Advertisement
ಆದರೆ ಹುಟ್ಟಿ-ಬೆಳೆದ ಸ್ವಂತ ಊರಿನಿಂದ ಹೆಚ್ಚಾಕಮ್ಮಿ ನಾನೂರೈವತ್ತು ಕಿಲೋಮೀಟರ್ ದೂರದ ಸ್ಥಳಕ್ಕೆ ನೇಮಕವಾಗಿ, ಒಂಬತ್ತು ವರ್ಷಗಳಾದರೂ ಸ್ವಂತ ಊರಿಗಿರಲಿ, ಸ್ವಂತ ಜಿಲ್ಲೆಗೂ ವರ್ಗಾವಣೆ ಸಿಗದೆ, ಈಗಿರುವ ವರ್ಗಾವಣಾ ನಿಯಮವೇ ಮುಂದುವರಿದರೆ ಇನ್ನೂ ಹತ್ತರಿಂದ ಹದಿನೈದು ವರ್ಷ ವರ್ಗಾವಣೆಯ ಬಗ್ಗೆ ಕನಸೂ ಕಾಣುವಂತಿಲ್ಲ ಎಂದು ಗೊತ್ತಾದ ಮೇಲೆ ನಿಜಕ್ಕೂ ಹೌಹಾರಿದ್ದೇನೆ. ನಾನೊಬ್ಬನೇ ಅಲ್ಲ, ನನ್ನಂತಹ ಸಾವಿರಾರು ಶಿಕ್ಷಕರು ಇಂತಹದ್ದೇ ಬವಣೆಯಲ್ಲಿ ಬದುಕುತ್ತಿದ್ದಾರೆ.
Related Articles
Advertisement
ಪ್ರಸ್ತುತ ಶಾಲೆಯಲ್ಲಿ ಒಬ್ಬ ಶಿಕ್ಷಕ ಎಷ್ಟು ವರ್ಷ ಕಾರ್ಯ ನಿರ್ವಹಿಸಿದ್ದಾನೆ ಎಂಬುದರ ಆಧಾರದ ಮೇಲೆ ಅವನ ವರ್ಗಾವಣೆಯನ್ನು ನಿರ್ಧರಿಸಬೇಕಾಗಿರುವುದು ವೈಜ್ಞಾನಿ ಕವಲ್ಲವೇ? ಇನ್ನೂ ಸುಲಭವಾಗಿ ಹೇಳಬೇಕೆಂದರೆ 2010ನೇ ವರ್ಷದಲ್ಲಿ ಪ್ರೌಢಶಾಲಾ ಶಿಕ್ಷಕನಾಗಿ ಒಬ್ಬ ವ್ಯಕ್ತಿ ನೇಮಕವಾಗುತ್ತಾನೆ ಎಂದುಕೊಳ್ಳಿ. ಮತ್ತೂಬ್ಬ ಶಿಕ್ಷಕರು 1988ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದವರು 2013ರಲ್ಲಿ ಪ್ರೌಢಶಾಲೆಗೆ ಬಡ್ತಿ ಹೊಂದುತ್ತಾರೆ ಎಂದುಕೊಳ್ಳಿ.
ಈಗ ಹೊಸ ನಿಯಮದ ಪ್ರಕಾರ ಅವರು ಒಟ್ಟು ಅರವತ್ತೆರೆಡು(62) ಅಂಕಗಳನ್ನು ಹೊಂದಿ, ವರ್ಗಾವಣೆಯ ಜ್ಯೇಷ್ಠತೆಯಲ್ಲಿ ಮೊದಲಿನ ವ್ಯಕ್ತಿಗಿಂತ ತುಂಬಾ ಮುಂದಿರುತ್ತಾರೆ. ಅಂದರೆ ಎರಡನೇ ವ್ಯಕ್ತಿ ಸಾವಿರದ ಆಸುಪಾಸಿನ ರ್‍ಯಾಂಕಿನಲ್ಲಿದ್ದರೆ, 2010ನೇ ಇಸವಿಯಲ್ಲಿ ನೇಮಕವಾದ ವ್ಯಕ್ತಿ ಕೇವಲ ಹದಿನಾರು(16) ಅಂಕಗಳನ್ನು ಹೊಂದಿ ನಾಲ್ಕೂವರೆ ಸಾವಿರದ ಹತ್ತಿರದ ರ್‍ಯಾಂಕಿನಲ್ಲಿ ಇರುತ್ತಾನೆ. ವರ್ಗಾವಣೆಯಲ್ಲಿ ಮೊದಲ ವ್ಯಕ್ತಿ ಎರಡನೇ ವ್ಯಕ್ತಿಗಿಂತ ತೀರಾ ಕಿರಿಯನಾಗಿ ವರ್ಗಾವಣೆಯ ಕನಸನ್ನೇ ಕಾಣದಂತಾಗುತ್ತದೆ. ಎರಡನೇ ವ್ಯಕ್ತಿ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಬಾರಿ ಬೇರೆ ಬೇರೆ ಸ್ಥಳಗಳಿಗೆ ವರ್ಗಾವಣೆ ಹೊಂದಿ, ಈಗ ತನ್ನೂರಿನ ಹತ್ತಿರವೆ ಬೇರೆ ಬೇರೆ ಶಾಲೆಗಳಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ ವರ್ಗಾವಣೆ ಹೊಂದುವ ಅರ್ಹತೆ ಹೊಂದುತ್ತಾನೆ.
ಆದರೆ ಒಂಬತ್ತು ವರ್ಷದಿಂದ ಒಂದೇ ಶಾಲೆಯಲ್ಲಿರುವ ವ್ಯಕ್ತಿಯು ಒಮ್ಮೆಯೂ ವರ್ಗಾವಣೆಯಾಗದೆ, ಇದೇ ವರ್ಗಾವಣೆ ನೀತಿಯಿದ್ದರೆ, ಇನ್ನೂ ಇಪ್ಪತ್ತು ವರ್ಷ ವರ್ಗಾವಣೆಯಿಲ್ಲದೆ, ವಯಸ್ಸಾದ, ಖಾಯಿಲೆಯ ತಂದೆ- ತಾಯಿಯ ಬಳಿಯಿರಲಾರದೆ, ಅವರ ನೋವು- ನರಳುವಿಕೆಗೆ ಕಾರಣನಾಗಿ, ಕೊರಗುತ್ತಾ, ವೃತ್ತಿಗೆ ನ್ಯಾಯವನ್ನೂ ಒದಗಿಸಲಾಗದೆ, ತೊಳಲಾಡುತ್ತಾ ಬದುಕಬೇಕಾಗುತ್ತದೆ.
2010 ಎಂದಲ್ಲ, ಅದಕ್ಕೂ ತುಂಬಾ ವರ್ಷ ಮೊದಲೇ ನೇಮಕವಾದ ಅನೇಕ ಶಿಕ್ಷಕರೂ ಒಮ್ಮೆಯೂ ವರ್ಗಾವಣೆಯ ಭಾಗ್ಯ ಸಿಗದೆ ಒದ್ದಾಡುತ್ತಿರುವುದು ಸಂಕಟ ತರಿಸುತ್ತಿದೆ. ಜೊತೆಗೆ ಈ ನಿಯಮದಿಂದ ಪ್ರತೀ ಬಾರಿಯೂ ಬಡ್ತಿ ಹೊಂದಿದವರೇ ಜ್ಯೇಷ್ಠತಾ ಪಟ್ಟಿಯಲ್ಲಿ ಹಿರಿಯರಾಗುತ್ತಾ, ನೇರ ನೇಮಕವಾದವರು ಅವರಿಗಿಂತ ಕಿರಿಯರಾಗಿಯೇ ಉಳಿಯುತ್ತಾರೆ. ಪ್ರತೀ ಬಾರಿಯೂ ಬಡ್ತಿ ಶಿಕ್ಷಕರಿಗೆ ಮಾತ್ರ ವರ್ಗಾವಣೆಯ ಶೇಕಡಾ ತೊಂಬತ್ತರಷ್ಟು ಭಾಗ ಅವಕಾಶ ದೊರೆತು, ನೇರ ನೇಮಕವಾದವರಿಗೆ ಅವಕಾಶವಿಲ್ಲದಂತಾಗುತ್ತದೆ. ಜೊತೆಗೆ ವರ್ಗಾವಣೆಯ ವಿಷಯದಲ್ಲಿ ಇಪ್ಪತ್ತು ಅಥವಾ ಇಪ್ಪತ್ತೈದು ವರ್ಷ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ ನೇರ ನೇಮಕಾತಿ ಹೊಂದಿದ ಶಿಕ್ಷಕರು ಒಂದೆರಡು ವರ್ಷಗಳ ಹಿಂದೆ ಬಡ್ತಿ ಹೊಂದಿರುವವರಿಗಿಂತ ಕಿರಿಯರಾಗುವುದೇ ದುರಂತ.
ಪ್ರಪಂಚದಲ್ಲಿ ತಪ್ಪು ಮಾಡದವರು ಯಾರೂ ಇರಲು ಸಾಧ್ಯವಿಲ್ಲ. ಕೆಲವೊಮ್ಮೆ ಗೊತ್ತಿಲ್ಲದೇ ತಪ್ಪಾಗುತ್ತದೆ. ಆದರೆ ಅದರಿಂದ ಇನ್ಯಾರಿಗೋ ಅನ್ಯಾಯವಾಗುವುದರೊಳಗೆ ಎಚ್ಚರವಾಗುವುದು ಮುಖ್ಯ. ಹಾಗಾಗಿ ಇಲಾಖೆಯು ಈ ವಿಷಯದಲ್ಲಿ ಇನ್ನೊಮ್ಮೆ ಯೋಚಿಸಿ, ಒಂದು ಶಾಲೆಯಲ್ಲಿ ಒಬ್ಬ ಎಷ್ಟು ವರ್ಷ ಸೇವೆ ಸಲ್ಲಿಸಿದ್ದಾನೆ ಎಂಬುದರ ಆಧಾರದ ಮೇಲೆ, ಅವನನ್ನು ವರ್ಗಾವಣೆಗೆ ಜ್ಯೇಷ್ಠತೆಯಲ್ಲಿ ಹಿರಿತನವನ್ನು ನೀಡಿದರೆ ಒಳ್ಳೆಯದಾಗುತ್ತದೆ. ಕೆಲವು ಅನಿವಾರ್ಯ ಪರಿಸ್ಥಿತಿಗಳಾದ ತೀವ್ರ ಅನಾರೋಗ್ಯ, ದೈಹಿಕ ಅಂಗವಿಕಲತೆಯನ್ನು ಹೊರತುಪಡಿಸಿ ಪ್ರಸ್ತುತ ಶಾಲೆಗೆ ಬಂದ ಆಧಾರದ ಮೇಲೆ ವರ್ಗಾವಣೆ ನೀಡಿದರೆ, ಯಾರಿಗೂ ಅನ್ಯಾಯವಾಗದೆ, ಸಮಾನವಾದ ವರ್ಗಾವಣೆ ದೊರೆಯಬಹುದು.
ಹಾಗೆಯೇ ಅನಾರೋಗ್ಯ, ಅಂಗವೈಕಲ್ಯ, ಪತಿ-ಪತ್ನಿ ಪ್ರಕರಣ, ಇತರೆ ಮಹಿಳಾ ಹಾಗೂ ಪುರುಷ ಶಿಕ್ಷಕರೆಂಬ ಎಲ್ಲಾ ವರ್ಗಕ್ಕೂ ಶೇಕಡಾ ಇಂತಿಷ್ಟು ವರ್ಗಾವಣೆ ಎಂಬ ಆದೇಶವಾದರೆ, ಅದೆಷ್ಟೋ ಶಿಕ್ಷಕರು ಒಂದಿಷ್ಟು ನೆಮ್ಮದಿಯಿಂದ ಬೋಧಿಸಬಹುದು. ಈ ಲೇಖನ ಬಡ್ತಿ ಶಿಕ್ಷಕರ ಮೇಲೋ ಅಥವಾ ಇಲಾಖೆಯ ಮೇಲೋ ಹೊರಿಸುತ್ತಿರುವ ಆಪಾದನೆಯಲ್ಲ. ಬದಲಾಗಿ ಎಲ್ಲರಿಗೂ ನ್ಯಾಯ ಒದಗಲಿ ಎಂಬ ಬೇಡಿಕೆ. ಹಾಗಾಗಿ ಇಲಾಖೆ ಹಾಗೂ ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಿದರೆ ಎಲ್ಲಾ ಶಿಕ್ಷಕರಿಗೂ ಒಳ್ಳೆಯದಾಗುತ್ತದೆ.
ರಾಘವೇಂದ್ರ ಹೊರಬೈಲು, ಶಿಕ್ಷಕರು