Advertisement

ಬೆಟ್ಟಕ್ಕೆ ಸೀರೆ ಉಡಿಸುವ ಮಾತಾಡುವವರಿಗೆ ಬುದ್ಧಿ ಕಲಿಸಿ

02:39 PM Apr 12, 2019 | Team Udayavani |
ಸಂತೆಮರಹಳ್ಳಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಂಬೇಡ್ಕರ್‌ ವಾದಿಯ ನೆಪವೊಡ್ಡಿ, ನನಗೆ ನೀವು ಮತ ನೀಡದಿದ್ದರೆ ಬಿಳಿಗಿರಿರಂಗನಬೆಟ್ಟದ ಕಮರಿಯಲ್ಲಿ ಬಿದ್ದು ಹೆಂಡತಿಯೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂಬ ಮಾತನ್ನಾಡಿ, ಓಟು ಕೇಳಿ ವರ್ಷ ಕಳೆದರೂ ಒಂದು ಅಭಿವೃದ್ಧಿ ಮಾಡದ ಪಕ್ಷಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಶಾಸಕ ಎ.ಆರ್‌.ಕೃಷ್ಣಮೂರ್ತಿ ಪರೋಕ್ಷವಾಗಿ ಬಿಎಸ್‌ಪಿ ಶಾಸಕ ಎನ್‌.ಮಹೇಶ್‌ ವಿರುದ್ಧ ಹರಿಹಾಯ್ದರು.
ಗುರುವಾರ ಸಮೀಪದ ಇರಸವಾಡಿ, ಸುತ್ತೂರು, ಮಸಣಾಪುರ, ಚಾಟೀಪುರ, ಹೊಂಗನೂರು ಗ್ರಾಮಗಳಲ್ಲಿ ಆರ್‌. ಧ್ರುವನಾ ರಾಯಣ ಪರ ಮತಯಾಚನೆ ಮಾಡಿ ಮಾತನಾಡಿ, ಇಡೀ ಬೆಟ್ಟಕ್ಕೆ ಸೀರೆ ಉಡಿಸುತ್ತೇನೆ ಎಂದು ಜನರನ್ನು ನಂಬಿಸಿ ಅದಕ್ಕೆ ಒಂದು ಕಚ್ಚೆಯನ್ನು ಉಡಿಸದ ಸ್ಥಿತಿಯಲ್ಲಿ ಇಲ್ಲಿಯ ಶಾಸಕರಿದ್ದಾರೆ ಎಂದು ವ್ಯಂಗ್ಯವಾಡಿದರು.
ಮಂತ್ರಿ ಸ್ಥಾನ ನಿಭಾಯಿಸದರಿದ್ದಾರೆ : ನಮ್ಮ ಜಿಲ್ಲೆಯ ವರಲ್ಲದ ಬೇರೆ ಜಿಲ್ಲೆಯ ಅಭ್ಯರ್ಥಿಯನ್ನು ಇಲ್ಲಿನ ಚುನಾವಣೆಗೆ ನಿಲ್ಲಿಸಿದ್ದಾರೆ. ಇಂತಹವರಿಗೆ ಮತ ಹಾಕಿದ್ದ 71 ಸಾವಿರ ಮತದಾರರು ಕ್ಷೇತ್ರದ ಅಭಿವೃದ್ಧಿಗೆ ಚಾತಕ ಪಕ್ಷಿಗಳಂತೆ ಕಾದು ಸೊರಗಿದ್ದಾರೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಅದೃಷ್ಟವಶಾತ್‌ ಸಿಕ್ಕ ಮಂತ್ರಿ ಪದವಿಯನ್ನೂ ನಿಭಾಯಿಸಲಾರದ ವ್ಯಕ್ತಿಯಿಂದ ಕ್ಷೇತ್ರದ ಜನರು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.
ಬೆನ್ನಿಗೆ ಚೂರಿ ಹಾಕದಿರಿ: ಬಿಜೆಪಿ ಪಕ್ಷವೂ ಪ್ರತಿಷ್ಠೆಗಾಗಿ ಶ್ರೀನಿವಾಸ್‌ ಪ್ರಸಾದ್‌ರನ್ನು ಕಣಕ್ಕಿಳಿಸಿದೆ. ಈಗ ನಿಂತಿರುವ ಅಭ್ಯರ್ಥಿಗಳಲ್ಲಿ ಯಾರು ಸಮರ್ಥರು ಎಂಬುದನ್ನು ಮತದಾರರು ಅರಿಯಬೇಕು. ಆರ್‌. ಧ್ರುವನಾರಾಯಣ ಸಂಸದರಾಗಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳಿಗೆ ಇವರನ್ನು ಗೆಲ್ಲಿಸಲು ಎಲ್ಲರೂ ಟೊಂಕಕಟ್ಟಿ ನಿಲ್ಲಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಲ್ಲಿದ್ದುಕೊಂಡೇ ಕೆಲವರು ಬೆನ್ನಿಗೆ ಚೂರಿ ಹಾಕಿದ ಘಟನೆಗಳು ನಡೆದಿದ್ದು ಇದು ಮರುಕಳಿಸಬಾರದು. ಅಂತಹವರಿದ್ದರೆ ಪಕ್ಷವನ್ನು ತೊರೆದು ಬೇರೆ ಪಕ್ಷಕ್ಕೆ ಸೇರಿಕೊಳ್ಳಿ ಎಂದು ಬಹಿರಂಗ ವಾಗಿಯೇ ತಿಳಿಸಿದರು.
ಧ್ರುವರನ್ನು ಬೆಂಬಲಿಸಿ: ಈ ಬಾರಿಯ ಚುನಾವಣೆಯ ಉಸ್ತುವಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ವಹಿಸಿದ್ದಾರೆ. ಈಗಾಗಲೇ ಪ್ರತಿ ಗಡಿಮನೆ ಕಟ್ಟೆ ಮನೆಗಳಿಗೆ ತೆರಳಿ ಒಂದೊಂದು ಮತವೂ ಬೇರೆಡೆ ಹೋಗದಂತೆ ಜಾಗೃತಿ ವಹಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇವರೆಲ್ಲರ, ಪಕ್ಷದ ಪ್ರಾಮಾಣಿಕ ಕಾರ್ಯಕರ್ತರ ಪ್ರಯತ್ನಗಳು ಸಫ‌ಲ ವಾಗಬೇಕಾದರೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಜಿಪಂ ಸದಸ್ಯ ಕೆ.ಪಿ.ಸದಾಶಿವಮೂರ್ತಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ವಿ.ಚಂದ್ರು ಎಪಿಎಂಸಿ ಉಪಾಧ್ಯಕ್ಷ ಮಹಾದೇವಸ್ವಾಮಿ, ಮುಖಂಡರಾದ ಹೊಂಗನೂರು ಚೇತನ್‌, ಮೂರ್ತಿ, ವೆಂಕಟರಾಮು, ಗಂಗಣ್ಣ, ಅಶೋಕ್‌, ಕೃಷ್ಣಕುಮಾರ್‌, ರಂಗಶೆಟ್ಟಿ, ಮರಿಸ್ವಾಮಿ, ರೇವಣ್ಣ, ಶಿವಣ್ಣ ಇತರರು ಇದ್ದರು.
Advertisement

Udayavani is now on Telegram. Click here to join our channel and stay updated with the latest news.

Next