Advertisement
ಅಮ್ಮನನ್ನು ನಾನು ಶಿಕ್ಷಕಿಯಾಗಿ ನೋಡಿದ್ದು ಅದೇ ಮೊದಲು. ಆ ದಿನ ಮನೆಯಲ್ಲಿ ನನ್ನನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಅಮ್ಮನಿಗೆ ಕಾಲೇಜಿಗೆ ಹೋಗುವ ತರಾತುರಿ. ರಜೆ ಹಾಕಿ ಅಂತ ಅಪ್ಪನಿಗೆ ಹೇಳಿದರೆ, ಸಾಧ್ಯವೇ ಇಲ್ಲ ಅಂತ ತಲೆ ಆಡಿಸಿಬಿಟ್ಟರು. ಅಷ್ಟಕ್ಕೇ ಕೈ ಚೆಲ್ಲಿ ಅಮ್ಮ ಮನೆಯಲ್ಲಿ ಕೂರಲಿಲ್ಲ. ನನಗೆ ಅಂತ ಸ್ನ್ಯಾಕ್ಸ್ ಪ್ಯಾಕ್ ಮಾಡಿ, ಒಂದೆರಡು ಆಟಿಕೆಗಳನ್ನು, ಡ್ರಾಯಿಂಗ್ ಬುಕ್ ಅನ್ನು ತೆಗೆದುಕೊಂಡು ಬಸ್ ಹತ್ತಿಯೇಬಿಟ್ಟರು.
Related Articles
Advertisement
ಅದೇ ಬೇರೆ ಮಕ್ಕಳ ವಿಷಯಕ್ಕೆ ಬಂದರೆ, ರಾತ್ರಿಯೆಲ್ಲಾ ನಿದ್ದೆಕೆಟ್ಟು ರಿಸರ್ಚ್ ಮಾಡಿ, ಅವರಿಗೆ ಸಹಾಯ ಮಾಡುತ್ತಾರೆ. ನಮಗೆ ಪಾಠ ಹೇಳಿಕೊಡಲು ಇಲ್ಲದೇ ಇರುವ ಸಮಯ, ಬೇರೆ ಮಕ್ಕಳಿಗೆ ಹೇಳಿಕೊಡುವಾಗ ಅಮ್ಮನಿಗೆ ಎಲ್ಲಿಂದ ಬರುತ್ತೆ? ಹಾಗಂತ ಅಪ್ಪ ಪ್ರಶ್ನಿಸಿದರೆ, “ನನಗೆ ನನ್ನ ಮಕ್ಕಳು ಮಾತ್ರ ಉದ್ಧಾರ ಆಗಬೇಕು ಅನ್ನುವ ಸ್ವಾರ್ಥ ಇಲ್ಲ. ಯಾರ್ಯಾರಿಗೆ ಯೋಗ್ಯತೆ ಇದೆಯೋ ಅವರೆಲ್ಲ ಉದ್ಧಾರ ಆಗ್ತಾರೆ. ಅದರಲ್ಲೂ ನಾನು ಶಿಕ್ಷಕಿ ಆಗಿರುವುದು ಕೇವಲ ನಮ್ಮ ಮಕ್ಕಳಿಗೆ ಕಲಿಸಲು ಮಾತ್ರ ಅಲ್ಲ’ ಎಂದು ವಾದಿಸುತ್ತಾರೆ!
ಇಷ್ಟಕ್ಕೂ ಅಮ್ಮನೊಂದಿಗೆ ವಾದ ಮಾಡಿ ಗೆದ್ದವರುಂಟೆ?ನನ್ನ ಆರೋಪಗಳೇನೇ ಇರಲಿ, ಅಮ್ಮ ಹೇಳಿಕೊಟ್ಟಿದ್ದನ್ನು ನಾನು ಕಲಿತುದಕ್ಕಿಂತ, ಅವರು ಮಾಡುವುದನ್ನು ನೋಡಿ ಕಲಿತಿದ್ದೇ ಹೆಚ್ಚು. ಹೆತ್ತವರು ಮಾಡುವುದನ್ನು ನೋಡಿ ಮಕ್ಕಳು ಕಲಿಯುತ್ತಾರೆ, ಹೇಳುವುದನ್ನು ಕೇಳಿ ಅಲ್ಲ ಎನ್ನುವ ಮಾತಿಗೆ ಪುಷ್ಟಿ ನೀಡುವಂತೆ ನನ್ನ ಎಲ್ಲಾ ಕೆಲಸಗಳಲ್ಲೂ, ಚಟುವಟಿಕೆಗಳಲ್ಲೂ ಅಮ್ಮನ ಛಾಯೆ ಇದೆ. ನನಗೆ ಪಠ್ಯ ಪುಸ್ತಕಗಳನ್ನು ಬಿಟ್ಟು ಬೇರೆ ಎಲ್ಲಾ ಪುಸ್ತಕಗಳನ್ನು ಓದುವ ಗೀಳನ್ನು ಹತ್ತಿಸಿದ್ದು ಅಮ್ಮ. (ಅಮ್ಮನಿಗೂ ಹೀಗೇ ಅಂತೆ) ನಾನು ಸಣ್ಣ ವಯಸ್ಸಿನಲ್ಲಿಯೇ ಬರೆಯಲು ಪ್ರಾರಂಭಿಸಿದೆ. ನನಗೆ ಅನಿಸಿದ್ದನ್ನು ಕನ್ನಡ, ಇಂಗ್ಲಿಷ್‌ನಲ್ಲಿ ಸುಲಲಿತವಾಗಿ ಬರೆಯಲು ಮೂಲ ಪ್ರೇರಣೆಯೇ ಅಮ್ಮ. ಅಮ್ಮನಿಗೆ ಪುಸ್ತಕ ಓದ್ತಾ ಓದ್ತಾ ಮಲಗೋ ಅಭ್ಯಾಸವಿದೆ, ನನಗೂ… ಎಷ್ಟೋ ಸಲ ಅಂದುಕೊಂಡಿದ್ದೇನೆ, ಅಮ್ಮ ನನ್ನ ಬಾಲ್ಯದಲ್ಲಿ ಒಂದಾಗಿದ್ದಾರ ಅಥವಾ ನಾನು ಅವರ ಬಾಲ್ಯದಲ್ಲಿ ಒಂದಾಗಿದ್ದೇನ ಅಂತ! ಯಾವುದೇ ಸನ್ನಿವೇಶವಾಗಲಿ ಅಮ್ಮ ಕಣ್ಣಿಗೆ ಕಟ್ಟುವಂತೆ ಅದನ್ನು ವಿವರಿಸುತ್ತಾರೆ. ಅವರ ಬಾಲ್ಯದ ಕತೆಗಳನ್ನು ಅವರ ಬಾಯಿಯಿಂದ ಕೇಳುವುದೇ ಒಂದು ಮಜಾ.
ಗಣಿತವೊಂದನ್ನು ಬಿಟ್ಟು ಬೇರೆ ಎಲ್ಲ ವಿಷಯವನ್ನು ಚೆನ್ನಾಗಿ ಹೇಳಿಕೊಡ್ತಾರೆ. ಅಮ್ಮನ ಶಿಕ್ಷಕ ವೃತ್ತಿಯ ವೈಶಿಷ್ಟ್ಯವೇನೆಂದರೆ, ನರ್ಸರಿಯಿಂದ ಹಿಡಿದು ಸ್ನಾತಕೋತ್ತರ ಪದವಿ ತನಕ ಎಲ್ಲ ಹಂತಗಳಲ್ಲಿಯೂ ಅವರು ಪಾಠ ಮಾಡಿದ್ದಾರೆ. ತರಗತಿಯಲ್ಲಿ ಯಾರೇ ಇರಲಿ, ಯಾವ ವಯಸ್ಸಿನವರೇ ಇರಲಿ; ಅವರನ್ನು ಅರಿತು, ಅವರೊಂದಿಗೆ ಬೆರೆತು ಪಾಠ ಮಾಡುವ ಕಲೆ ಅಮ್ಮನಿಗೆ ಸಿದ್ಧಿಸಿದೆ. ಶಾಲೆಯಲ್ಲಿ ಟೀಚರ್ ಎಷ್ಟೇ ಚೆನ್ನಾಗಿ ಪಾಠ ಮಾಡಿದ್ದರೂ, ಒಂದು ಸಲ ಅಮ್ಮ ವಿವರಿಸಿಬಿಟ್ಟರೆ ನನಗೆ ಸಮಾಧಾನ. ಅದಕ್ಕಾಗಿ ಅಮ್ಮ ಸ್ವಲ್ಪ ಸಮಯ ಮಾಡಿಕೊಳ್ಳಬೇಕು ಅಷ್ಟೇ! -ಮನೋಜ್ಞ ವಿ. ರೆಡ್ಡಿ