ಸೊಲ್ಲಾಪುರ: ಸಾಧನೆ ಮಾಡುವ ಮನಸ್ಸಿದ್ದರೆ ಏನೆಲ್ಲವೂ ಮಾಡಬಹುದು. ಸತತ ಪ್ರಯತ್ನ ಹಾಗೂ ಉನ್ನತ ಗುರಿಯಿಂದ ಯಶಸ್ಸು ಪಡೆಯಬಹುದು. ಯಶಸ್ಸು ತಾನಾಗಿಯೇ ಬರುವಂತ ವಸ್ತುವಲ್ಲ. ಅದು ಪರಿಶ್ರಮದಿಂದ ಮಾತ್ರ ದೊರೆಯುತ್ತದೆ ಎಂದು ವಿಜಯಪುರ ಮಹಿಳಾ ವಿಶ್ವ ವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕ ರಮೇಶ ಜೋಶಿ ಅವರು ಹೇಳಿದರು.
ಇಂಗ್ಲಿಷ್ ಉಪನ್ಯಾಸಕರ ನೇಮಕಾತಿಗಾಗಿ ಹಾಗೂ ನೆಟ್-ಸ್ಲೆಟ್ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ದಾನಯ್ಯ ಕವಟಗಿಮಠ ಅವರು ಬರೆದ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕರ್ನಾಟಕ ಪರೀಕ್ಷ ಪ್ರಾಧಿ ಕಾರ, ಕೆಪಿಎಸ್‌ಸಿ ನಡೆಸುವ ಉಪನ್ಯಾಸಕರ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾಗುವಂತಹ ಹಾಗೂ ನೆಟ್, ಸ್ಲೆಟ್‌ಗೆ ಅನುಕೂಲ ವಾಗಲೆಂದು, ತಾವು ಸ್ವತ: 24 ಸ್ಲೆಟ್, 2 ನೆಟ್, 3 ಟಿಇಟಿ, 1 ಪಿ.ಎಚ್‌ಡಿ ಪರೀಕ್ಷೆಗಳನ್ನು ಉತ್ತೀರ್ಣರಾಗಿ ವಿಶ್ವದಾಖಲೆ ನಿರ್ಮಿಸಿದ ದಾನಯ್ಯ ಕವಟಗಿಮಠ ಅವರು ತಮ್ಮ ಸ್ವಂತ ಅನುಭವದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಕೃತಿ ಬರೆದಿದ್ದಾರೆ ಎಂದರು.
ನನ್ನ ವಿದ್ಯಾರ್ಥಿಯೊಬ್ಬರು ಇಷ್ಟೊಂದು ಉನ್ನತ ಯಶಸ್ಸು ಸಾಧಿಸಿದ್ದಲ್ಲದೆ ತಮ್ಮ ಗುರುಗಳಿಂದ ಕೃತಿ ಬಿಡುಗಡೆಗೊಳಿಸಿರುವುದು ನನಗೆ ಬಹಳ ಸಂತೋಷ ತಂದಿದೆ. ಇದಕ್ಕಿಂತ ದೊಡ್ಡ ಗೌರವ ಬೇರೆ ಯಾವುದಿಲ್ಲ. ಶಿಷ್ಯಾದೆಚ್ಛೆ ಪರಾಜಯಂ ಎಂಬಂತೆ ಯಾವಾಗ ವಿದ್ಯಾರ್ಥಿಗಳು ತಮಗೆ ವಿದ್ಯೆ ನೀಡಿದ ಗುರುಗಳಿಗಿಂತ ದೊಡ್ಡ ಸ್ಥಾನಕ್ಕೆ ಏರುತ್ತಾರೋ ಅದು ಆ ಗುರುಗಳಿಗೆ ನೀಡಿದ ಗೌರವ ಎಂದು ನುಡಿದರು. ಈ ಸಂದರ್ಭದಲ್ಲಿ ಬ್ರಿಟಿಷ್ ಕೌನ್ಸಿಲ್‌ನ ಮಹಾರಾಷ್ಟ್ರದ ವಿಭಾಗೀಯ ಪ್ರಮುಖರಾದ ಯೋಗೇಶ ಕಬಾಡೆ, ಪ್ರಾ| ಗೊಪಾಳ ಕುಲಕರ್ಣಿ, ಸಾವಳಿಗಿಯ ಎಸ್. ಹಿರೇಮಠ ಉಪಸ್ಥಿತರಿದ್ದರು.