಿ ಕುಳಿತಾಗ ಕುಗ್ಗಿ ಅಸಹಾಯಕ ಸ್ಥಿತಿಗೆ ತಲುಪುವುದಕ್ಕಿಂತ ಆ ಕಷ್ಟವನ್ನು ಜೀವಿಸಿ, ಅದರಿಂದ ಸಿಗುವ ಪಾಠವನ್ನು ಅರಿತು ಸುಖದ ಹಾದಿಯ ಅನ್ವೇಷಣೆಯಲ್ಲಿ ತೊಡಗಬೇಕು. ಅದರಲ್ಲಿಯೂ ಸುಖವೊಂದೇ ನನ್ನದಾಗಬೇಕು, ಅನ್ನುವ ಯೋಚನೆಯಿಂದ ಮೊದಲು ಹೊರಬರಬೇಕು. ಆಗಲೇ ಜೀವಿಸೋ ಜೀವನಕ್ಕೊಂದು ಬೆಲೆ.

Advertisement

ಬದುಕು ಕಷ್ಟ -ಸುಖ, ನೋವು – ನಲಿವಿನ ಸಮ್ಮಿಲನ. ಆಸೆಯದು ನಿರಾಸೆಯಾಗಲೇಬೇಕು, ಕಷ್ಟಗಳಲ್ಲಿ ನೋವನ್ನು ಅನುಭವಿಸಲೇಬೇಕು. ಆಗಲೇ ಜೀವನದ ಬಂಡಿ ಸರಿದಾರಿಯಲ್ಲಿ ಸಾಗುವುದು.

ಕಾಲವೇ ಹಾಗೆ, ಒಮ್ಮೆ ಜೀವಕ್ಕೆ ಜೀವ ಕೊಡೋ ಗೆಳೆಯನಾಗಿದ್ದರೆ, ಮತ್ತೂಂದು ಸಂದರ್ಭದಲ್ಲಿ ಅದೇ ಗೆಳೆಯ ಶತ್ರುವಾಗುತ್ತಾನೆ. ಕಾರಣ ನಮ್ಮಲ್ಲಿರೋ ಸ್ವಾರ್ಥ. ಅದೆಲ್ಲವ ಬಿಟ್ಟು ನಾ ನಡೆಯೋ ಸರಿದಾರಿಯ ಜತೆ ನನ್ನವನು ಜತೆಗೂಡಿದರೆ ನಾ ನಡೆಯೋ ದಾರಿಗೆ ಅರ್ಥ ಸಿಗುತ್ತೆ ಅನ್ನುವ ನಿಷ್ಕಲ್ಮಶ ಮನಸ್ಸು ನಮ್ಮೊಂದಿಗಿರಬೇಕು. ಆಗ ಮಾತ್ರ ಆ ಗೆಳೆತನ ಪರಿಶುದ್ಧವಾಗಿರಲು ಸಾಧ್ಯ.
ಬದುಕು ಬಂದಂತೆ ಸ್ವೀಕರಿಸು ಅನ್ನುವ ಸಾಲು ಸೋಲಲ್ಲೂ ಖುಷಿಕೊಟ್ಟಂತೆ ಭಾಸವಾಗುತ್ತದೆ. ಪ್ರತಿಬಾರಿಯೂ ಕುಗ್ಗಿದಾಗ ಬದುಕು ನಡೆಸಿದಂತೆ ನಡೆ, ನಿರಾಸೆಗಳೆಲ್ಲ ಬದುಕಿನ ಭಾಗ ಎಂದು ಮುನ್ನುಗ್ಗಿದಾಗಲೇ ಗೆಲುವಿನ ಹಾದಿ ಕಾಣುವುದು. ಏನೇ ಆಗಲಿ ಬದುಕುತ್ತಿರು ನೀವು ನಗುವ ಚೆಲ್ಲಿ, ಕಣ್ಣೀರೇ ಅಸೂಯೆ ಪಡುವಂತೆ.

-ಅರ್ಚನಾ ಸಾಲ್ಯಾನ್‌, ಎಸ್‌ಡಿಎಂ, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next