Advertisement

ಅಧ್ಯಾಪಕರ “ಡ್ರೆಸ್‌ಕೋಡ್‌’ವಿದ್ಯಾರ್ಥಿಗಳಿಂದ ನಿರ್ಧಾರ!

03:45 AM Feb 01, 2017 | Team Udayavani |

ಬೆಂಗಳೂರು: ಕಾಲೇಜುಗಳಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಯಾವ ರೀತಿಯ ಉಡುಪು ಧರಿಸಬೇಕು. ಅವರ ವಸ್ತ್ರ ಸಂಹಿತೆ (ಡ್ರೆಸ್‌ಕೋಡ್‌) ಹೇಗಿರಬೇಕು ಎಂಬುದನ್ನು ವಿದ್ಯಾರ್ಥಿ ಸಮುದಾಯ ನಿರ್ಧರಿಸುವ ಸಮಯ ಬಂದಿದೆ. ಅಧ್ಯಾಪಕರು ಹಾಗೂ ಸಿಬ್ಬಂದಿಯ ವಸ್ತ್ರ ಸಂಹಿತೆ ಹೇಗಿರಬೇಕು ಎಂಬುದರ ಬಗ್ಗೆ ವಿದ್ಯಾರ್ಥಿ ಸಮುದಾಯದಿಂದಲೇ ಸಲಹೆ-ಸೂಚನೆ ಪಡೆಯಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ.

Advertisement

ಈ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸಿರುವ ಇಲಾಖೆ, ಕಾಲೇಜುಗಳಲ್ಲಿ ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗ ಶಿಸ್ತು ಬದ್ಧವಾಗಿ ತಮ್ಮ ವೃತ್ತಿಗೆ ತಕ್ಕಂತ ಉಡುಪು ಧರಿಸಿ ಬರುತ್ತಿದ್ದಾರೆಯೇ? ಇಲ್ಲವಾದರೆ ಅವರ ವಸ್ತ್ರ ಸಂಹಿತೆ ಹೇಗಿರಬೇಕೆಂಬುದರ ಬಗ್ಗೆ ಸಲಹೆ ಕೊಡಿ ಎಂದು ಕೇಳಿದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ವರ್ಗದವರಿಗೆ ಹೆಸರು ಮತ್ತು ಹುದ್ದೆಯ ಬ್ಯಾಡ್ಜ್ ಸಹಿತ “ವಸ್ತ್ರ ಸಂಹಿತೆ’ ಜಾರಿಗೆ ತರಲು ಇಲಾಖೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ವಸ್ತ್ರ ಸಂಹಿತೆ ಬಗ್ಗೆ ವಿದ್ಯಾರ್ಥಿಗಳಿಂದ ಸಲಹೆಗಳನ್ನು ಸಂಗ್ರಹಿಸಿ ಕಳುಹಿಸಿಕೊಡುವಂತೆ ರಾಜ್ಯದ ಎಲ್ಲ 412 ಪದವಿ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚಿಸಿದೆ.

ಕಾಲೇಜುಗಳಲ್ಲಿ ಕೆಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ತಮ್ಮ ವೃತ್ತಿಗೆ ತಕ್ಕಂತೆ ಶಿಸ್ತು ಬದ್ಧ ಹಾಗೂ ವಿದ್ಯಾರ್ಥಿಗಳಲ್ಲಿ ಗೌರವ ಭಾವ ಮೂಡಿಸುವಂತೆ ಉಡುಪು ಧರಿಸಿ ಕಾಲೇಜಿಗೆ ಬಾರದೆ, ತಮಗಿಷ್ಟ ಬಂದಂತೆ ವಸ್ತ್ರಗಳನ್ನು ಧರಿಸಿ ಬರುತ್ತಿರುವ ಬಗ್ಗೆ ಸರ್ಕಾರಕ್ಕೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಇಲಾಖೆ ಈ ಕ್ರಮಕ್ಕೆ
ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಯಲಬುರ್ಗಾದ ಶಿಕ್ಷಕರೊಬ್ಬರು ಇತ್ತೀಚೆಗೆ ಸರ್ಕಾರಕ್ಕೆ ಪತ್ರ ಬರೆದು, ಕಾಲೇಜುಗಳಲ್ಲಿ ಕೆಲ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೂ ತಮಗೂ ಯಾವುದೇ ವಿಭಿನ್ನತೆ ಇಲ್ಲದಂತೆ ಉಡುಪು ಧರಿಸಿ ಬರುತ್ತಿದ್ದಾರೆ. ಸೂಕ್ತ ವಸ್ತ್ರ ಸಂಹಿತೆ ಜಾರಿಗೆ ತರುವಂತೆ ಕೋರಿದ್ದರು. ಪತ್ರವನ್ನು ಸರ್ಕಾರವು ಕಾಲೇಜು ಶಿಕ್ಷಣ ಇಲಾಖೆಗೆ ರವಾನಿಸಿ ಅಭಿಪ್ರಾಯ ಕೇಳಿದೆ.
ಈ ಕುರಿತು “ಉದಯವಾಣಿ’ಯೊಂದಿಗೆ ಮಾತನಾಡಿದ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಪ್ರೊ.ಎಚ್‌.ಕುಸುಮಾ, ಇಲಾಖೆಯ ಎಲ್ಲಾ ವಿಭಾಗಗಳ ಜಂಟಿ ನಿರ್ದೇಶಕರ ಮೂಲಕ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರಿಗೆ ಸುತ್ತೋಲೆ ಕಳುಹಿಸಿ ಸಲಹೆ ಸಂಗ್ರಹಿಸಿ ಕಳುಹಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು. 

Advertisement

ವಿದ್ಯಾರ್ಥಿಗಳ ಸಲಹೆ ಸೂಕ್ತವಲ್ಲ
“ವಸ್ತ್ರ ಸಂಹಿತೆ’ ಜಾರಿ ಆಲೋಚನೆಯನ್ನು ರಾಜ್ಯ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕರ ಸಂಘದ ಕಾರ್ಯದರ್ಶಿ ರಾಮಣ್ಣ ಸ್ವಾಗತಿಸಿದ್ದಾರೆ. ಆದರೆ, ಈ ವಿಚಾರವಾಗಿ ವಿದ್ಯಾರ್ಥಿಗಳಿಂದ ಸಲಹೆ ಆಹ್ವಾನಿಸಿರುವುದು ಸರಿಯಲ್ಲ ಎಂದಿದ್ದಾರೆ. ಕೆಲವು ಮಂದಿ ತಮ್ಮ ಘನತೆಗೆ ತಕ್ಕಂತೆ ವಸ್ತ್ರ ಸಂಹಿತೆ ಪಾಲಿಸದಿರಬಹುದು. ಅಂತಹವುಗಳನ್ನು ತಡೆಯಲು ಇದು ಸಹಕಾರಿಯಾಗಬಹುದು. ಆದರೆ, ಬಹುತೇಕ ಬೋಧಕ, ಬೋಧಕೇತರರು ಉತ್ತಮ ರೀತಿಯ ವಸ್ತ್ರ ಸಂಹಿತೆಯನ್ನೇ ಅನುಸರಿಸುತ್ತಿದ್ದಾರೆ. ಈ ಬಗ್ಗೆ ಉಪನ್ಯಾಸಕರು, ಸಾರ್ವಜನಿಕರು, ಪೋಷಕರಿಂದ ಸಲಹೆ ಪಡೆಯಬಹುದಿತ್ತು. ವಿದ್ಯಾರ್ಥಿಗಳಿಂದ ಪಡೆಯುವುದರಿಂದ ಕೆಲ ಪುಂಡ ವಿದ್ಯಾರ್ಥಿಗಳಿಂದ ಅಪಹಾಸ್ಯಕಾರಿ ಉತ್ತರಗಳು
ಬರಬಹುದು. ಅವು ಇಲಾಖೆಗೆ ಮತ್ತು ಸಿಬ್ಬಂದಿಗೆ ಮುಜುಗರ ತರಬಹುದು ಎಂದು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next