Advertisement

ತಂತ್ರಜ್ಞಾನದಿಂದ ಶಿಕ್ಷಕರಿಗಿಲ್ಲ ಶ್ರಮ

11:40 AM Oct 10, 2017 | |

ಕಲಬುರಗಿ: ತಂತ್ರಜ್ಞಾನ ಬೆಳೆಯುತ್ತಿರುವ ಮತ್ತು ಅದನ್ನು ಬಳಸುತ್ತಿರುವ ವೇಗದಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಬಡಲಾವಣೆ ಕಾಣುತ್ತಿದ್ದೇವೆ. ಮುಂದಿನ ಕೆಲವೇ ವರ್ಷಗಳಲ್ಲಿ ತಂತ್ರಜ್ಞಾನದ ನೆರವಿನಿಂದಾಗಿ ಶಿಕ್ಷಕರು ತರಗತಿಗಳಿಗೆ ಹೋಗಿ ಪಾಠ ಹೇಳಿಕೊಡುವ ದಿನಗಳು ಮುಕ್ತಾಯಗೊಂಡು ಶಿಕ್ಷಕರ ಶ್ರಮ ಕಡಿಮೆಯಾಗಲಿದೆ ಎಂದು ಕೇಂದ್ರೀಯ ವಿವಿ ಕುಲಪತಿ ಪ್ರೊ| ಎಚ್‌.ಎಂ.ಮಹೇಶ್ವರಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಇಲ್ಲಿನ ಸರಕಾರಿ ಮಹಾ ವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂಶೋಧನಾ ವಿಧಾನ ಕುರಿತ ಯುಜಿಸಿ
ಪ್ರಾಯೋಜಿತ ಮೂರು ದಿನಗಳ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ದಿನೇ ದಿನೇ ಹೆಚ್ಚುತ್ತಿರುವ ತಂತ್ರಜ್ಞಾನದ ಬಳಕೆಯಿಂದ ಈಗಿನ ವಿದ್ಯಾರ್ಥಿಗಳು ಅತೀ ಹೆಚ್ಚು ಅಂತರ್ಜಾಲವನ್ನು ಬಳಕೆ ಮಾಡುತ್ತಿದ್ದಾರೆ. ವಿಷಯದ ಕುರಿತು ವಿಸ್ತಾರವಾದ ಜ್ಞಾನ ಹೊಂದುತ್ತಿದ್ದಾರೆ. 

ಇದರಿಂದಾಗಿ ಮುಂದಿನ ದಿನಗಳಲ್ಲಿ ಶಿಕ್ಷಕರು ಪಾಠ ಮಾಡುವ ಬದಲು ಕೇವಲ ಮಾರ್ಗದರ್ಶಕರಾಗಿ ಮಾತ್ರವೇ ಉಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಆದ್ದರಿಂದ ಶಿಕ್ಷಕ ವರ್ಗವೂ ಅತ್ಯಾಧುನಿಕ ತಂತ್ರಜ್ಞಾನದ ಕುರಿತು ಆಳವಾದ ಅಧ್ಯಯನ ಮಾಡಬೇಕಾಗಿದೆ ಎಂದರು.

ಈಗಂತೂ ಉನ್ನತ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿವೆ. ಇದರ ಲಾಭವನ್ನು ವಿದ್ಯಾರ್ಥಿಗಳು ಪಡೆಯಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ನೆರವಾಗಬೇಕು. ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳು ಮೊಬೈಲ್‌, ಕಂಪ್ಯೂಟರ್‌ ಇತ್ಯಾದಿ ಸೌಲಭ್ಯಗಳ ಮೂಲಕವೇ ಬೇಕಾದ ಶಿಕ್ಷಣ ಪಡೆಯಬಹುದು. ಬರುವ ವರ್ಷಗಳಲ್ಲಿ ಆನ್‌ಲೈನ್‌ನಲ್ಲಿಯೇ ಶಿಕ್ಷಣ ಪಡೆಯುವ ದಿನಗಳು ದೇಶದಲ್ಲಿ ಬಂದರೂ ಅಚ್ಚರಿಯಿಲ್ಲ ಎಂದು ಹೇಳಿದರು.

ಸದ್ಯ ವಿಶ್ವವಿದ್ಯಾಲಯಗಳಲ್ಲಿ ಶೇ.24ರಷ್ಟು ವಿದ್ಯಾರ್ಥಿಗಳ ಸಂಖ್ಯೆ ಇದೆ. ಇದು ಇನ್ನು ಹೆಚ್ಚಾಗಬೇಕಾಗಿದೆ. ಸರಕಾರದ ಗುರಿ ಇರುವುದು 2013ರಲ್ಲಿ ಶೇ.34ರಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಬೇಕೆಂದಿದೆ. ಆದರೆ ಸದ್ಯ 2017ರ ಅಂಕಿ ಅಂಶಗಳ ಪ್ರಕಾರ ಶೇ.30ರಷ್ಟು ಇದೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಮೂಲಕ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಬೇಕು ಎಂದರು.

Advertisement

ಸಂಶೋಧನೆಗಳು ಹೆಚ್ಚಾದಂತೆ ಅನೇಕ ಹೊಸ ವಿಷಯಗಳು ಬೆಳಕಿಗೆ ಬರುತ್ತವೆ. ಆಗ ಜಗತ್ತಿನ ಇತರೆ ರಾಷ್ಟ್ರಗಳೊಂದಿಗೆ ನಾವು ಸ್ಪರ್ಧಿಸಲು ಅನುಕೂಲವಾಗುತ್ತದೆ ಎಂದರು.

ಹುದ್ದೆ ಭರ್ತಿ ಮಾಡಿ: ಈಗಿರುವ ವಿವಿಗಳಲ್ಲಿ ಬಹುತೇಕ ವಿವಿಗಳಲ್ಲಿನ ಕುಲಪತಿ ಹುದ್ದೆಗಳು ಖಾಲಿ ಇವೆ. ವಿಶ್ವವಿದ್ಯಾಲಯಗಳಿಗೆ ಕುಲಪತಿಗಳು ಯಜಮಾನನಿದ್ದಂತೆ. ಆದರೆ ಸದ್ಯ 10 ತಿಂಗಳಿಂದ ಮೈಸೂರು ವಿವಿಗೆ ಕುಲಪತಿಗಳ ನೇಮಕವೇ ಆಗಿಲ್ಲ, ಪರಿಸ್ಥಿತಿ ಹೀಗಿರುವಾಗ ವಿವಿಗಳು ಸರಿಯಾಗಿ ನಡೆಸಲು ಹೇಗೆ ಸಾಧ್ಯವೆಂದು ಪ್ರಶ್ನಿಸಿದ ಅವರು, ಸಂಶೋಧನೆಗೆ ಇದು ತೊಡಕಾಗುತ್ತದೆ.

ಆದ್ದರಿಂದ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ರಾಜಕೀಯ ನಾಯಕರು ಹಾಗೂ ಸರಕಾರ ಮನಸ್ಸು ಮಾಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ| ನಂದಗಿ ರಾಚಪ್ಪ ಮಾತನಾಡಿ, ಇಂದು ಎಲ್ಲರೂ ಡಾಕ್ಟರೆಟ್‌ ಪಡೆಯುವ ಭರದಲ್ಲಿ ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಎಂದು ವಿಷಾದಿಸಿದ ಅವರು, ನಿಜವಾದ ಸಂಶೋಧನೆ ಮಾಡಿದಾಗ ಮಾತ್ರ ನಾವು ಮುಂದಿನವರೆಗೆ ಸರಿಯಾಗಿ ಕಲಿಸಲು ಸಾಧ್ಯ ಎಂದರು.

ಪಿಎಚ್‌ಡಿ ಕಡ್ಡಾಯವಾಗಿ ಮುಗಿಸಲೇಬೇಕೆಂಬ ಸರಕಾರದ ಆದೇಶ ಪಾಲಿಸಲು ಹೋಗಿ ಹೇಗೇಗೋ ಅದನ್ನು ಮುಗಿಸಲು ಮುಂದಾಗುತ್ತವೆ. ಆದ್ದರಿಂದ ಸಂಶೋಧನೆಗಳನ್ನು ಮಾಡುವವರು ಮನೆ ಬಿಟ್ಟು ಹೊರ ಬಂದು ನೈಜವಾದ ಸಂಗತಿಗಳನ್ನು ದಾಖಲು ಮಾಡಿ ಎಂದು ಮನವಿ ಮಾಡಿದರು

ಹೈದರಾಬಾದಿನ ಡಾ| ಅಂಬೇಡ್ಕರ್‌ ಮುಕ್ತ ವಿವಿಯ ಪ್ರೊ| ರಾಜಮೌಳಿ ಪ್ರಧಾನ ಭಾಷಣ ಮಾಡಿದರು. ಗುಲ್ಬರ್ಗ ವಿವಿ ಜಿಯಾಲೋಜಿ ವಿಭಾಗದ ಅಧ್ಯಕ್ಷ ಪ್ರೊ| ಕೆ.ವಿಜಯಕುಮಾರ ಮಾತನಾಡಿದರು. ಕಾರ್ಯಾಗಾರ ಸಂಯೋಜಕ ಡಾ| ಶಶಿಕಾಂತ ಮಜ್ಜಿಗೆ ಸ್ವಾಗತಿಸಿದರು.

ಡಾ| ವಿಜಯಕುಮಾರ ಹೆಬ್ಟಾಳಕರ್‌, ಡಾ| ರೇಖಾ ಅಣ್ಣಿಗೇರಿ, ಡಾ| ಸುರೇಶ ಮಾಳೆಗಾಂವ ಇದ್ದರು. ಡಾ| ಅಂಜುಮ್‌
ಅಜರ್‌ ನಿರೂಪಿಸಿದರು. ಡಾ| ಸೋಮನಾಥ ರೆಡ್ಡಿ ವಂದಿಸಿದರು. 

ನಂತರ ವಿವಿಧ ವಿಷಯಗಳ ಕುರಿತು ಉಪನ್ಯಾಸ ನಡೆದವು. ದೇಶದ ವಿವಿಧ ಭಾಗಗಳಿಂದ ಸುಮಾರು 100 ಜನ
ಸಂಶೋಧನಾ ವಿದ್ಯಾರ್ಥಿಗಳು, ವಿಜ್ಞಾನಿಗಳು, ಶೈಕ್ಷಣಿಕ ತಜ್ಞರು ಹಾಗೂ ರಾಜ್ಯದ, ನೆರೆ ಜಿಲ್ಲೆಗಳ ಸುಮಾರು 400 ಜನ ಸಂಶೋಧನಾ ಅಭ್ಯರ್ಥಿಗಳು, ಶಿಕ್ಷಕರು, ಪ್ರಾಧ್ಯಾಪಕರು ಭಾಗವಹಿಸಿದ್ದರು. ಕಾರ್ಯಾಗಾರದಲ್ಲಿ ವಿಶೇಷ ತರಬೇತಿ ಮತ್ತು ವಿಷಯಗಳನ್ನು ಮಂಡಿಸಲು ದೇಶದ ಪ್ರಖ್ಯಾತ 10 ಜನ ವಿಷಯ ತಜ್ಞರು ಆಗಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next