ಬೆಂಗಳೂರು: ಶಿಕ್ಷಕಿ ಸಾಕಮ್ಮ ಕೊಲೆ ಪ್ರಕರಣದ ತನಿಖೆ ಸಮರ್ಪಕವಾಗಿ ನಡೆಸದೆ, ಸಾಕ್ಷ್ಯ ಸಾಬೀತುಪಡಿವಸುವಲ್ಲಿ ವಿಫಲರಾದ ಕಾರಣಕ್ಕೆ ತುಮಕೂರು ಗ್ರಾಮಾಂತರ ಡಿವೈಎಸ್ಪಿಒ.ಬಿ.ಕಲ್ಲೇಶಪ್ಪ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಪ್ರಕರಣದ ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ. ರವಿ ಮಳಿಮಠ ಹಾಗೂ ನ್ಯಾ. ಜಾನ್ ಮೈಕೆಲ್ ಕುನ್ಹಾ ಅವರಿದ್ದ ವಿಭಾಗೀಯಪೀಠ, ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾದ ಡಿವೈಎಸ್ಪಿ ಕಲ್ಲೇಶಪ್ಪ ಅವರನ್ನು ತಕ್ಷಣ ಅಮಾನತುಗೊಳಿಸುವಂತೆ ಆದೇಶಿಸಿತು.
ಈ ಪ್ರಕರಣ ನಡೆದದ್ದು 2010ರಲ್ಲಿ ಆಗ ಕಲ್ಲೇಶಪ್ಪ ಇನ್ಸ್‌ಪೆಕ್ಟರ್ ಆಗಿದ್ದರು. ಈಗ ಸೇವಾ ಬಡ್ತಿ ಹೊಂದಿ ಡಿವೈಎಸ್ಪಿ ಆಗಿದ್ದಾರೆ. ಮಂಗಳವಾರ (ಸೆ.18)ರಂದು ಪ್ರಕರಣದ ವಿಚಾರಣೆ ವೇಳೆ ಕಲ್ಲೇಶಪ್ಪ ಖುದ್ದು ಹಾಜರಾಗಿದ್ದರು. ತನಿಖೆಯ ಲೋಪಗಳನ್ನು ಗಮನಿಸಿದ ನ್ಯಾಯಪೀಠ, “ಸೇವೆಯಿಂದ ಅಮಾನತುಗೊಳಿಸಲು ಇದೊಂದು ಅರ್ಹ ಪ್ರಕರಣ’, ಬೇರೆ ಯಾವ ಶಿಕ್ಷೆ ವಿಧಿಸಬಹುದು ನೀವೇ ಹೇಳಿ ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿತ್ತು. ಈ ಮಧ್ಯೆ ಕಲಾಪದ ಸಮಯ ಮುಗಿದಿದ್ದರಿಂದ, ನ್ಯಾಯಪೀಠ ತೀರ್ಪು ಪ್ರಕಟಿಸಿರಲಿಲ್ಲ.
ಬುಧವಾರ ಬೆಳಿಗ್ಗೆ ಪ್ರಕರಣ ವಿಚಾರಣೆಗೆ ಕೈಗೆತ್ತಿಕೊಂಡಾಗ ಕಲ್ಲೇಶಪ್ಪ ನ್ಯಾಯಾಲಯದಲ್ಲಿ ಹಾಜರಿರಲಿಲ್ಲ. ಡಿವೈಎಸ್ಪಿ ಎಲ್ಲಿ ಎಂದು ನ್ಯಾಯಮೂರ್ತಿಗಳು ಕೇಳಿದಾಗ, ಅವರು ಬಂದಿಲ್ಲ. ಬರುವುದು ಬೇಡ ಎಂದು ನಾನೇ ಹೇಳಿದೆ ಎಂದು ಸರ್ಕಾರಿ ವಕೀಲರು ಹೇಳಿದರು. ಇದಕ್ಕೆ ಸಿಟ್ಟಾದ ನ್ಯಾಯಮೂರ್ತಿಗಳು ಡಿವೈಎಸ್ಪಿ ಅವರನ್ನು ತಕ್ಷಣ ಅಮಾನತುಗೊಳಿಸುವಂತೆ ಆದೇಶಿಸಿತು. ಮಧ್ಯಾಹ್ನ ಹಾಜರಾದ ಡಿವೈಎಸ್ಪಿ ಅಮಾನತು ಆದೇಶ ಹಿಂಪಡೆಯುವಂತೆ ಮನವಿ ಮಾಡಿದರು. ನಿಮ್ಮ ಈ ಬೇಜವಾಬ್ದಾರಿ ನಡವಳಿಕೆಯಿಂದ ಕಿರಿಕಿರಿ ಉಂಟು ಮಾಡಬೇಡಿ ಎಂದು ಚಾಟಿ ಬೀಸಿದ ನ್ಯಾಯಪೀಠ, ಅಮಾನತು ಆದೇಶ ಹಿಂಪಡೆಯಲು ನಿರಾಕರಿಸಿತು.
ಇದೇ ವೇಳೆ ತನಿಖಾಧಿಕಾರಿಗಳು ಸಾಕ್ಷ್ಯ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ಪ್ರಕರಣದ ಆರೋಪಿಗಳಾದ ಕೃಷ್ಣಪ್ಪ, ಶಿವಣ್ಣ, ಪುರುಷೋತ್ತಮ, ಮಂಜುನಾಥ, ರೋಷನ್ ಹಾಗೂ ಮನು ಇವರನ್ನು ದೋಷಮುಕ್ತಗೊಳಿಸಿ ನ್ಯಾಯಪೀಠ ಆದೇಶಿಸಿತು.