ಹೊನ್ನಾಳಿ: ಶಿಕ್ಷಕ ವೃತ್ತಿ ಬಹಳ ಪವಿತ್ರ ಮತ್ತು ಮಹತ್ವ ಪಡೆದುಕೊಂಡಿದ್ದು, ಅದರ ಪಾವಿತ್ರತೆಗೆ ಧಕ್ಕೆ ಬರದಂತೆ ನೋಡಿಕೊಳ್ಳುವುದು ಎಲ್ಲಾ ಶಿಕ್ಷಕರ ಕರ್ತವ್ಯ ಎಂದು ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮೀಜಿ ಹೇಳಿದರು.
ಹಿರೇಕಲ್ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕ ವೃತ್ತಿಯಲ್ಲಿ ಪ್ರಾಮಾಣಿಕ ಸೇವೆಯ ಅಗತ್ಯವಿದೆ, ಉತ್ತಮ ನೀತಿಯುಕ್ತ ಬೊಧನೆ ಪಡೆದುಕೊಂಡ ಶಿಷ್ಯಂದಿರರು ದೇಶದ ಆಸ್ತಿಯಾಗಿ ಹೊರ ಹೊಮ್ಮುತ್ತಾರೆ ಎಂದು ಹೇಳಿದರು.
ಬಿಇಒ ಜಿ.ಎಸ್.ರಾಜಶೇಖರಪ್ಪ ಮಾತನಾಡಿ, ಶಿಕ್ಷಕರ ಸಂಘ ಇದುವರೆಗೂ ಉತ್ತಮ ಕಾರ್ಯ ಮಾಡುತ್ತಾ ಬಂದಿದ್ದು, ನೂತನ ಪದಾಧಿಕಾರಿಗಳು ಮುಂದಿನ ದಿನಗಳಲ್ಲಿ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಂಡು ಸಂಘವನ್ನು ಮುನ್ನಡೆಸಬೇಕು ಎಂದು ಹೇಳಿದರು.
ಸಂಘದ ನೂತನ ಅಧ್ಯಕ್ಷ ಎಸ್.ಸಿದ್ದಪ್ಪ ಮಾತನಾಡಿ, ಶಿಕ್ಷಕರ ಅನೇಕ ಬೇಡಿಕಗಳನ್ನು ಈಡೇರಿಸುವಲ್ಲಿ ಸಂಘ ಸತತ ಪ್ರಯತ್ನ ಮಾಡುತ್ತಿದೆ ಮುಂದಿನ ದಿನಗಳಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಎಕ್ ಕೆಜಿ ಪ್ರಾರಂಭ ಮಾಡುವುದು ಮತ್ತು ಶಿಕ್ಷಕರ ಹಾಗೂ ಮಕ್ಕಳ ಅನುಪಾತದ ಬಗ್ಗೆ ಹೋರಾಡಲಾಗುವುದು ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಕೆ.ಎಂ.ಕರಿಬಸಯ್ಯ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಸಿ.ಎನ್. ವಿರೂಪಾಕ್ಷಪ್ಪ, ಸಂಘದ ಸಹ ಕಾರ್ಯದರ್ಶಿ ಜಯಾಬಾಸೂರು, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಡಾ| ವಿಶ್ವನಟೇಶ್ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಎಚ್. ಕೆ.ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು.