Advertisement

ವೇಳಾಪಟ್ಟಿಯಂತೆ ಶಿಕ್ಷಕರ ವರ್ಗಾವಣೆ

11:16 PM Jun 29, 2019 | Team Udayavani |

ಬೆಂಗಳೂರು: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ವೇಳಾಪಟ್ಟಿಯಂತೆ ನಡೆಯಲಿದೆ. ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಎಸ್‌.ಆರ್‌.ಶ್ರೀನಿವಾಸ್‌ ಭರವಸೆ ನೀಡಿದ್ದಾರೆ.

Advertisement

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ತಡೆಯೊಡ್ಡುವಂತೆ ವಿಧಾನ ಪರಿಷತ್‌ ಸದಸ್ಯರಿಂದ ಒತ್ತಡಗಳು ಬಂದಿವೆ. ಸಾಕಷ್ಟು ಶಿಕ್ಷಕರು ಕಡ್ಡಾಯ ವರ್ಗಾವಣೆ ಮಾಡದಂತೆ ಒತ್ತಾಯಿಸಿದ್ದಾರೆ. ಯಾವುದಕ್ಕೂ ಮಣಿಯುವುದಿಲ್ಲ ಎಂದು ಹೇಳಿದರು.

ಶನಿವಾರ ಸರ್ವಶಿಕ್ಷಣ ಅಭಿಯಾನ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆ ಬಳಿಕ ಮಾತನಾಡಿ, ಈ ವರ್ಗಾವಣೆ ಪ್ರಕ್ರಿಯೆಯಲ್ಲಿ ಸರ್ಕಾರ ಮಧ್ಯ ಪ್ರವೇಶಿಸುವುದಿಲ್ಲ. ಎಂದಿನಂತೆ ಇಲಾಖಾ ಮಟ್ಟದಲ್ಲಿ ಈ ಪ್ರಕ್ರಿಯೆ ನಡೆಯಲಿದ್ದು, ವರ್ಗಾವಣೆ ಬಯಸಿರುವ ಶಿಕ್ಷಕರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ ಎಂದರು.

ಕಡ್ಡಾಯ ವರ್ಗಾವಣೆಯಿಂದ “ಎ’ ವಲಯದಲ್ಲಿ ಶಿಕ್ಷಕರ ಕೊರತೆ ಎದುರಾಗಲಿದೆ. ವರ್ಗಾವಣೆ ಪ್ರಕ್ರಿಯೆ ತಡೆಯೊಡ್ಡಬೇಕು ಎಂದು “ಎ’ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ಅಹವಾಲು ಸಲ್ಲಿಸಿದ್ದಾರೆ. ಈ ಬಗ್ಗೆ ಸಾಧಕ-ಬಾಧಕಗಳ ಮಾಹಿತಿ ಪಡೆದುಕೊಂಡಿದ್ದೇನೆ.

ಮೂರು ವರ್ಷಗಳಿಂದ ವರ್ಗಾವಣೆ ಪ್ರಕ್ರಿಯೆ ನಡೆದಿಲ್ಲ. ಹಳ್ಳಿ ಗುಡ್ಡಗಾಡು ಶಿಕ್ಷಕರೂ ನಗರ ಪ್ರದೇಶಕ್ಕೆ ವರ್ಗಾವಣೆ ಬಯಸಿದ್ದಾರೆ. ಅಂತಹವರ ನೀರಿಕ್ಷೆಗೆ ಅಡ್ಡಿಯಾಗುವುದಿಲ್ಲ ಎಂದರು. ಹೆಚ್ಚುವರಿ ಮತ್ತು ಪತಿ-ಪತ್ನಿ ಪ್ರಕರಣಗಳಲ್ಲಿ ಮುಖ್ಯ ಶಿಕ್ಷಕರು, ಬಿಇಒ ಹಾಗೂ ಡಿಡಿಪಿಐಗೆ ಒತ್ತಡ ತರುತ್ತಿದ್ದರೆ, ಕೂಡಲೇ ಅಧಿಕೃತ ದಾಖಲೆ ನೀಡಿದರೆ ಅಂತವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

Advertisement

ಕಠಿಣ ಕ್ರಮ: ಖಾಸಗಿ ಶಾಲೆಗಳಿಗೆ ಆರ್‌ಟಿಇ ಶುಲ್ಕ ಬಾಕಿ ನೀಡುವುದು ತಡವಾಗಿದೆ. ಶೀಘ್ರವಾಗಿ ಅನುದಾನ ಹಂಚಿಕೆ ಮಾಡಲಾಗುವುದು. ಒಟ್ಟು 600 ಕೋಟಿ ರೂಗಳಲ್ಲಿ 312 ಕೋಟಿ ರೂ. ನೀಡಲಾಗಿದೆ. ಇನ್ನೂ 300 ಕೋಟಿ ರೂ. ಇಲಾಖೆಯಿಂದ ಬಿಡುಗಡೆಯಾಗಬೇಕಿದೆ. ಬಾಕಿ ಹಣ ವಿಚಾರವಾಗಿ ಖಾಸಗಿ ಶಾಲೆಗಳು ಆರ್‌ಟಿಇ ವಿದ್ಯಾರ್ಥಿಗಳಿಂದ ಯಾವುದೇ ಕಾರಣಕ್ಕೂ ಶೂಲ್ಕ ವಸೂಲಾತಿ ಮಾಡಬಾರದು.

ಆರ್‌ಟಿಇ ವಿದ್ಯಾರ್ಥಿಗಳ ಬಳಿ ಹಣ ಕೇಳುವ ಖಾಸಗಿ ಶಾಲೆ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದರು. ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸುವ ಸೈಕಲ್‌ ದರ ಹೆಚ್ಚಾಗಿದೆ. ಕಳೆದ ವರ್ಷ 2,53,941 ಬಾಲಕರು ಹಾಗೂ 2,37,765 ಬಾಲಕಿಯರಿಗೆ ಸೈಕಲ್‌ ವಿತರಿಸಲಾಗಿದ್ದು,

ಕಳೆದ ವರ್ಷ ಬಾಲಕ ಸೈಕಲ್‌ ಬೆಲೆ 3,457 ರೂ. ಹಾಗೂ ಬಾಲಕಿಯರ ಸೈಕಲ್‌ ಬೆಲೆ 3,674 ರೂ.ಇತ್ತು. ಈ ವರ್ಷ ಬಾಲಕರ ಸೈಕಲ್‌ಗೆ 169ರೂ, ಬಾಲಕಿಯರ ಸೈಕಲ್‌ಗೆ 176 ರೂ. ಹೆಚ್ಚಳವಾಗಿದೆ. ಈ ಬಾರಿ ಒಟ್ಟು 5,04,525 ಸೈಕಲ್‌ ವಿತರಿಸಬೇಕಿದ್ದು, ಪ್ರತಿ ಶಾಲೆಗೆ ಟೂಲ್‌ ಕಿಟ್‌ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕನ್ನಡ ಕಡ್ಡಾಯ: ಐಇಎಸ್‌ಸಿ ಶಾಲೆಯಲ್ಲಿ ಕಡ್ಡಾಯ ಕನ್ನಡ ಕಲಿಕೆಗೆ ರಾಜ್ಯ ಸರ್ಕಾರದಿಂದ ಆದೇಶ ನೀಡಿದ್ದು, ಆ ಶಾಲೆಗಳು ಕನ್ನಡವನ್ನು ದ್ವಿತೀಯ ಭಾಷೆಯಾಗಿ ಕಲಿಸಬೇಕಿದೆ. ಸರ್ಕಾರದ ಆದೇಶವನ್ನು ಪಾಲಿಸದ ಶಾಲೆಗಳಿಗೆ ದಂಡ ಹಾಕಲಾಗುವುದು. ಜತೆಗೆ ಮಾನ್ಯತೆ ರದ್ದು ಪಡಿಸಲಾಗುವುದು ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್‌ ತಿಳಿಸಿದರು.

ಸುಳ್ಳು ಪ್ರಮಾಣ ಪತ್ರ ನಡೆಯಲ್ಲ: ಕಡ್ಡಾಯ ವರ್ಗಾವಣೆಯಿಂದ ಬೇರೆ ಸ್ಥಳಕ್ಕೆ ವರ್ಗವಾಗುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಕೆಲವು ಶಿಕ್ಷಕರು ಆರೋಗ್ಯದ ಸಮಸ್ಯೆ ಕಾರಣ ತೋರಿಸುತ್ತಿದ್ದಾರೆ. ಅಂಥ ಶಿಕ್ಷಕರಿಗೆ ಜಿಲ್ಲಾ ವೈದ್ಯಕೀಯ ಮಂಡಳಿಯಿಂದ ಪರಿಶೀಲನಾ ಪತ್ರ ತರುವಂತೆ ಸೂಚಿಸಲಾಗಿದೆ. ಒಂದು ವೇಳೆ, ಸುಳ್ಳು ಪ್ರಮಾಣ ಪತ್ರಗಳನ್ನು ತಂದಿರುವುದು ಸಾಬೀತಾದಲ್ಲಿ ಸಂಬಂಧಪಟ್ಟ ಶಿಕ್ಷಕರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ಶ್ರೀನಿವಾಸ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next