Advertisement

ಶಿಕ್ಷಕ ಮತ್ತು ಪದವೀಧರ ಕ್ಷೇತ್ರ: ಮತದಾನದ ಅವಧಿ ವಿಸ್ತರಣೆಗೆ ಬಿಜೆಪಿ ಮನವಿ

06:18 PM Jun 03, 2022 | Team Udayavani |

ಬೆಂಗಳೂರು: ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯ ಮತದಾನದ ಅವಧಿ ವಿಸ್ತರಣೆ ಮಾಡುವಂತೆ ರಾಜ್ಯ ಬಿಜೆಪಿ ವತಿಯಿಂದ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಲಾಗಿದೆ.

Advertisement

ಪಕ್ಷದ ರಾಜ್ಯ ವಕ್ತಾರ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮತ್ತು ಚುನಾವಣಾ ಆಯೋಗ ವಿಭಾಗದ ರಾಜ್ಯ ಸಂಚಾಲಕ ದತ್ತಗುರು ಹೆಗಡೆ ಅವರು ಈ ಕುರಿತು ಮನವಿ ಸಲ್ಲಿಸಿದ್ದಾರೆ.

ಇದೇ ತಿಂಗಳು 13 ರಂದು ಶಿಕ್ಷಕರ ಎರಡು ಕ್ಷೇತ್ರಕ್ಕೆ ಹಾಗೂ ಪದವೀಧರರ ಎರಡು ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಆದ ಹಿನ್ನೆಲೆಯಲ್ಲಿ ಸಾಂದರ್ಭಿಕ ಸಮಸ್ಯೆಗಳಿಂದ ಮತದಾನದ ಅವಧಿ ವಿಸ್ತರಣೆ ಸೂಕ್ತ ಅನ್ನಿಸುತ್ತದೆ ಎಂದು ಗಮನ ಸೆಳೆಯಲಾಗಿದೆ.

ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಶಿಕ್ಷಕರೂ ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೊಂದಾವಣೆ ಮಾಡಿಕೊಂಡಿದ್ದು, ಹಲವು ಶಿಕ್ಷಕರು ಪದವೀಧರ ಕ್ಷೇತ್ರದ ಅಭ್ಯರ್ಥಿಗೆ ಮತ ಚುನಾವಣೆಯ ಅರ್ಹತೆ ಹೊಂದಿದ್ದು, ಶಿಕ್ಷಕ ಕ್ಷೇತ್ರದ ಅಭ್ಯರ್ಥಿಗೆ ಮತ್ತು ಪದವೀಧರ ಕ್ಷೇತ್ರದ ಅಭ್ಯರ್ಥಿಗೆ ಮತ ಚಲಾಯಿಸುತ್ತಾರೆ. ರಾಜ್ಯದ ಹಲವು ಮತಗಟ್ಟೆಗಳ ಕೋಣೆಯಲ್ಲಿ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ಅಭ್ಯರ್ಥಿಗಳಿಗೆ ಮತ ಹಾಕಬೇಕಾದ ಸಂದರ್ಭದಲ್ಲಿ ಒಬ್ಬ ಮತದಾರ ಮತದಾನದ ಕೋಣೆಯಿಂದ ಹೊರ ಬರುವ ಸಮಯ ವಿಳಂಬವಾಗುತ್ತದೆ ಎಂದು ಮನವಿ ತಿಳಿಸಿದೆ.

ಕೋವಿಡ್ ನಿಯಮಾನುಸಾರ ಮತದಾನ ಮಾಡುವುದು ಅನಿವಾರ್ಯವೆನ್ನುವುದು ಹಿಂದಿನ ಅನುಭವದಿಂದ ತಿಳಿಯುವುದು ಬಹಳ ಮುಖ್ಯ. ಹಲವು ಕಡೆ ಮತಗಟ್ಟೆಗಳು ಮತದಾರನ ಊರು-ಮನೆಯಿಂದ 15-20 ಕಿಲೋ ಮೀಟರ್ ದೂರವಿದ್ದು, ಮತದಾನಕ್ಕೆ ಬರಲು ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ. ಶಿಕ್ಷಕರಲ್ಲದವರು, ಪದವೀಧರರಲ್ಲದವರು ನಕಲಿ (ಡುಪ್ಲಿಕೇಟ್) ಮತದಾರರು ಮತದಾನಕ್ಕೆ ಬರುತ್ತಾರೆ ಎಂಬುದನ್ನು ಹಿಂದಿನ ಚುನಾವಣೆಯ ಅನುಭವ ತಿಳಿಸಿದೆ. ಕಾರಣ ಪ್ರತಿಯೊಬ್ಬ ಮತದಾನ ಅರ್ಹತೆಯನ್ನು ಪರಿಶೀಲಿಸಿ ಮತದಾನ ಮಾಡಲು ಅನುವು ಮಾಡಿಕೊಡಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಲಾಗಿದೆ.

Advertisement

ಶಿಕ್ಷಕ ಅಭ್ಯರ್ಥಿಗೆ ಹಾಗೂ ಪದವೀಧರ ಕ್ಷೇತ್ರದ ಅಭ್ಯರ್ಥಿಗೆ ಮತ ಹಾಕಲು ಎರಡು ಬ್ಯಾಲೆಟ್ ಪೇಪರ್ ಕೊಡಲಾಗುತ್ತದೆ. ಈ ಕೆಲಸಕ್ಕೂ ಸಮಯ ಬೇಕಾಗುತ್ತದೆ. ಎರಡೂ ಕ್ಷೇತ್ರದ ಅಭ್ಯರ್ಥಿಗಳಿಗೆ ಮತದಾನ ಮಾಡುವ ಮತದಾರರು ಎರಡು ಬೆರಳುಗಳಿಗೆ (ತೋರ ಬೆರಳು ಹಾಗೂ ಮಧ್ಯದ ಬೆರಳು) ಶಾಯಿ ಹಾಕಲಾಗುವುದು ಎಂದು ತಿಳಿದಿದೆ. ಆದರೆ ಶಿಕ್ಷಕ ಕ್ಷೇತ್ರಕ್ಕೆ ಮತ ಚುನಾಯಿಸಿದ ಮತದಾರನಿಗೆ ಯಾವ ಬೆರಳಿಗೆ ಪದವೀಧರ ಕ್ಷೇತ್ರದ ಅಭ್ಯರ್ಥಿಗೆ ಮತ ಹಾಕಿದವರು ಯಾವ ಬೆರಳಿಗೆ ಶಾಯಿ ಹಾಕಿಸಿಕೊಳ್ಳಬೇಕು ಎನ್ನುವ ತಿಳುವಳಿಕೆ ಮತದಾರನಿಗೆ ಲಭ್ಯವಿಲ್ಲ ಎಂದು ವಿವರಿಸಲಾಗಿದೆ.

ಮೇಲಿನ ಎಲ್ಲಾ ಸಂಗತಿಯನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಸೂಕ್ತ ತಿಳುವಳಿಕೆ ನೀಡಬೇಕು ಹಾಗೂ ಮತದಾನದ ಅವಧಿ ವಿಸ್ತರಣೆ ಮಾಡುವುದು ಅತ್ಯಂತ ನ್ಯಾಯಯುತ ಎಂದು ತಿಳಿಸುತ್ತಾ, ಈ ದಿಸೆಯಲ್ಲಿ ಯೋಚಿಸಿ ಹೆಚ್ಚಿನ ಸಮಯ ಅಂದರೆ ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲ 6 ಗಂಟೆಯ ವರೆಗೆ ವಿಸ್ತರಿಸಬೇಕೆಂದು ವಿನಂತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next