Advertisement

ಮಕ್ಕಳಿಗೆ ಮನೆಯಲ್ಲೇ ಮೌಲ್ಯ ಕಲಿಸಿ

11:21 AM Sep 04, 2017 | |

ಬೀದರ: ಮಕ್ಕಳಿಗೆ ಮನೆಯಲ್ಲಿಯೇ ಮೌಲ್ಯಗಳನ್ನು ಕಲಿಸಿಕೊಡಬೇಕು ಎಂದು ಹೆಸರಾಂತ ಶಿಕ್ಷಣ ತಜ್ಞ ಡಾ| ಗುರುರಾಜ ಕರ್ಜಗಿ ಪಾಲಕರಿಗೆ ಸಲಹೆ ನೀಡಿದರು. ವಿಕಾಸ ಅಕಾಡೆಮಿ ಹಾಗೂ ಚಿದಂಬರ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ರವಿವಾರ ಸಿದ್ಧಾರೂಢ ಮಠದಲ್ಲಿ ನಡೆದ ಪಾಲಕರ ಸಮಾವೇಶದಲ್ಲಿ ಮಾತನಾಡಿದ ಅವರು, ಮಕ್ಕಳು ಅತಿ ಹೆಚ್ಚು ಪ್ರಭಾವಿತರಾಗುವುದು, ಹೊಸತನ್ನು ಕಲಿತುಕೊಳ್ಳುವುದು ಮನೆಯಲ್ಲಿಯೇ ಎಂದರು.

Advertisement

ಅಪ್ಪ ಅಮ್ಮ ಹೇಳಿದಂತೆ ಮಕ್ಕಳು ಕೇಳಲಿಕ್ಕಿಲ್ಲ. ಆದರೆ, ಅಪ್ಪ ಅಮ್ಮ ಮಾಡಿದಂತೆಯೇ ಮಾಡುತ್ತಾರೆ. ಬಹುತೇಕ ವಿಷಯಗಳಲ್ಲಿ ಅಪ್ಪ ಅಮ್ಮ ಮಾದರಿಯಾಗುತ್ತಾರೆ. ಹೀಗಾಗಿ ಪಾಲಕರು ಎಚ್ಚರ ವಹಿಸಬೇಕು. ಅಪ್ಪ ಅಮ್ಮ ಪ್ರಾಮಾಣಿಕರಾಗಿದ್ದಲ್ಲಿ ಮಕ್ಕಳೂ ಪ್ರಾಮಾಣಿಕರಾಗುತ್ತಾರೆ. ಅಡ್ಡ ದಾರಿಯಲ್ಲಿ ಸಾಗುವವರ ಮಕ್ಕಳು ಸರಿ ದಾರಿ ಆಯ್ಕೆ ಮಾಡಿಕೊಳ್ಳಲಾರರು ಎಂದು ಡಾ| ಕರಜಗಿ ಎಚ್ಚರಿಸಿದರು.

ಪಾಲಕರ ನಿಲುವು, ನಡೆದುಕೊಳ್ಳುವ ರೀತಿಯು ಮಕ್ಕಳ ಮೇಲೆ ಪ್ರಭಾವ ಬೀರುವುದನ್ನು ಮನವರಿಕೆ ಮಾಡಿಕೊಡಲು
ಡಾ| ಕರಜಗಿ ಹಲವು ಉದಾಹರಣೆಗಳನ್ನು ನೀಡಿದರು. ತಿದ್ದುವ ಕೆಲಸವನ್ನು ಎಚ್ಚರಿಕೆಯಿಂದ ಮಾಡಬೇಕು ಎಂದು ಸಲಹೆ ನೀಡಿದ ಅವರು, ರಸ್ತೆಯಲ್ಲಿನ ಬಂಡೆ ಪ್ರಕೃತಿಯ ಸೂಚಕ. ಜಾಣ ಶಿಲ್ಪಿಯು ತನ್ನ ಕೌಶಲ ಬಳಸಿ ಬಂಡೆಗೆ ಸುಂದರ ರೂಪ ನೀಡುವುದು ಸಂಸ್ಕೃತಿ. ಅದೇ ಬಂಡೆಯು ಅಜ್ಞಾನಿಯ ಕೈಯಲ್ಲಿ ಸಿಲುಕಿ ತುಂಡಾದರೆ ವಿಕೃತಿ ಎನ್ನಿಸಿಕೊಳ್ಳುತ್ತದೆ. ಮಕ್ಕಳು ಪ್ರಕೃತಿ ಇದ್ದಂತೆ. ಉತ್ತಮ ರೀತಿಯ ಸಂಸ್ಕಾರ ನೀಡುವ ಜವಾಬ್ದಾರಿ ಹೆತ್ತವರ ಮೇಲಿದೆ ಎಂದು ಹೇಳಿದರು.

ಅಕ್ಕಿ ಪ್ರಕೃತಿ. ಆದರೆ, ಅನ್ನ ಸಂಸ್ಕೃತಿ. ಪ್ರಕೃತಿ ತಾನಾಗಿ ಸಂಸ್ಕೃತಿ ಆಗದು. ಅದಕ್ಕೆ ಸೂಕ್ತ ಸಂಸ್ಕಾರ  ಡಬೇಕಾಗುತ್ತದೆ. ಹತ್ತಿ ಬಟ್ಟೆ ಆಗುವುದೂ ಸುಂದರ ಸಂಸ್ಕಾರದ ಉದಾಹರಣೆ ಎಂದು ಹೇಳಿದರು.

ಸಿದ್ಧಾರೂಢ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಆಚಾರ-
ವಿಚಾರ ಕಲಿಸಿಕೊಡುವುದು ಪಾಲಕರ ಕರ್ತವ್ಯ. ಹೆಚ್ಚಿನ ಪಾಲಕರು ಮಕ್ಕಳೊಂದಿಗೆ ಸಮಯ ಕಳೆಯುವುದಿಲ್ಲ. ಶಾಲೆಯಲ್ಲಿನ ಬೋಧನೆ- ಕಲಿಕೆ ಕುರಿತು ತಿಳಿದುಕೊಳ್ಳುವುದಿಲ್ಲ. ಆಪ್ತ ಮಾತುಕತೆಯಂತೂ ನಡೆಯುವುದೇ ಇಲ್ಲ. ಸಂಜೆ 5ಕ್ಕೆ ಕಚೇರಿ ಬಿಟ್ಟರೂ ರಾತ್ರಿ 9ರ ನಂತರ ಮನೆಗೆ ಹೋಗುವ ಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದುಳಿದ ಕಲ್ಯಾಣ
ಕರ್ನಾಟಕ ಪ್ರದೇಶವನ್ನು ಮಾದರಿಯಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಲು ಅಕಾಡೆಮಿ ಶ್ರಮಿಸುತ್ತಿದೆ. ಈ ಭಾಗದ
ಸರ್ವಾಂಗೀಣ ವಿಕಾಸವೇ ಅಕಾಡೆಮಿ ಉದ್ದೇಶವಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಮಕ್ಕಳಿಗಾಗಿ, ಶಿಕ್ಷಕರಿಗಾಗಿ ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗಿದೆ. ಈ ಬಾರಿ ಪಾಲಕರಿಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸರ್ದಾರ್‌ ಬಲವೀರಸಿಂಗ್‌, ಜಯದೇವಿ ಯದಲಾಪುರೆ, ಕಾಮಶೆಟ್ಟಿ ಚಿಕಬಸೆ, ಧನರಾಜರೆಡ್ಡಿ ಮತ್ತಿತರ ಗಣ್ಯರು
ಉಪಸ್ಥಿತರಿದ್ದರು. ಪಾಲಕರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next