Advertisement

ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದವರಿಗೆ ತಕ್ಕ ಪಾಠ ಕಲಿಸಿ

07:25 PM Apr 02, 2019 | Team Udayavani |

ಅರಸೀಕೆರೆ: ಕಾಂಗ್ರೆಸ್‌ನಿಂದ ಎರಡು ಬಾರಿ ಶಾಸಕರಾಗಿ ನಂತರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ಅನುಭವಿಸಿದ ಪುಣ್ಯಾತ್ಮರು ಇಂದು ತಮ್ಮ ಸ್ವಾಭಿಮಾನವನ್ನು ಲೆಕ್ಕಿಸದೇ ಹಣ ಮತ್ತು ಅಧಿಕಾರದ ಆಸೆಯಿಂದ ಕೋಮುವಾದಿ ಪಕ್ಷದ ಅಭ್ಯರ್ಥಿಯಾಗಿ ಇಂದು ನಮ್ಮ ಪ್ರತಿಸ್ಪರ್ಧಿಯಾಗಿ ನಿಂತಿದ್ದಾರೆ. ಇಂತಹ ರಾಜಕಾರಣಿಗಳಿಗೆ ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮತದಾರರ ಪ್ರಭುಗಳು ತಕ್ಕ ಪಾಠ ಕಲಿಸಬೇಕೆಂದು ಹಾಸನ ವಿಧಾನಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಹೇಳಿದರು.

Advertisement

ತಾಲೂಕಿನ ಗಡಿಭಾಗದ ಈಶಾನ್ಯ ದಿಕ್ಕಿನಿಂದ ಪ್ರಚಾರ ಕಾರ್ಯ ಆರಂಭಿಸಿದರೆ ಶುಭವಾಗಲಿದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ತಾಲೂಕಿನ ಬೊಮ್ಮಸಮುದ್ರ ಗ್ರಾಮದ ಶ್ರೀಗುರು ಚನ್ನಬಸವೇಶ್ವರ ಸ್ವಾಮಿ ಹಾಗೂ ಬೋಮ್ಮಲಿಂಗೇಶ್ವರ ದೇವಾಲಯದಲ್ಲಿ ಜೆಡಿಎಸ್‌ಹಾಗೂ ಕಾಂಗ್ರೆಸ್‌ ಪಕ್ಷಗಳ ಮುಖಂಡರು ಹಾಗೂ ನೂರಾರು ಕಾರ್ಯಕರ್ತರೊಂದಿಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಪ್ರತಿಸ್ಪರ್ಧಿಗೆ ವಿಷಯವೇ ಇಲ್ಲ: ನಮ್ಮ ಪ್ರತಿಸ್ಪರ್ಧಿಗೆ ಯಾವುದೇ ವಿಷಯ ಇಲ್ಲದ ಕಾರಣ ಕುಟುಂಬ ರಾಜಕಾರಣ ಹಾಗೂ ಕಣ್ಣೀರಿನ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದಾರೆ. ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಎಲ್ಲಾ ಪಕ್ಷದಲ್ಲಿಯೂ ಕುಟುಂಬ ರಾಜಕಾರಣ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಅದನ್ನು ಪ್ರಶ್ನಿಸುವ ನೈತಿಕ ಹಕ್ಕು ಯಾರಿಗೂ ಇಲ್ಲ ಎನ್ನುವುದನ್ನು ಅವರು ಮನಗಾಣಬೇಕು ಎಂದರು.

ಕಾವೇರಿ ನೀರಿಗಾಗಿ ಹೋರಾಟ: ಕಾವೇರಿ ನದಿ ನೀರಿಗಾಗಿ ಬೀದಿಗಿಳಿದು ಹೋರಾಟವನ್ನು ಮಾಡಿದವರು ಹಾಗೂ ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅವರ ಮನೆಗಳಿಗೆ ಹೋಗಿ ಸಾಂತ್ವನ ಹೇಳಿದವರು ರಾಜ್ಯದಲ್ಲಿನ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಎನ್ನುವುದನ್ನು ಯಾರೂ ಕೂಡ ಅಲ್ಲಗಳೆಲೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಸೈದ್ಧಾಂತಿಕ ಹೋರಾಟ: ದೇಶದಲ್ಲಿ ಜಾತ್ಯತೀತ ಪಕ್ಷಗಳು ಹಾಗೂ ಕೋಮುವಾದಿ ಪಕ್ಷಗಳ ನಡುವೆ ಸೈದ್ಧಾಂತಿಕ ಹೋರಾಟ ನಡೆಯುತ್ತಿರುವ ಕಾರಣ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಈ ಚುನಾವಣೆಯಲ್ಲಿ ಒಗ್ಗೂಡಿ ಹೋರಾಟ ಮಾಡಬೇಕಾಗಿದೆ ಎಂದು ಲೋಕಸಭಾ ಅಭ್ಯರ್ಥಿ ಪ್ರಜ್ವಲ ರೇವಣ್ಣ ತಿಳಿಸಿದರು.

Advertisement

ಈಡೇರದ ಭರವಸೆ: ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ನರೇಂದ್ರ ಮೋದಿ ಸರ್ಕಾರ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸಿ ಪ್ರತಿವರ್ಷ 2 ಕೋಟಿ ಯಂತೆ 5 ವರ್ಷದಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು ಆದರೆ 26 ಲಕ್ಷ ಜನರಿಗೆ ಉದ್ಯೋಗವನ್ನು ಕಲ್ಪಿಸಿದ್ದಾರೆ.

ನೋಟ್‌ ಬ್ಯಾನ್‌ ಹಾಗೂ ಜಿಎಸ್‌ಟಿ ತೆರಿಗೆ ಜಾರಿಗೆ ತರುವ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ. ಆದರೆ ಕೆಲವು ಮಾಧ್ಯಮಗಳಲ್ಲಿ ಮನ್‌ ಕೀ ಬಾತ್‌ ಎಂಬ ಹೆಸರಿನಲ್ಲಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಯುವ ಜನಾಂಗವನ್ನು ದಾರಿ ತಪ್ಪುವಂತೆ ಮಾಡುತ್ತಿದ್ದಾರೆ, ಅಂತೆಯೇ ಕೆಲವಾರು ದೃಶ್ಯ ಮಾಧ್ಯಮಗಳು ಇವುಗಳನ್ನೇ ಪದೇ ಪದೇ ಪ್ರಸಾರ ಮಾಡುತ್ತಿರುವುದು ಅತ್ಯಂತ ದುರ್ದೈವದ ಸಂಗತಿ ಎಂದರು.

ಅಪ ಪ್ರಚಾರಕ್ಕೆ ಕಿವಿಗೊಡಬೇಡಿ: ನಾಡಿನ ಪ್ರಜ್ಞಾವಂತ ಮತದಾರರು ಇಂತಹ ಸುಳ್ಳು ಪ್ರಚಾರಗಳಿಗೆ ಮಾರುಹೋಗದೇ ಜಾತ್ಯತೀತ ಶಕ್ತಿಗಳನ್ನುಬಲಪಡಿಸುವ ನಿಟ್ಟಿನಲ್ಲಿ ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರಿಗೆ ಅಧಿಕ ಮತಗಳನ್ನು ಮೈತ್ರಿ ಕೂಟದ ಮುಖಂಡರು ಹಾಗೂ ಕಾರ್ಯಕರ್ತರು ಕೊಡಿಸುವ ಮೂಲಕ ಜಯಭೇರಿ ಬಾರಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಭೆಯನ್ನು ಉದ್ದೇಶಿಸಿ ಜಿಪಂಅಧ್ಯಕ್ಷೆ ಶ್ವೇತಾ, ಜಿಪಂ ಸದಸ್ಯರಾದ ಬಿಳಿಚೌಡಯ್ಯ, ಪಟೇಲ್‌ ಶಿವಪ್ಪ, ಮಾಡಾಳು ಸ್ವಾಮಿ, ಮಾಜಿ ಉಪಾಧ್ಯಕ್ಷ ಬಂಡಿಗೌಡ್ರು ರಾಜಣ್ಣ, ಗಂಡಸಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮೇಟ್ರೋ ಬಾಬು, ಕಾಂಗ್ರೆಸ್‌ ಮುಖಂಡರಾದ ಜಿ.ಬಿ.ಶಶಿಧರ್‌, ಮಲ್ಲೇನಹಳ್ಳಿ ಶಿವಶಂಕರಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಎಂ.ಸಮೀವುಲ್ಲಾ, ತಾಪಂ ಅಧ್ಯಕ್ಷೆ ರೂಪಾ, ಮಾಜಿ ಅಧ್ಯಕ್ಷೆ ಮಂಜುಳಾ ಬಾಯಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌, ಮಾಡಾಳು ಗ್ರಾಪಂಅಧ್ಯಕ್ಷ ಎಂ.ಈ. ಚಂದ್ರಶೇಖರ್‌, ಎಂ.ವಿ.ಈಶ್ವರಪ್ಪ, ಮುಖಂಡರಾದ ಪಿ.ಮೈಲಾರಪ್ಪ. ಮಹೇಶ್‌, ಉಪಸ್ಥಿತರಿದ್ದರು.

ಜಿಲ್ಲೆಯ ಜನರ ಸಮಸ್ಯೆ ನಿವಾರಣೆ: ನಾನು 6 ವರ್ಷಗಳ ಹಿಂದೆ ಜೆಡಿಎಸ್‌ ಸದಸ್ಯತ್ವ ಪಡೆದು ಕೊಂಡೇ ಸಕ್ರಿಯವಾಗಿ ರಾಜಕಾರಣ ಮಾಡುತ್ತಿದೆ. ಜಿಲ್ಲೆಯ ಪ್ರತಿಯೊಂದು ಕ್ಷೇತ್ರಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ನನಗೆ ಅರಿವು ಇದೆ.

ಇಂತಹ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕವಾಗಿ ಹೋರಾಟ ಮಾಡುವ ಉದ್ದೇಶದಿಂದ ಈ ಬಾರಿ ತಾವು ಕಾಂಗೆಸ್‌ ಹಾಗೂ ಜೆಡಿಎಸ್‌ಮೈತ್ರಿ ಕೂಟದ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ಇಲ್ಲಿನ ಜನರ ನಂಬಿಕೆ ಹಾಗೂ ಪ್ರೀತಿ ವಿಶ್ವಾಸಕ್ಕೆ ಎಂದಿಗೂ ಧಕ್ಕೆ ಬಾರದ ರೀತಿಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದವರು ಎಂದು ಭೇದ ಭಾವ ತೊರದೇ ಎಲ್ಲರನ್ನೂ ಸಮಾಜ ರೀತಿಯಲ್ಲಿ ಕಾಣುವ ಮೂಲಕ ಮೈತ್ರಿ ಧರ್ಮ ಪಾಲಿಸಲು ತಾನು ಬದ್ಧನಾಗಿದ್ದೇನೆ ಎಂದು ಭರವಸೆಯನ್ನು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next