ಮಧುಗಿರಿ: ಸಾವಿರಾರು ಸಂಬಳ ಪಡೆಯುವ ಶಿಕ್ಷಕರು ವಾರದ ರಜೆ ಸಿಕ್ಕರೆ ತಮ್ಮದೆ ಕೆಲಸಗಳಲ್ಲಿ ನಿರತರಾಗಿರುತ್ತಾರೆ. ಆದರೆ, ಇಲ್ಲಿ ಶಿಕ್ಷಕ ದಂಪತಿ ತಮ್ಮ ಇಬ್ಬರು ಮಕ್ಕಳ ಸಮೇತ ರಸ್ತೆಯ ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚುವ ಕಾರ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದು, ವೀಕೆಂಟ್ ವಿತ್ ಪಬ್ಲಿಕ್ ವರ್ಕ್ ಎಂಬಂತೆ ಕೆಲಸ ಮಾಡಲು ಮುಂದೆ ಬಂದಿದೆ.
ಮಣ್ಣು ಜಲ್ಲಿ ಹಾಕುತ್ತಾರೆ: ಮಧುಗಿರಿ ತಾಲೂಕಿನ ಪುರವರದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ದಂಪತಿಗಳಾದ ಫಣೀಂದ್ರನಾಥ್, ಇಂದ್ರಮ್ಮ ತಮ್ಮ ಮಕ್ಕಳಾದ ಸಿರಿ ಮತ್ತು ಕಲ್ಯಾಣ್ ಜೊತೆಗೂಡಿ ಮಧುಗಿರಿ- ಹಿಂದೂಪುರ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಗೆ ಮಣ್ಣು-ಜಲ್ಲಿ ಹಾಕಿ ಮುಚ್ಚಿದ್ದಾರೆ. ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲೇ ಮೆಚ್ಚುಗೆ ಮಹಾಪೂರವೇ ಹರಿದು ಬಂದಿದೆ. ಶಿಕ್ಷಕ ಫಣೀಂದ್ರನಾಥ್ ಎಸ್ಸಿ-ಎಸ್ಟಿ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾಗಿದ್ದು ಈಗಾಗಲೇ ಹಲವು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ಶಾಲೆ ಮಕ್ಕಳಿಗೆ ಉಚಿತವಾಗಿ ನೋಟ್‌ಪುಸ್ತಕ ನೀಡುವ ಇವರು ಶಿಕ್ಷಕರು ಹಾಗೂ ಸಾರ್ವಜನಿಕವಾಗಿ ಉತ್ತಮ ಹೆಸರುಗಳಿಸಿದ್ದಾರೆ.
ಖಂಡನೆ:ಹಲವು ಬಾರಿ ಶಿಕ್ಷಕರೇ ಕಾನೂನು ಮೀರಿ ವರ್ತಿಸಿದರೆ ಅದನ್ನು ನಿಷ್ಟೂರವಾಗಿ ಖಂಡಿಸಿದ್ದು, ಬಿಇಒ ಅವರಿಗೂ ದೂರು ನೀಡಿ ಶಿಕ್ಷಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ಇಂತಹ ವ್ಯಕ್ತಿತ್ವ ಹೊಂದಿರುವ ಫಣೀಂದ್ರನಾಥ್, ಕಳೆದ ವಾರ ಇದೇ ರಸ್ತೆಯಲ್ಲಿ ನಿವೃತ್ತ ಶಿಕ್ಷಕ ವಿಜಯ್‌ಕುಮಾರ್ ಎಂಬವರು ಬೈಕ್ ನಲ್ಲಿ ಬಿದ್ದು ಗಾಯಗೊಂಡಿದ್ದನ್ನು ಕಣ್ಣಾರೆ ಕಂಡು ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಈ ರೀತಿಯ ಕೆಲಸವನ್ನು ಮುಂದಿನ ದಿನಗಳಲ್ಲಿ ಪ್ರತಿ ಭಾನುವಾರ ಅಥವಾ ಶನಿವಾರದ ರಜಾದಿನಗಳಲ್ಲಿ ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಕರೆ ಮಾಡಿದರೆ ಕೈಲಾದ ಸಹಾಯ: ಯಾರೇ ತಮ್ಮ ಮೊ.7026072445 ಕ್ಕೆ ಕರೆ ಮಾಡಿದರೆ ತನ್ನ ಕುಟುಂಬ ಸಮೇತ ಅಲ್ಲಿಗೆ ಬಂದು ನಮ್ಮ ಕೈಲಾದ ಕಾರ್ಯ ಮಾಡಿ ಬರುವುದಾಗಿ ತಿಳಿಸಿದ್ದಾರೆ. ಸಮಾಜದ ಸೇವೆಯಲ್ಲಿ ತೊಡಗಿಕೊಳ್ಳುವ ಮನೋ ಭಾವವನ್ನು ನನ್ನ ಮಕ್ಕಳಿಗೆ ಕಲಿಸುತ್ತಿರುವ ಹೆಮ್ಮೆಯಿದೆ. ಈ ನಿರ್ಧಾರಕ್ಕೆ ಸಹಕಾರ ವ್ಯಕ್ತ ಪಡಿಸಿರುವ ತನ್ನ ಪತ್ನಿ ಇಂದ್ರಮ್ಮ ಹಾಗೂ ಮಕ್ಕಳಿಗೂ ನಾನು ಮೊದಲು ಧನ್ಯವಾದ ಹೇಳ ಬಯಸುತ್ತೇನೆ ಎಂದು ನಿಸ್ವಾರ್ಥಿ ಫಣೀಂದ್ರನಾಥ್ ತಿಳಿಸಿದ್ದಾರೆ.
ಈ ಕೆಲಸಕ್ಕೆ ನಮ್ಮ ನಿವೃತ್ತ ಶಿಕ್ಷಕರ ಅಪ ಘಾತವೇ ಸ್ಪೂರ್ತಿ. ಅದಕ್ಕಾಗಿ ಈ ಕಾರ್ಯಕ್ಕೆ ಮನಸ್ಸು ಮಾಡಿದ್ದು, ಕ್ಷೇತ್ರದಲ್ಲಿ ಎಲ್ಲಾದರೂ ರಸ್ತೆ ಗುಂಡಿಗಳಿದ್ದಲ್ಲಿ ಕರೆ ಮಾಡಿದರೆ ಅಲ್ಲಿಗೆ ರಜಾದಿನಗಳಲ್ಲಿ ತಮ್ಮ ಕೈಲಾದ ಸೇವೆ ಮಾಡುತ್ತೇವೆ. ಇದು ಇಂದಿನ ಮಕ್ಕಳಿಗೆಸಾಮಾಜಿಕ ಸೇವೆಯ ಪರಿಚಯವಾಗಲಿದೆ.
–ಫಣೀಂದ್ರನಾಥ್, ಶಿಕ್ಷಕರು
-ಮಧುಗಿರಿ ಸತೀಶ್