Advertisement

ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಫೋನ್‌ನಲ್ಲೇ ಸಲಹೆ!

03:08 PM Mar 18, 2020 | Suhan S |

ಕೊಪ್ಪಳ: ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯಾ ಶಾಲೆಗಳ ಶಿಕ್ಷಕರು ಫೋನ್‌ನಲ್ಲೇ ವಿಷಯವಾರು ಸಮಸ್ಯೆ, ಪರಿಹಾರ, ಸಲಹೆ ನೀಡುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

Advertisement

ಹೌದು. ಎಲ್ಲೆಡೆ ಕೊರೊನಾ ಭೀತಿ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಇದನ್ನರಿತು ಸರ್ಕಾರವೇ ಮುಂಜಾಗೃತೆಯಿಂದಾಗಿ ವೈರಸ್‌ ಎಲ್ಲೆಡೆ ಹರಡದಂತೆ ನಿಗಾ ವಹಿಸಲು ಒಂದು ವಾರಗಳ ಕಾಲ ಸಂಪೂರ್ಣ ವ್ಯಾಪಾರ ವಹಿವಾಟು ಹಾಗೂ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಮಕ್ಕಳ ಹಿತ ಕಾಯುವ ಕೆಲಸ ಮಾಡಿದೆ. ಆದರೆ ಮಾರ್ಚ್‌ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯು ಮುಖ್ಯ ಘಟ್ಟವಾಗಿದ್ದು, ಅವರ ಭವಿಷ್ಯದ ದೃಷ್ಟಿಯಿಂದ ಹಾಗೂ ಆರೋಗ್ಯದ ದೃಷ್ಟಿಯಿಂದಲೂ ಶಿಕ್ಷಕರು ಪೋನ್‌ ಮೂಲಕ ವಿದ್ಯಾರ್ಥಿಗಳಿಗೆ ಸಲಹೆ ನೀಡುವಂತೆ ಆದೇಶ ಮಾಡಿದೆ.

ಪ್ರಸ್ತುತ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆಯುತ್ತಿದ್ದವು. ಆದರೆ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿದ್ದರಿಂದ ಶಾಲೆಯಲ್ಲಿ ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆಯದಂತಾಗಿವೆ. ಇನ್ನು ಪರಿಹಾರ ಬೋಧನೆ, ವಿಶೇಷ ಬೋಧನೆಯ ಜೊತೆಗೆ ವಿಷಯವಾರು ಚರ್ಚೆಗೂ ಈಗ ಅವಕಾಶ ಇಲ್ಲದಂತಾಗಿದೆ. ಅಲ್ಲದೇ, ಮಾ.27ರಿಂದ ಏ.9ರವರೆಗೂ ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆಗಳು ನಡೆಯಲಿವೆ. ಈ ವೇಳೆ ವಿದ್ಯಾರ್ಥಿಗಳ ಅಭ್ಯಾಸ ತಪ್ಪಿ ಹೋಗಬಾರದು ಎಂಬ ಉದ್ದೇಶದಿಂದ ಪರೀಕ್ಷೆ ಮುಗಿಯುವ ವರೆಗೂ ಮಕ್ಕಳ ಬಗ್ಗೆ ಶಾಲೆ ಶಿಕ್ಷಕರು ಕಾಳಜಿ ವಹಿಸಲು ಕೆಲವೊಂದು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಜಿಲ್ಲಾ ಶಿಕ್ಷಣ ಇಲಾಖೆಯು ಆಯಾ ಶಾಲೆಗಳ ವಿಷಯವಾರು ಶಿಕ್ಷಕರು ಪ್ರತಿ ದಿನವೂ ಮಕ್ಕಳಿಗೆ ಕರೆ ಮಾಡಿ ಎಲ್ಲ ವಿಷಯಗಳ ಕುರಿತು ಕರೆ ಮಾಡಿ ಚರ್ಚಿಸಬೇಕು. ಮಾ.17ರಿಂದ ಮಾ.26ರ ವರೆಗೂ ಕನ್ನಡ, ಗಣಿತ, ಹಿಂದಿ, ವಿಜ್ಞಾನ, ಇಂಗ್ಲಿಷ್‌, ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿ ಒಂದುಗಂಟೆಗೊಮ್ಮೆ ಆಯಾ ವಿಷಯವಾರು ಶಿಕ್ಷಕರು ವಿದ್ಯಾರ್ಥಿಗಳಿಗೆ ಕರೆ ಮಾಡಿ ಚರ್ಚೆ ನಡೆಸಿ ಸಮಸ್ಯೆ ಇರುವುದನ್ನು ಕೇಳಬೇಕು. ಜೊತೆಗೆ ಅವರ ಆರೋಗ್ಯದ ಬಗ್ಗೆಯೂ ಜಾಗೃತಿ ಮೂಡಿಸಿ, ಕೊರೊನಾ ವೈರಸ್‌ ಸೋಂಕಿನ ಬಗ್ಗೆಯೂ ಅವರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದ ಸೂಚನೆ ನೀಡಿದೆ.

ವಿದ್ಯಾರ್ಥಿಗಳಿಗೆ ತುಂಬ ಅನುಕೂಲ: ಪ್ರಸ್ತುತ ಶಾಲೆಗಳಿಗೆ ರಜೆ ಇರುವುದರಿಂದ ವಿದ್ಯಾರ್ಥಿಗಳಿಗೂ ಶಾಲೆಗಳತ್ತ ಹೋಗಲು ಸಾಧ್ಯ ವಾಗುತ್ತಿಲ್ಲ. ವೈರಸ್‌ ಭೀತಿಯೂ ಎಲ್ಲೆಡೆ ಮನೆ ಮಾಡಿದೆ. ಅವರಿಗೆ ವಿಷಯವಾರು ಸಮಸ್ಯೆಗಳು ಕಾಣಿಸಿಕೊಂಡರೆ ಹೇಗೆ ಚರ್ಚೆ ಮಾಡ ಬೇಕೆಂದು ಚಿಂತೆಯಲ್ಲಿದ್ದರು. ಶಿಕ್ಷಣ ಇಲಾಖೆ ಈ ಕ್ರಮ ಕೈಗೊಂಡಿರುವುದು ವಿದ್ಯಾರ್ಥಿಗಳಿಗೆ ತುಂಬ ನೆರವಾಗಿದೆ. ಅವಶ್ಯ ವೆನಿಸಿದಾಗ ವಿದ್ಯಾರ್ಥಿಗಳೆ ಕರೆ ಮಾಡಿ ಮಾಹಿತಿ ಪಡೆಯಲಿದ್ದಾರೆ. ಜೊತೆಗೆ ಅಭ್ಯಾಸದಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಮೇಲೂ ಶಿಕ್ಷಕರು ನಿಗಾ ವಹಿಸುವುದು ಅಗತ್ಯವಾಗಿದೆ.

Advertisement

ಕೊರೊನಾ ವೈರಸ್‌ ಎಫೆಕ್ಟ್ನಿಂದಾಗಿ  ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಗಾಗಿ ಅವರ ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆದಿಲ್ಲ. ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ನಿರಂತರ ಸಲಹೆ, ಪರೀಕ್ಷಾ ಮಾಹಿತಿ ನೀಡುವ ಸಂಬಂಧ ಮಾ.17ರಿಂದ ಮಾ.26ರ ವರೆಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಫೋನ್‌ ಕರೆ ಮಾಡಿ ಮಾಹಿತಿ ನೀಡುವಂತೆ ಆದೇಶ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತುಂಬ ನೆರವಾಗಲಿದೆ. -ದೊಡ್ಡಬಸಪ್ಪ ನೀರಲಕೇರಿ, ಡಿಡಿಪಿಐ ಕೊಪ್ಪಳ

 

-ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next