Advertisement

ಶಿಕ್ಷಕರ ವರ್ಗ ಸಲೀಸು; ಮಿತಿ ಶೇ. 15ಕ್ಕೆ ಹೆಚ್ಚಳ

03:45 AM Mar 25, 2017 | |

ಬೆಂಗಳೂರು: ಪತಿ-ಪತ್ನಿ ವರ್ಗಾವಣೆಗೆ ಆದ್ಯತೆ ನೀಡುವುದು, ನಗರ ಪ್ರದೇಶಗಳಲ್ಲೇ ಬೀಡುಬಿಟ್ಟಿರುವ ಶಿಕ್ಷಕರನ್ನು ಗ್ರಾಮೀಣ ಪ್ರದೇಶಕ್ಕೆ ಸ್ಥಳಾಂತರಿಸುವುದು ಸೇರಿದಂತೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಭಾರೀ ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಇರುವ ಶೇ. 8ರ ವರ್ಗಾವಣೆ ಮಿತಿಯನ್ನು ವರ್ಷಕ್ಕೆ ಗರಿಷ್ಠ ಶೇ. 15ಕ್ಕೆ ಏರಿಸಲಾಗುತ್ತಿದೆ.

Advertisement

ಅಲ್ಲದೆ, ವರ್ಗಾವಣೆ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಜಿಲ್ಲೆಯನ್ನು ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ವಿಭಾಗವನ್ನು ಘಟಕವೆಂದು ಗುರುತಿಸಲು ತೀರ್ಮಾನಿಸಲಾಗಿದೆ. ಜತೆಗೆ ಅಂತರ್‌ ಘಟಕ ವರ್ಗಾವಣೆ ಮತ್ತು ಪತಿ-ಪತ್ನಿ ವರ್ಗಾವಣೆ ಪ್ರಕರಣಕ್ಕೆ ಇರುವ ಎಲ್ಲಾ ಮಿತಿಗಳನ್ನು ತೆಗೆದು ಹಾಕಲು ತೀರ್ಮಾನಿಸಲಾಗಿದೆ.

ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಅದಕ್ಕಾಗಿ ಕರ್ನಾಟಕ ನಾಗರೀಕ ಸೇವಾ ನಿಯಂತ್ರಣ ಮತ್ತು ಶಿಕ್ಷಕರ ವರ್ಗಾವಣೆ ಕಾಯ್ದೆ-2007ಕ್ಕೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದ್ದು, ಪ್ರಸ್ತುತ ಅಧಿವೇಶನದಲ್ಲಿ ತಿದ್ದುಪಡಿ ವಿಧೇಯಕ ಮಂಡಿಸಿ ಅನುಮೋದನೆ ಪಡೆಯಲು ನಿರ್ಧರಿಸಲಾಗಿದೆ.

ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ವಿಧಾನಸಬೆ ಮತ್ತು ವಿಧಾನ ಪರಿಷತ್‌ ಸದಸ್ಯರು, ಶಿಕ್ಷಕರ ಸಂಘಗಳು, ಶಿಕ್ಷಕರು, ಆಡಳಿತಾಧಿಕಾರಿಗಳಿಂದ ಬಂದ ಸಲಹೆಗಳನ್ನು ಆಧರಿಸಿ ಶಿಕ್ಷಕರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ.

ಯಾಕಾಗಿ ನಿಯಮ ಬದಲಾವಣೆ?
ಗ್ರಾಮೀಣ ಪ್ರದೇಶ ಮತ್ತು ಕೇಂದ್ರ ಸರ್ಕಾರ ಆಯೋಜಿತ ಯೋಜನೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಆದ್ಯತೆ ಮೇಲೆ ಭರ್ತಿ ಮಾಡುವುದು, ನಗರ ಪ್ರದೇಶಗಳಲ್ಲಿ ಸತತವಾಗಿ 10 ವರ್ಷಗಳಿಗಿಂತ ಹೆಚ್ಚು ಸೇವೆ ಸಲ್ಲಿಸಿದ ಶಿಕ್ಷಕರನ್ನು ವರ್ಗಾವಣೆಗೊಳಿಸಿ, ವಲಯ-ಎ (ನಗರ ಪ್ರದೇಶ) ಭಾಗದಲ್ಲಿ ಖಾಲಿ ಹುದ್ದೆಗಳನ್ನು ಸೃಷ್ಟಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಅವಕಾಶ ಕಲ್ಪಿಸುವುದು, ಕೌನ್ಸೆಲಿಂಗ್‌ ಆಧಾರಿತ ವರ್ಗಾವಣೆಗೆ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಸಹಾಯಕ ನಿರ್ದೇಶಕರು (ಮಧ್ಯಾಹ್ನ ಉಪಹಾರ ಯೋಜನೆ), ಬ್ಲಾಕ್‌ ಸಂಪನ್ಮೂಲ ವ್ಯಕ್ತಿಗಳು, ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿಗಳು, ಉಪ ಯೋಜನಾ ಸಮನ್ವಯಾಧಿಕಾರಿಗಳು, ವಿಷಯ ಪರಿವೀಕ್ಷಕರು, ಶೈಕ್ಷಣಿಕ ಸಮನ್ವಯಾಧಿಕಾರಿಗಳು (ಇಸಿಓ)ಗಳನ್ನೂ ಒಳಪಡಿಸಿ ಅವರನ್ನು ಅರ್ಹತಾ ಪರೀಕ್ಷೆ ನಿಯಮಗಳ ವ್ಯಾಪ್ತಿಗೆ ತರುವುದು ಈ ತಿದ್ದುಪಡಿಯ ಮೂಲ ಉದ್ದೇಶವಾಗಿದೆ.

Advertisement

ವರ್ಗಾವಣೆ ಯಾವ ರೀತಿ?
– ವರ್ಗಾವಣೆ ಉದ್ದೇಶಕ್ಕಾಗಿ ಘಟಕ ಹಿರಿತನದ ವ್ಯಾಖ್ಯಾನವನ್ನು ಬದಲಿಸುವುದು.
– ಸ್ಥಳ ನಿಯುಕ್ತಿಗಾಗಿ ಗರಿಷ್ಠ ಮತ್ತು ಕನಿಷ್ಟ ಮಿತಿ ನಿಗದಿಪಡಿಸುವುದು
– ನಗರ ಪ್ರದೇಶಗಳಲ್ಲಿ ಸತತ 10 ವರ್ಷ ಸೇವೆ ಪೂರ್ಣಗೊಳಿಸಿದ ನಿರ್ದಿಷ್ಟವಾದ ಕೆಲವೊಂದು ವರ್ಗದ ಶಿಕ್ಷಕರನ್ನು ಹೊರತುಪಡಿಸಿ ಇತರರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡುವುದು.
– ವಲಯ-ಎ (ನಗರ), ವಲಯ-ಬಿ (ಅರೆನಗರ) ಮತ್ತು ವಲಯ-ಸಿ (ಗ್ರಾಮೀಣ ಪ್ರದೇಶ) ಪ್ರದೇಶಗಳ ನಡುವೆ ಸರದಿಯಂತೆ ಶಿಕ್ಷಕರ ವರ್ಗಾವಣೆ.
– ವರ್ಗಾವಣೆಗಾಗಿ ವರ್ಷದಲ್ಲಿ ಶೇ. 15ರಷ್ಟು ಗರಿಷ್ಠ ಮಿತಿ ನಿಗದಿಪಡಿಸುವುದು.
– ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ಸೃಷ್ಟಿಯಾಗುವ ಹುದ್ದೆಗಳು ಮತ್ತು ಅತಿಮುಖ್ಯ ಎಂದು ಸೂಚಿಸುವ ಹುದ್ದೆಗಳನ್ನು ಭರ್ತಿ ಮಾಡಲು ಆದ್ಯತೆ ನೀಡುವುದು.
– ಮೇಲ್ವಿಚಾರಣೆ, ಸಮನ್ವಯತೆ ಮತ್ತು ಶೈಕ್ಷಣಿಕ ಮಾರ್ಗದರ್ಶನ ಮಾಡಬೇಕಾಗುವ ಹುದ್ದೆಗಳಿಗೆ ಪರೀಕ್ಷೆ ಶಿಫಾರಸು ಮಾಡುವುದು.
– ಅಂತರ್‌ಘಟಕ ವರ್ಗಾವಣೆ ಮತ್ತು ಪತಿ-ಪತ್ನಿ ವರ್ಗಾವಣೆಗಳಿಗೆ ಹೆಚ್ಚಿನ ಅವಕಾಶ ಒದಗಿಸುವುದು.

Advertisement

Udayavani is now on Telegram. Click here to join our channel and stay updated with the latest news.

Next