ಮೈಸೂರು: ಗುರು ಬ್ರಹ್ಮ ಗುರು ವಿಷ್ಣು ಎಂದು ಹೇಳುವುದು ಸುಲಭ. ಆದರೆ, ಶಿಕ್ಷಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಆಗಮಿಸಿದಾಗ ಹೇಗೆ ವರ್ತಿಸುತ್ತಾರೆ ಎಂಬುದನ್ನು ಮನಗಂಡು ಶಿಕ್ಷಕ ಸ್ನೇಹಿ ಆ್ಯಪ್‌ನ್ನು ಜನವರಿಯಲ್ಲಿ ಜಾರಿಗೆ ತರುತ್ತಿದ್ದು, ಶಿಕ್ಷಕರು ತಮ್ಮ ಸಮಸ್ಯೆಯನ್ನು ಪರಿಹರಿಕೊಳ್ಳಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.
ಮೈಸೂರು ವಿಭಾಗದ ಜಿಲ್ಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪೂರ್ವ ತಯಾರಿ ಸಂಬಂಧ ಮಂಗಳವಾರ ನಗರದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫಲಿತಾಂಶ ಹೆಚ್ಚಳವಾಗಬೇಕಾದರೆ ಕಲಿಕಾ ಗುಣಮಟ್ಟ ವೃದ್ಧಿಸಿಕೊಳ್ಳಬೇಕು. ಪರೀಕ್ಷೆಯಲ್ಲಿ ಮುಖ್ಯವಾಗಿ ಪ್ರಶ್ನೆ ಪತ್ರಿಕೆಗಳ ಸೋರಿಕೆಯಿಂದ ಶಿಕ್ಷಣ ವ್ಯವಸ್ಥೆ ಹಾಳಾಗುವ ಸಂಭವವಿರುವುದರಿಂದ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗದಂತೆ ನೋಡಿಕೊಳ್ಳಬೇಕು.
ಮಕ್ಕಳು ಪರೀಕ್ಷೆಯಲ್ಲಿ ನಕಲು ಮಾಡಬಾರದು ಹಾಗೂ ಮೌಲ್ಯ ಮಾಪನದ ವೇಳೆ ಶಿಕ್ಷಕರು ಬಹಿಷ್ಕಾರ ಮಾಡುತ್ತೇವೆ ಎನ್ನುವ ಬದಲು ಪ್ರತಿ ಪತ್ರಿಕೆ ಹಿಂದೆ ನಾಡಿನ ಆಸ್ತಿ ಇದೆ ಎಂದು ಭಾವಿಸಿ ಮೌಲ್ಯ ಮಾಪನ ಮಾಡಿ ಎಂದು ತಿಳಿಸಿದರು. ಪರೀಕ್ಷೆಯಲ್ಲಿ ಉತ್ತಮ ಅಂಕ ತೆಗೆದುಕೊಳ್ಳದ ವಿದ್ಯಾರ್ಥಿಗಳ ಬಗ್ಗೆ ಗಮನಹರಿಸಬೇಕು. ಜಿಪಂ ಸಿಇಒ ಹಾಗೂ ಡಿಡಿಪಿಐಗಳು ಒಟ್ಟಿಗೆ ಕೆಲಸ ಮಾಡುವ ಕಡೆ ಉತ್ತಮ ಫಲಿತಾಂಶ ಬರುತ್ತದೆ ಎಂದರು.
ಮಕ್ಕಳ ಮೇಲೆ ಒತ್ತಡ, ಆತಂಕ, ಭಯವನ್ನುಂಟು ಮಾಡಬೇಡಿ. ಶಿಕ್ಷಕರಿಗೆ ಅವಕಾಶ ಸಿಕ್ಕಿದಾಗ ಮಕ್ಕಳಿಗೆ ಪ್ರೋತ್ಸಾಹ ನೀಡಿ, ಅವರಿಗೆ ಹಲವಾರು ಮಹಾನ್ ಸಾಧಕರ ಬಗ್ಗೆ ಅರಿವು ಮೂಡಿಸಿ. ಪರೀಕ್ಷೆ ಎಂಬುದು ರಣರಂಗವಲ್ಲ ಅದು ಕ್ರೀಡಾಂಗಣ ಎನ್ನುವ ಭಾವನೆ ಮೂಡವಂತೆ ಮಾಡಿ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು. ಕಡ್ಡಾಯ ವರ್ಗಾವಣೆ ತೆಗೆದು ಹಾಕುವ ಸಂಬಂಧ ವಿಧಾನಪರಿಷತ್ ಸದಸ್ಯರೊಂದಿಗೆ ಚರ್ಚಿಸಲಾಗುತ್ತಿದೆ.
ಶಿಕ್ಷಕರ ಹೊಸ ವರ್ಗಾವಣೆಗೆ ಹೊಸ ನೀತಿ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದರು. ಸಭೆಯಲ್ಲಿ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ.ಸುಮಂಗಲಿ, ಪ್ರೌಢಶಿಕ್ಷಣ ನಿರ್ದೇಶಕರಾದ ಕರಿಚಿನ್ನಣ್ಣವರ್ ಮತ್ತು ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಬಿಇಒ, ಡಿಡಿಐಪಿ ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ವೇಳೆ, ನಗರದ ಪೀಪಲ್ಸ್‌ಪಾರ್ಕ್ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ನಗರ ಕೇಂದ್ರ ಗ್ರಂಥಾಲಯ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವಿದ್ಯಾರ್ಥಿಯನ್ನು ಆದರ್ಶವಾಗಿಟ್ಟುಕೊಳ್ಳಿ: ಆನೇಕಲ್ ತಾಲೂಕಿನ ಚಿಕ್ಕನಹಳ್ಳಿಯ ಪರಿಶಿಷ್ಟ ಜಾತಿ ಕುಟುಂಬದ ಒಂದು ನಿದರ್ಶನ ಹೇಳಿದ ಸಚಿವರು, ಮಗುವಿನ ತಂದೆ ತೀರಿಕೊಂಡು ತಾಯಿಯೇ ಬೆಳೆಸಿದ್ದರು. ಆದರೆ ಮಗನನ್ನು ಶಾಲೆಗೆ ಸೇರಿಸಿರಲಿಲ್ಲ. ನಿರ್ಮಲಾ ಟೀಚರ್ ಅವರ ಶ್ರಮದಿಂದ ಅಂಜನಪ್ಪ ಶಾಲೆಗೆ ಸೇರಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 91ಅಂಕ ಪಡೆದು ಉತ್ತೀರ್ಣನಾಗಿ ಸಿಇಟಿಯಲ್ಲಿ 103ನೇ ರ್‍ಯಾಂಕ್, ಜೆಎಇ ಪರೀಕ್ಷೆಯಲ್ಲಿ 91ನೇ ರ್‍ಯಾಂಕ್ ಪಡೆದಿದ್ದು, ಮುಂಬೈ ಐಐಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನಾವು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದೆಂಬುದಕ್ಕೆ ಅವರು ಉದಾಹರಣೆಯಾಗಿ¨ªಾರೆ ಎಂದು ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.