ಹಸಿ ಮಣ್ಣಿನಂತಿರುವ ಮಗುವಿನ ಮನಸ್ಸನ್ನು ಎರಡೂ ಕೈಗಳಿಂದ ಪ್ರೀತಿಯಿಂದ ತಟ್ಟಿ, ಸುಂದರವಾಗಿ, ಕಲಾತ್ಮಕವಾದ ವಿಗ್ರಹ ರೂಪಿಸುವುದು ಗುರುವಿನ ಗುರಿ. ನಮಗೆ ಗುರಿ ಮುಟ್ಟಲು ದಾರಿ ತೋರುವ, ಸದಾ ಕಾಲವೂ ಸಮಸ್ಯೆಗೆ ಸಮರ್ಪಕ ಪರಿಹಾರ ನೀಡುತ್ತಾ, ನಿಸ್ವಾರ್ಥ ಮನೋಭಾವದಿಂದ ದಾರಿದೀಪ ತೋರುವವ ಶಿಕ್ಷಕ.
ಯಾವುದೇ ಮಹಾನ್ ವ್ಯಕ್ತಿಗಳ ಕತೆಗಳನ್ನು ಓದಿದಾಗ ಆ ಕಾಲದಲ್ಲಿ ಗುರುಗಳ ಮಹತ್ವ ಮತ್ತು ಅವರ ಮಾರ್ಗದರ್ಶನದಲ್ಲಿ ತಯಾರಾದ ಯಶಸ್ಸಿನ ಕಥೆಗಳು ಅನೇಕ. ಶಿವಾಜಿ ಮಹಾರಾಜನು
ಆತ್ಮಸ್ಥೆ çರ್ಯವನ್ನು ಕಳೆದು ಕೊಂಡು ಕುಳಿತಿದ್ದಾಗ ಗುರು ರಾಮದಾಸರು ತುಂಬಿದ ಆತ್ಮವಿಶ್ವಾಸದಿಂದ ಮತ್ತೆ ಸಾಮ್ರಾಜ್ಯವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ. ಹಾಗೆಯೇ ಮಹಾಭಾರತದಲ್ಲಿ ಅರ್ಜುನ ಉತ್ತಮ ಬಿಲ್ವಿದ್ಯಾ ಪ್ರವೀಣನಾಗಲು ದ್ರೋಣಾಚಾರ್ಯರಂತಹ ಗುರುಗಳೇ ಕಾರಣ. ಇಂತಹ ವ್ಯಕ್ತಿಗಳು ಗುರು ಬೋಧನೆಯಿಂದಲೇ ಇಂದಿನ ಸಮಾಜಕ್ಕೆ ಸ್ಪೂರ್ತಿ ಚಿಲುಮೆಯಾಗಿರುವರು.
ಶಾಲೆಯಲ್ಲಿ ಪಾಠ ಕಲಿಸಿದವರು ಮಾತ್ರ ಶಿಕ್ಷಕರಲ್ಲ. ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ನಮಗೊಬ್ಬ ಗುರು ಸಿಗುತ್ತಾನೆ. ಓದು ಮುಗಿಯಿತು, ಇನ್ನು ಶಿಕ್ಷಕರ ಆವಶ್ಯಕತೆ ಇಲ್ಲ ಎಂದುಕೊಳ್ಳುವಂತಿಲ್ಲ. ಶಿಕ್ಷಕರು ನೀಡಿದ ಅರಿವು ಮುಂದೆ ಜೀವನದಲ್ಲಿ ವಿದ್ಯಾರ್ಥಿ ತಪ್ಪು ದಾರಿ ಹಿಡಿದಾಗ, ಯಾವ ದಾರಿಯಲ್ಲಿ ಹೋದರೆ ಒಳ್ಳೆಯದು ಮತ್ತು ಯಶಸ್ಸು ಸಾಧಿಸಬಹುದು ಎಂದು ದಾರಿದೀಪ ವಾಗುತ್ತಿರುತ್ತದೆ.
ಎಷ್ಟೋ ಜನರು ತಮ್ಮ ಗುರುಗಳಿಂದಾಗಿ ನಾವು ಉತ್ತಮ ಸ್ಥಾನವನ್ನು ಪಡೆಯಲು ಸಾಧ್ಯವಾಗಿದೆಯೆಂದು ಆಗಾಗ ಹೇಳುತ್ತಾರೆ. ನನ್ನ ಶಿಕ್ಷಕರು ಒಂದೆರಡು ಪೆಟ್ಟು ಕೊಟ್ಟಿದ್ದರಿಂದ ನಾನು ಇಂದು ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದೇನೆ ಎಂದು ಕೆಲವರು ಹೇಳುತ್ತಾರೆ. ಪೆಟ್ಟಿನ ಜತೆಗೆ ತಮ್ಮ ಶಿಕ್ಷಕರು ನೀಡಿದ ತಾಯಿಯ ಪ್ರೀತಿಗಿಂತಲೂ ಮಿಗಿಲಾದ ಪ್ರೀತಿಯನ್ನು ಮಕ್ಕಳು ಅನುಭವಿಸುವುದೇ ಇದಕ್ಕೆ ಮುಖ್ಯ ಕಾರಣವಾಗಿರುತ್ತದೆ.
ಶಿಕ್ಷಕರೆಂದರೆ ಪಾಠ ಬೋಧಿಸುವವರು ಮಾತ್ರವಲ್ಲ; ಸನ್ಮಾರ್ಗದಲ್ಲಿ ನಡೆಯುವಂತೆ ದಾರಿ ತೋರುವ ಮಾರ್ಗದರ್ಶಕರು. ತನ್ನ ಅರಿವಿನ ಲೋಕದಲ್ಲಿ ಒಂದಷ್ಟನ್ನು ತನ್ನ ಪ್ರೀತಿಯ ವಿದ್ಯಾರ್ಥಿಗಳಿಗೆ ಧಾರೆ ಎರೆಯುವ ಮೂಲಕ ಭವಿಷ್ಯದಲ್ಲಿ ಅವರ ಬಾಳು ಬೆಳಗುವಂತೆ ಮಾಡುವ ಗುರುಗಳ ಋಣವನ್ನು ತೀರಿಸಲು ಸಾಧ್ಯವೇ? ತನ್ನ ವಿದ್ಯಾರ್ಥಿ ತನಗಿಂತ ಉನ್ನತ ಮಟ್ಟಕ್ಕೆ ತಲುಪಿದರೆ ಅತ್ಯಂತ ಸಂತೋಷ ಪಡುವ ಏಕೈಕ ವ್ಯಕ್ತಿ ಎಂದರೆ ಗುರು ಮಾತ್ರ. ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಒಳಮನಸ್ಸಿನ ರೂಪದಲ್ಲಿ ಜತೆಯಾಗಿದ್ದು ಮುನ್ನಡೆಸುವ ಗುರಿ ಇಲ್ಲದಾಗ ಗುರುವಾಗುವ ಮತ್ತು ಗುರುವಾಗಿದ್ದುಕೊಂಡು ಗುರಿ ತೋರುವ ಆ ಎಲ್ಲ ಶಿಕ್ಷಕರಿಗೆ ಹೃದಯದಾಳದ ನಮನ. -ರಶ್ಮಿ ಉಡುಪ, ಡಾ.ಬಿಬಿ.ಹೆಗ್ಡೆ ಕಾಲೇಜು, ಕುಂದಾಪುರ