ಗದಗ: ಗದಗ ಶಹರ ವಲಯದ 5 ಹಾಗೂ ಗ್ರಾಮೀಣ ವಲಯದ 19 ಸರ್ಕಾರಿ ಪ್ರೌಢ ಶಾಲೆಗಳ ಶಿಕ್ಷಕರಿಗೆ ಕಳೆದ ಮೂರ್‍ನಾಲ್ಕು ತಿಂಗಳಿಂದ ವೇತನ ಪಾವತಿಯಾಗಿಲ್ಲ. ವೇತನವಿಲ್ಲದೇ ಕುಟುಂಬಿಕ ನಿರ್ವಹಣೆ ಕಷ್ಟಕರವಾಗಿದ್ದು, ತಕ್ಷಣವೇ ವೇತನ ಪಾವತಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕ ಒತ್ತಾಯಿಸಿದೆ.
ಈ ಕುರಿತು ಸಂಘದ ಪ್ರಮುಖರು ಜಿಪಂ ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಡಿಡಿಪಿಐ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿ, ಜಿಲ್ಲಾ ಹಂತದಲ್ಲಿ ಶಾಲೆಗಳ ಸಂಖ್ಯೆ, ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆ ಪರಿಗಣಿಸದೇ ಕೇವಲ ಬ್ಲಾಕ್‌ಗಳನ್ನು ಪರಿಗಣಿಸಿ ಅವೈಜ್ಞಾನಿಕ ಹಾಗೂ ವಿವೇಚನಾರಹಿತವಾಗಿ ವೇತನ ಬೇಡಿಕೆ (ಲಿಂಕ್ ಡಾಕುಮೆಂಟ್) ಹಂಚಿಕೆ ಮಾಡಿರುವುದು ಸಮಸ್ಯೆಗೆ ಕಾರಣ ಎಂದು ಹಿರಿಯ ಅಧಿಕಾರಿಗಳ ವಿರುದ್ಧ ದೂರಿದರು.
ಈ ಕುರಿತು ಇತ್ತೀಚೆಗೆ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು, ಶಿಕ್ಷಕರ ವೇತನ ವಿಳಂಬದ ವಿಷಯ ಪ್ರಸ್ತಾಪಿಸಿದ್ದಾರೆ. ಸಮಸ್ಯೆ ಇತ್ಯರ್ಥವಾಗದಿದ್ದರೆ ಧರಣಿ ನಡೆಸುವುದಾಗಿಯೂ ಎಚ್ಚರಿದ್ದಾರೆ. ಆದರೂ, ಅಧಿಕಾರಿಗಳು ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿಕ್ಷಕರ ಸಂಘದ ಮನವಿ ಹಿನ್ನೆಲೆಯಲ್ಲಿ ತಕ್ಷಣವೇ ಡಿಡಿಪಿಐ ನಾಗೂರ ಅವರನ್ನು ತಮ್ಮ ಕೊಠಡಿಗೆ ಕರೆಯಿಸಿಕೊಂಡ ಜಿಪಂ ಸಿಇಒ ಮಂಜುನಾಥ ಚವ್ಹಾಣ, ಶಿಕ್ಷಕರ ವೇತನ ವಿಳಂಬವಾಗುತ್ತಿರುವ ಬಗ್ಗೆ ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಲಿಂಕ್ ಡಾಕ್ಯುಮೆಂಟ್‌ನಲ್ಲಿ ವ್ಯತ್ಯಾಸವಾಗಿ ದ್ದರಿಂದ ವೇತನ ವಿಳಂಬವಾಗಿದೆ ಎಂದು ತಪ್ಪೊಪ್ಪಿಕೊಂಡರು. ಅಲ್ಲದೇ, ಶೀಘ್ರವೇ ವೇತನ ಪಾವತಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಇದಕ್ಕೆ ತೃಪ್ತರಾಗದ ಶಿಕ್ಷಕರ ಸಂಘದ ಸದಸ್ಯರು, 15 ದಿನಗಳಲ್ಲಿ ಶಿಕ್ಷಕರ ವೇತನ ಬಿಡುಗಡೆಯಾಗದಿದ್ದಲ್ಲಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಸಂಘದ ಜಿಲ್ಲಾಧ್ಯಕ್ಷ ಪಿ.ಸಿ. ಕಲಹಾಳ, ಕಾರ್ಯದರ್ಶಿ ಪಿ.ಎಚ್. ಕಡಿವಾಲ, ತಾಲೂಕು ಅಧ್ಯಕ್ಷ ಬಿ.ಎಫ್. ಪೂಜಾರ, ಕಾರ್ಯದರ್ಶಿ ಎಲ್.ಎಸ್.ಬೆಳವಟಗಿ, ಸರ್ಕಾರಿ ನೌಕರರ ಸಂಘದ ಪ್ರತಿನಿಧಿಗಳಾದ ವಿ.ಎಸ್. ಪಾಟೀಲ, ಎಸ್.ಸಿ. ನಾಗರಳ್ಳಿ, ಶಿಕ್ಷಣಾಧಿಕಾ ರಿಗಳ ಸಂಘದ ಜಿಲ್ಲಾ ಕಾರ್ಯದರ್ಶಿ ವಿ.ವಿ. ನಡುವಿನಮನಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ಸಿ. ಭಾವಿ, ಹಿಂದಿ ಭಾಷಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎ.ಎಲ್. ಬಿಜಾಪೂರ ಹಾಗೂ ಶಹರ ಹಾಗೂ ಗ್ರಾಮೀಣ ವಲಯದ ನೂರಾರು ಪ್ರೌಢಶಾಲೆ ಶಿಕ್ಷಕರು ಪಾಲ್ಗೊಂಡಿದ್ದರು.