ಕಲಬುರಗಿ: ಮಾನವ ಜೀವನದ ಶ್ರೇಯಸ್ಸಿಗೆ ಗುರು ಮತ್ತು ಗುರಿ ಮುಖ್ಯ ಎಂದು ಬಾಳೆಹೊನ್ನೂರು ಜಗದ್ಗುರು ಪೀಠದ ರಂಭಾಪುರಿ ಡಾ| ವೀರಸೋಮೇಶ್ವರ ಜಗದ್ಗುರು ನುಡಿದರು.
ತೆಲಂಗಾಣ ರಾಜ್ಯದ ನಾರಾಯಣಪೇಟೆ ಜಿಲ್ಲೆಯ ಛೇಗುಂಟ ಶಿವ ಪಾರ್ವತಿ ಕ್ಷೇತ್ರದಲ್ಲಿ ವೀರಶೈವ ಧರ್ಮ ಸಂಸ್ಥಾಪನಾಚಾರ್ಯ ಜಗದ್ಗುರು ರೇಣುಕಾಚಾರ್ಯ ಮಂದಿರ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಅಂಗವಾಗಿ ನಡೆದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ತನಗಾಗಿ ತಾನು ಬಾಳುವುದು ಮುಖ್ಯವಲ್ಲ. ಇನ್ನೊಬ್ಬರ ಉನ್ನತಿಗಾಗಿ ಬದುಕಿ ಬಾಳುವುದು ಶ್ರೇಷ್ಠ. ನೊಂದವರ ಬೆಂದವರ ಬಾಳಿಗೆ ಧ್ವನಿಯಾಗಿ ಬೆಳಕು ತೋರಿದವರು ಜಗದ್ಗುರು ರೇಣುಕಾಚಾರ್ಯರು. ಕರ್ಮ ಕಳೆದು ಧರ್ಮ ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ನೇತೃತ್ವ ವಹಿಸಿದ ರಾಯಚೂರು ಕಿಲ್ಲಾ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮಾಚರಣೆಯಿಂದಲೇ ಮನುಷ್ಯನ ಬಾಳು ವಿಕಾಸಗೊಳ್ಳಲು ಸಾಧ್ಯ ಎಂದು ಹೇಳಿದರು.
ಶಿವ ಪಾರ್ವತಿ ಕ್ಷೇತ್ರದ ಧರ್ಮಾಧಿಕಾರಿ ಡಾ| ಕ್ಷೀರಲಿಂಗಯ್ಯ ಸ್ವಾಮಿ ಸ್ವಾಗತಿಸಿದರು. ವೈದಿಕ ವೃಂದದವರು ಪ್ರತಿಷ್ಠಾಪನೆ ಕಾರ್ಯ ನೆರವೇರಿಸಿದರು.