Advertisement

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

01:12 PM Apr 16, 2024 | Team Udayavani |

ದಾವಣಗರೆ: ಚುನಾವಣಾ ತರಬೇತಿಗೆ ಹಾಜರಾಗದೆ ಇರುವುದನ್ನು ಪ್ರಶ್ನಿಸಿದಕ್ಕೆ ತಹಶೀಲ್ದಾರ್ ಅವರೊಂದಿಗೆ ಅನುಚಿತ ವರ್ತಿಸಿದ ಶಿಕ್ಷಕನನ್ನು  ಸೇವೆಯಿಂದ ಅಮಾನತು ಮಾಡಿ ಜಿಲ್ಲಾಧಿಕಾರಿ  ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಆದೇಶಿಸಿದ್ದಾರೆ.

Advertisement

ಚುನಾವಣಾ ಮತಗಟ್ಟೆ ಮಟ್ಟದ ಅಧಿಕಾರಿ ಸಿಬ್ಬಂದಿಗೆ ಏಪ್ರಿಲ್ 8 ರಂದು ಚನ್ನಗಿರಿಯಲ್ಲಿ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಬೆಳಿಗ್ಗೆ ಹಾಜರಾಗಿ ಮಧ್ಯಾಹ್ನ ತರಬೇತಿಗೆ ಹಾಜರಾಗದೆ ಅನ್ಯ ಮಹಿಳಾ ಸಿಬ್ಬಂದಿಯೊಂದಿಗೆ ಹೊರ ಹೋದ ಹಾಗೂ ಇದನ್ನು ಪ್ರಶ್ನಿಸಿದ ತಹಶೀಲ್ದಾರ್ ಅವರೊಂದಿಗೆ ಅನುಚಿತ ವರ್ತನೆ ಮಾಡಿದ ಚನ್ನಗಿರಿ ಎಸ್.ಕೆ.ಎಂ.ಎಸ್ ಮಿಲ್ಲತ್ ಪ್ರೌಢಶಾಲೆ ಸಹ ಶಿಕ್ಷಕ ಸೈಯದ್ ಸುಲ್ತಾನ್ ಅಹಮದ್ ಇವರನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾಧಿಕಾರಿ  ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಆದೇಶಿಸಿದ್ದಾರೆ.

ದಾವಣಗೆರೆ ಲೋಕಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿ, ಸಹಾಯಕ ಅಧಿಕಾರಿ ಸಿಬ್ಬಂದಿಗೆ ಏಪ್ರಿಲ್ 8 ರಂದು ಮೊದಲ ಹಂತದ ತರಬೇತಿಯನ್ನು ಎಲ್ಲ ತಾಲೂಕುಗಳಲ್ಲಿ  ಹಮ್ಮಿಕೊಳ್ಳಲಾಗಿತ್ತು. ಚನ್ನಗಿರಿಯಲ್ಲಿ ಶ್ರೀಶ್ರೀಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ತರಬೇತಿ ನಡೆದಿತ್ತು. ಬೆಳಿಗ್ಗೆ ತರಬೇತಿ ಮುಗಿದು ಮಧ್ಯಾಹ್ನ 3 ಗಂಟೆಗೆ ಕೊಠಡಿ ಸಂಖ್ಯೆ 10 ರಲ್ಲಿ  ತರಬೇತಿ ಆರಂಭವಾಗಿತ್ತು. ಆದರೆ, ಸಹ ಶಿಕ್ಷಕ ಸೈಯದ್ ಸುಲ್ತಾನ್ ಯಾವುದೇ ಅನುಮತಿ ಇಲ್ಲದೆ ತರಬೇತಿಗೆ ಹಾಜರಾದ ಅನ್ಯ ಮಹಿಳಾ ಸಿಬ್ಬಂದಿಯೊಂದಿಗೆ ತರಬೇತಿಯಿಂದ ಹೊರ ಹೋಗುತ್ತಿರುವಾಗ ಇದನ್ನು ಪ್ರಶ್ನಿಸಿದ ತಹಶೀಲ್ದಾರ್ ಅವರೊಂದಿಗೆ ಮಹಿಳಾ ಸಿಬ್ಬಂದಿ ಸಮ್ಮುಖದಲ್ಲಿಯೇ ಅಸಭ್ಯವಾಗಿ ವರ್ತಿಸಿದ್ದಾರೆ. ಜೊತೆಗೆ ಅನ್ಯ ಸಿಬ್ಬಂದಿಯವರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದು ಚುನಾವಣಾ ಪ್ರಾಧಿಕಾರಕ್ಕೆ ಮುಜುಗರ ಉಂಟು ಮಾಡಿದ್ದಾರೆ.

ಪ್ರಜಾಪ್ರತಿನಿಧಿ ಕಾಯ್ದೆ  1951 ರ ಕಲಂ 134 ರ ನಿಯಮ ಉಲ್ಲಂಘನೆ ಮತ್ತು  ಕರ್ನಾಟಕ ನಾಗರೀಕ ಸೇವಾ ನಡತೆ ನಿಯಮಾವಳಿ 1966 ಹಾಗೂ ತಿದ್ದುಪಡಿ ನಿಯಮಗಳು 2021 ರ ನಿಯಮ ಉಲ್ಲಂಘಿಸಿ ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ನಡೆದುಕೊಂಡಿರುವುದು  ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಅಮಾನತು ಮಾಡಿ, ಕೇಂದ್ರಸ್ಥಾನ ಬಿಡದಂತೆ ಜಿಲ್ಲಾ ದಂಡಾಧಿಕಾರಿ ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next