Advertisement

ಆದೇಶದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಇಲಾಖೆ ನಿರ್ಧಾರ

03:15 AM Jul 05, 2017 | Team Udayavani |

ಸವಣೂರು: ಶಿಕ್ಷಕಿಯೊಬ್ಬರನ್ನು ಕುದ್ಮಾರು ಶಾಲೆಯಿಂದ ಪಲ್ಲತ್ತಾರು ಶಾಲೆಗೆ ವರ್ಗಾಯಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಹೊರಡಿಸಿದ ಆದೇಶದಲ್ಲಿ ಯಾವುದೇ ಬದಲಾವಣೆಯಾಗುವ ಸಂಭವವಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್‌.ಶಶಿಧರ್‌ ಇದನ್ನು ಖಚಿತಪಡಿಸಿದ್ದು, ‘ಪಲ್ಲತ್ತಾರು ಶಾಲೆಯಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಓರ್ವ ಶಿಕ್ಷಕರನ್ನು ಪಲ್ಲತ್ತಾರು ಶಾಲೆಗೆ ನಿಯೋಜಿಸಲಾಗಿದೆ. ಆದೇಶದಂತೆ ಅವರು ಪಳ್ಳತ್ತಾರು ಶಾಲೆಯಲ್ಲಿ ಕಾರ್ಯ ನಿರ್ವಹಿಸುವರು’ ಎಂದು ಖಚಿತಪಡಿಸಿದ್ದಾರೆ. ಸೋಮವಾರವಷ್ಟೇ ನಿಯೋಜಿಸಿದ ಶಿಕ್ಷಕರನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯವರು ಕುದ್ಮಾರು ಶಾಲೆಗೆ ಬಂದಾಗ ಎಸ್‌ಡಿಎಂಸಿ ಸದಸ್ಯರು ಶಿಕ್ಷಕಿಯ ನಿಯೋಜನೆಯನ್ನು ಪ್ರಶ್ನಿಸಿದ್ದರು. ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿಯವರು ಸಮರ್ಪಕವಾದ ಮಾಹಿತಿ ನೀಡದೇ, ಎಸ್‌ಡಿಎಂಸಿಯವರನ್ನೇ ನಿಂದಿಸಿದ ಬಗ್ಗೆ ಆರೋಪ ವ್ಯಕ್ತವಾಗಿತ್ತು.

Advertisement

ಪಲ್ಲತ್ತಾರು ಶಾಲೆಗೆ ಕುದ್ಮಾರು ಶಾಲೆಯಿಂದ ಶಿಕ್ಷಕಿಯೋರ್ವರನ್ನು ನಿಯೋಜನೆ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಇತ್ತೀಚೆಗೆ ಆದೇಶ ಹೊರಡಿಸಿದ್ದರು. ಹೀಗಾಗಿ ಕುದ್ಮಾರು ಶಾಲಾ ಎಸ್‌ಡಿಎಂಸಿಯವರು ನಿಯೋಜನೆ ತಡೆಹಿಡಿಯುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಡಿಡಿಪಿಐರವರಿಗೆ ಮನವಿ ಮಾಡಿಕೊಂಡಿದ್ದರು. ಇದರಿಂದ ಪ್ರಯೋಜನವಾಗಿರಲಿಲ್ಲ. ಸೋಮವಾರ ಬಿಇಒ ಅವರು, ಶಿಕ್ಷಕಿಯನ್ನು ಬಿಡುಗಡೆಗೊಳಿಸುವ ಸಂಬಂಧ ಕುದ್ಮಾರು ಶಾಲೆಗೆ ಭೇಟಿ ನೀಡಿದ್ದರು. ಈ ವೇಳೆ ಸಮವಸ್ತ್ರ ವಿತರಣೆ ಕುರಿತು ಸಭೆ ನಡೆಸುತ್ತಿದ್ದ ಎಸ್‌ಡಿಎಂಸಿಯವರು ಬಿಇಒ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರಿನಲ್ಲಿ 219 ಮಂದಿ ಮಕ್ಕಳಿದ್ದು, 8 ಮಂದಿ ಶಿಕ್ಷಕರಿದ್ದಾರೆ. ನಿಯಮಾನುಸಾರ ಹೆಚ್ಚುವರಿ ಶಿಕ್ಷಕರಿಲ್ಲ.

ಈ ಹಿಂದೆ ಹಂಟ್ಯಾರು ಶಾಲಾ ಶಿಕ್ಷಕರನ್ನು ಪಲ್ಲತ್ತಾರಿಗೆ ನಿಯೋಜನೆ ಮಾಡಿದ್ದರೂ ಅವರು ಏಕೆ ಹೋಗಿಲ್ಲ ಎಂದು ಪ್ರಶ್ನಿಸಿದ್ದರು. ಇದ್ದರಿಂದ ಸಿಟ್ಟಿಗೆದ್ದ ಬಿಇಒ, ನೀವು ಅನಾಗರಿಕರಾಗಿ ವರ್ತಿಸುತ್ತಿದ್ದೀರಿ, ನಿಮಗೆ ಮಾಹಿತಿ ಬೇಕಾದಲ್ಲಿ ಬಿಇಒ ಕಚೇರಿಗೆ ಬನ್ನಿ ಎಂದಿದ್ದರು. ಇದನ್ನು ಪ್ರತಿಭಟಿಸಿದ ಎಸ್‌ಡಿಎಂಸಿಯವರು, ಬಿಇಒರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಅಷ್ಟರಲ್ಲಿ ಸ್ಥಳೀಯರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ, ಅನಾಗರೀಕರು ಯಾರು? ಸಮರ್ಪಕವಾದ ಉತ್ತರ ನೀಡದೇ ತೆರಳಕೂಡದು ಎಂದು ಶಾಲೆಯ ಗೇಟ್‌ ಮುಚ್ಚಿ ಬಿಇಒ ಗೆ ದಿಗ್ಬಂಧನ ವಿಧಿಸಿದ್ದರು. ಬೆಳಂದೂರು ಗ್ರಾಪಂ ಅಧ್ಯಕ್ಷೆ ಉಮೇಶ್ವರಿ ಅಗಳಿ ಸ್ಥಳಕ್ಕಾಗಮಿಸಿ, ಶಾಲೆಯ ಗೇಟ್‌ ತೆರೆಯುವಂತೆ ಸ್ಥಳೀಯರಲ್ಲಿ ಮನವಿ ಮಾಡಿದರು. ಬಳಿಕ ಗೇಟ್‌ ತೆರೆದ ಕಾರಣ ಬಿಇಒ ತೆರಳಿದರು. ಈ ಹಂತದಲ್ಲಿ ಬಿಇಒ ಅವರು ಬೆಳ್ಳಾರೆ ಠಾಣಾ ಎಸ್‌ಐಯವರನ್ನು ಮೊಬೆ„ಲ್‌ ಮೂಲಕ ಸಂಪರ್ಕಿಸಿ ಕುದ್ಮಾರಿನಲ್ಲಿ ಶಾಲಾ ಷೋಷಕರು ತನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ದಿಗ್ಬಂಧನ ವಿಧಿಸಿದ್ದಾರೆಂದು ದೂರಿದ್ದಾರೆ. ಎಸ್‌ಐ ಎಂ.ವಿ. ಚೆಲುವಯ್ಯ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದರು.

ದೂರು ದಾಖಲು
ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್‌ ಜಿ.ಎಸ್‌. ತಮ್ಮನ್ನು ಅನಾಗರಿಕರು ಎಂದು ಕರೆದು ಎಸ್‌ಡಿಎಂಸಿಗೆ ಅವಮಾನ ಮಾಡಿದ್ದಾರೆಂದು ಎಸ್‌ಡಿಎಂಸಿಯವರು ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಿಸಿದರು.

ಪ್ರತಿಭಟನೆಯ ಎಚ್ಚರಿಕೆ
ಕುದ್ಮಾರು ಶಾಲೆಯಿಂದ ಬಿಡುಗಡೆಗೊಂಡ ಶಿಕ್ಷಕಿಯನ್ನು ಕುದ್ಮಾರಿಗೆ ಮರುನೇಮಕ ಮಾಡಬೇಕು ಅಥವಾ ಬೇರೊಬ್ಬ ಶಿಕ್ಷಕರನ್ನು ಜು. 8 ರೊಳಗೆ ನಿಯೋಜಿಸಬೇಕು. ಇಲ್ಲವಾದಲ್ಲಿ ಜು.10ರಂದು ಶಾಲಾ ಅಭಿವೃದ್ಧಿ ಸಮಿತಿ, ಷೋಷಕರು, ಸ್ಥಳೀಯರು ಸೇರಿ ಪ್ರತಿಭಟನೆ ನಡೆಸಲು ಎಸ್‌ಡಿಎಂಸಿ ಸಭೆ ನಿರ್ಧರಿಸಿದೆ.

Advertisement

ಇಂತಹ ಮಾತು ಬರಬಾರದು
ಬಿಇಒರವರಿಂದ ನಾವು ನಾಗರಿಕತೆಯ ಪಾಠ ಕಲಿಯಬೇಕಾಗಿಲ್ಲ. ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆಯಿದ್ದು ಹೆಚ್ಚುವರಿ ಶಿಕ್ಷಕರಿರುವ ಅನೇಕ ಶಾಲೆಗಳು ತಾಲೂಕಿನಲ್ಲಿವೆ. ಅವುಗಳಿಂದ ನಿಯೋಜನೆ ಮಾಡಿದರೂ ಪಲ್ಲತ್ತಾರಿಗೆ ತೆರಳುವುದಿಲ್ಲ. ನಾನು ಮಹಿಳೆ ಎನ್ನುವ ಕಾರಣಕ್ಕಾಗಿ ಅನಾಗರೀಕರು ಎಂಬ ಪದ ಬಳಕೆ ಮಾಡಿರಬಹುದು. ಉನ್ನತ ಸ್ಥಾನದಲ್ಲಿರುವವರಿಂದ ಇಂತಹ ಮಾತುಗಳು ಬರಬಾರದು ಎಂದು ಎಸ್‌ಡಿಎಂಸಿ ಕುದ್ಮಾರು ಅಧ್ಯಕ್ಷೆ ಪುಷ್ಪಾಲತಾ ಪಿ. ಗೌಡ ಹೇಳಿದ್ದಾರೆ.

ಸಚಿವರ ಗಮನ ಸೆಳೆಯಲಾಗುವುದು
ಶಾಲೆಯಲ್ಲಿನ ವ್ಯವಸ್ಥೆಯನ್ನು ಮೆಚ್ಚಿ ಅನೇಕರು ಕುದ್ಮಾರು ಶಾಲೆಗೆ ಮಕ್ಕಳನ್ನು ಸೇರಿಸುತ್ತಾರೆ. ಬಹುತೇಕ ಎಲ್ಲ ಕಡೆ ಮಕ್ಕಳ ದಾಖಲಾತಿ ಸಂಖ್ಯೆಯಲ್ಲಿ ಇಳಿಮುಖ ಕಂಡರೂ ಇಲ್ಲಿ ಏರಿಕೆಯಿದೆ. ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಏರುತ್ತಿರುವುದು ಬಿಇಓರವರಿಗೆ ಇಷ್ಟವಿಲ್ಲವೇ ? ಶಿಕ್ಷಕರ ಸಮಸ್ಯೆ ಕುರಿತು ಹಾಗೂ ಬಿಇಒಯವರ ಉದ್ಧಟತನದ ವರ್ತನೆ ಕುರಿತು ಶಿಕ್ಷಣ ಸಚಿವರ ಗಮನ ಸೆಳೆಯಲಾಗುವುದು.
– ಮೇದಪ್ಪ ಗೌಡ ಕುವೆತ್ತೋಡಿ. ಉಪಾಧ್ಯಕ್ಷರು, ಎಸ್‌ಡಿಎಂಸಿ ಕುದ್ಮಾರು

Advertisement

Udayavani is now on Telegram. Click here to join our channel and stay updated with the latest news.

Next