Advertisement

ಚಾಲಕ, ನಿರ್ವಾಹಕರಿಗೆ ಸಭ್ಯತೆ ಪಾಠ ಕಲಿಸಿ!

12:16 PM Jul 05, 2017 | Team Udayavani |

ಬೆಂಗಳೂರು: ಮಹಿಳೆಯರು ಮತ್ತು ಹಿರಿಯ ನಾಗರಿಕರನ್ನು ನಿರ್ವಾಹಕರು ಗೌರವಿಸುವುದಿಲ್ಲ. ಬಸ್‌ಗಳಲ್ಲಿ ಚಿಲ್ಲರೆ ಸಮಸ್ಯೆಯೇ ತಲೆನೋವು. ಮೆಟ್ರೋ ಫೀಡರ್‌ ಸೇವೆಯೇ ಇಲ್ಲ; ಇದ್ದರೂ ಮೆಟ್ರೋ ರೈಲುಗಳಲ್ಲಿ ಈ ಸೇವೆಗಳ ಬಗ್ಗೆ ಮಾಹಿತಿಯನ್ನೂ ನೀಡುವುದಿಲ್ಲ. ಬಸ್‌ ದಿನಾಚರಣೆ ಅಂಗವಾಗಿ ಬನಶಂಕರಿ ಟಿಟಿಎಂಸಿಯಲ್ಲಿ ಮಂಗಳವಾರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹಮ್ಮಿಕೊಂಡಿದ್ದ “ಜನಸ್ಪಂದನ’ದಲ್ಲಿ ಪ್ರಯಾಣಿಕರಿಂದ ಕೇಳಿಬಂದ ದೂರುಗಳಿವು. 

Advertisement

ಸ್ಥಳೀಯ ಪ್ರಯಾಣಿಕರಾದ ಪಾರಿಜಾತ ಮಾತನಾಡಿ, “ಹಿರಿಯ ನಾಗರಿಕರಿಗೆ ಬಸ್‌ನಲ್ಲಿ ರಕ್ಷಣೆಯಿಲ್ಲ. ನಿರ್ವಾಹಕರು ಹಾಗೂ ಚಾಲಕರು ಮಹಿಳೆಯರನ್ನು ಗೌರವಿಸುವುದನ್ನು ಮೊದಲು ಕಲಿಯಬೇಕು. ಬೇಕಾಬಿಟ್ಟಿಯಾಗಿ ಮಾತನಾಡುತ್ತಾರೆ. ಸಂಸ್ಥೆ ಈ ನಿಟ್ಟಿನಲ್ಲಿ ಹೆಚ್ಚಿನ ನಿಗಾ ವಹಿಸುವುದು ಅಗತ್ಯ,’ ಎಂದು ಹೇಳಿದರು.

ಮೆಟ್ರೋದಲ್ಲಿಲ್ಲ “ಫೀಡರ್‌’ ಮಾಹಿತಿ: ಜೆ.ಪಿ. ನಗರದ ಸಿದ್ಧಾರ್ಥ ಮಾತನಾಡಿ, “ಮೆಟ್ರೋ ನಿಲ್ದಾಣಗಳಲ್ಲಿ ಬಿಎಂಟಿಸಿ ಫೀಡರ್‌ ಸೇವೆಯ ಬಗ್ಗೆ ಯಾವ ಮಾಹಿತಿಯೂ ಇಲ್ಲ. ನಿಲ್ದಾಣದಲ್ಲಿ ಫೀಡರ್‌ ಬಸ್‌ಗಳು ನಿಲ್ಲಲು ಜಾಗವೂ ಇಲ್ಲ. ನಿಲ್ದಾಣಗಳಲ್ಲಿ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಗಳ ಮಳಿಗೆ ಇದೆ. ಆದರೆ, ಬಿಎಂಟಿಸಿ ಬಸ್‌ ಸೇವೆ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ.

ಮೆಟ್ರೋ ರೈಲು ಮತ್ತು ನಿಲ್ದಾಣಗಳಲ್ಲಿ ಕನಿಷ್ಠ ಮಾಹಿತಿಯನ್ನಾದರೂ ನೀಡಿದರೆ, ಮೆಟ್ರೋದಲ್ಲಿ ಬರುವವರಿಗೆ ಅನುಕೂಲ ಆಗುತ್ತದೆ,’ ಎಂದು ಅಭಿಪ್ರಾಯಪಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಬಿಎಂಟಿಸಿ ಅಧಿಕಾರಿಗಳು, ಈ ಬಗ್ಗೆ ಬಿಎಂಆರ್‌ಸಿಎಲ್‌ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗುವುದು. ಶೀಘ್ರದಲ್ಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮಿನಿ ಬಸ್‌ಗಳೂ ಇರಲಿ: ಬಸ್‌ ಪ್ರಯಾಣಿಕರ ವೇದಿಕೆ ಸದಸ್ಯ ವಿನಯ್‌ ಶ್ರೀನಿವಾಸ್‌ ಮಾತನಾಡಿ, “ಮಿಡಿ ಬಸ್‌ಗಳಂತೆ ಹೆಚ್ಚಿನ ಪ್ರದೇಶಗಳಿಗೆ ಮಿನಿ ಬಸ್‌ಗಳ ಸೇವೆ ಒದಗಿಸುವ ಅಗತ್ಯವಿದೆ. ಮಹಿಳೆಯರ ಸುರಕ್ಷತೆಗಾಗಿ ಇರುವ ಟೋಲ್‌ ಫ್ರೀ ನಂಬರ್‌ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕು. ಫೀಡರ್‌ ಸೇವೆಗಳಿಗೆ ಬಿಎಂಟಿಸಿಯು ಬಿಎಂಆರ್‌ಸಿಎಲ್‌ನಿಂದ ಆರ್ಥಿಕ ನೆರವು ಕೇಳಬೇಕು,’ ಎಂದು ಹೇಳಿದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, ಈಗಾಗಲೇ ಈ ಸಂಬಂಧ ಬಿಎಂಆರ್‌ಸಿಗೆ ಪತ್ರ ಬರೆಯಲಾಗಿದೆ ಎಂದರು. ಕೆಂಗೇರಿಯ ಸುಧಾಮಣಿ ಮಾತನಾಡಿ, “ಹೊರವರ್ತುಲ ರಸ್ತೆಯ ನಿಲ್ದಾಣಗಳಲ್ಲಿ ಬಸ್‌ ನಿಲ್ಲಿಸುತ್ತಿಲ್ಲ. ಮೆಟ್ರೋ ಫೀಡರ್‌ ಸೇವೆಯನ್ನು ನಾಯಂಡನಹಳ್ಳಿಯಿಂದ ಕೆಂಗೇರಿಯವರೆಗೂ ವಿಸ್ತರಿಸಬೇಕು. ಇದರಿಂದ ಸಾಕಷ್ಟು ಅನುಕೂಲ ಆಗುತ್ತದೆ,’ ಎಂದು ಮನವಿ ಮಾಡಿದರು.  

ಕಲ್ಯಾಣ ನಿಧಿಯಲ್ಲಿದೆ 1,340 ಕೋಟಿ ರೂ.: “ದುಬಾರಿ ಪಾಸ್‌ನಿಂದಾಗಿ ಗಾರ್ಮೆಂಟ್ಸ್‌ ನೌಕರರು ಟ್ರಕ್‌ನಲ್ಲಿ, ಲಾರಿಯಲ್ಲಿ ಸಂಚರಿಸುತ್ತಿದ್ದಾರೆ. ಶೀಘ್ರ ರಿಯಾಯಿತಿ ಪಾಸ್‌ ನೀಡಬೇಕು,’ ಎಂದು ಗಾರ್ಮೆಂಟ್ಸ್‌ ಉದ್ಯೋಗಿ ಮದೀನಾ ತಾಜ್‌ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಎಂಟಿಸಿ ಉಪಾಧ್ಯಕ್ಷ ಬಿ. ಗೋವಿಂದರಾಜು, “ನಗರದಲ್ಲಿನ ಗಾರ್ಮೆಂಟ್ಸ್‌ ನೌಕರರಿಗೆ, ಕಟ್ಟಡ ಕಾರ್ಮಿಕರಿಗೆ 525 ರೂ. ಬೆಲೆಯಲ್ಲಿ ಪಾಸ್‌ ನೀಡುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ,’ ಎಂದು ಮಾಹಿತಿ ನೀಡಿದರು. 

“ಕಾರ್ಮಿಕ ಕಲ್ಯಾಣ ನಿಧಿಯಲ್ಲಿ 1,340 ಕೋಟಿ ರೂ. ಸುಮ್ಮನೆ ಇರಿಸಲಾಗಿದೆ. ಈ ಹಣಕ್ಕೆ ಪ್ರತಿ ವರ್ಷ 140 ಕೋಟಿ ರೂ. ಬಡ್ಡಿ ಬರುತ್ತಿದೆ. ಈ ನಿಧಿಯಿಂದ ಪ್ರತಿ ಕಾರ್ಮಿಕರಿಗೆ ತಿಂಗಳಿಗೆ 525 ರೂ. ನೀಡಿದರೆ, ಉಳಿದ 525 ರೂ. ಮೊತ್ತವನ್ನು ನೌಕರರು ಕಟ್ಟಿದರೆ ಸಾಕು. ಈ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ,’ ಎಂದು ಗೋವಿಂದರಾಜು ಹೇಳಿದರು.

ಬಿಎಂಟಿಸಿಗೆ ತೆರಿಗೆ ವಿನಾಯ್ತಿ: “ಆರ್ಥಿಕ ಸಂಕಷ್ಟದಲ್ಲಿರುವ ಬಿಎಂಟಿಸಿಗೆ ಪ್ರಸಕ್ತ ಸಾಲಿನ ಮೋಟಾರು ವಾಹನ ತೆರಿಗೆಯಿಂದ ಸರ್ಕಾರ ವಿನಾಯ್ತಿ ನೀಡಿದೆ. ಈ ಮೂಲಕ ನಿಗಮಕ್ಕೆ ತೆರಿಗೆ ಹೊರೆ ಕಡಿಮೆಯಾಗಿದೆ,’ ಎಂದು ಬಿಎಂಟಿಸಿ ಅಧ್ಯಕ್ಷ ನಾಗರಾಜ ಯಾದವ್‌ ತಿಳಿಸಿದರು.  ಬನಶಂಕರಿ ಟಿಟಿಎಂಸಿಯಲ್ಲಿ ಹಮ್ಮಿಕೊಂಡಿದ್ದ ಬಸ್‌ ದಿನಾಚರಣೆಯಲ್ಲಿ ಮಾತನಾಡಿ, “ನಷ್ಟ ಹಾಗೂ ಸಾಲದ ಸುಳಿಯಲ್ಲಿ ಸಿಲುಕಿರುವ ಬಿಎಂಟಿಸಿಗೆ ಸರ್ಕಾರ ಸಹಾಯಹಸ್ತ ಚಾಚಿದೆ.

2016-17ನೇ ಸಾಲಿನಲ್ಲಿ ಮೋಟಾರು ವಾಹನ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಇದರಿಂದ ನಿಗಮಕ್ಕೆ 120 ಕೋಟಿ ರೂ. ಹೊರೆ ಕಡಿಮೆಯಾಗಿದೆ,’ ಎಂದು ಹೇಳಿದರು. “ಬಹಳ ಹಿಂದೆಯೇ ನಿಗಮವು ಸರ್ಕಾರದ ಮುಂದೆ ಈ ಬೇಡಿಕೆ ಇರಿಸಿತ್ತು. ಅದಕ್ಕೆ ಪ್ರಸ್ತುತ ಸರ್ಕಾರದ ಸ್ಪಂದನೆ ದೊರಕಿದೆ. ಜತೆಗೆ 1,500 ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದು ಕಾರ್ಯಾಚರಣೆ ನಡೆಸಲು ಈಗಾಗಲೇ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ಇದರಿಂದ ನಿಗಮಕ್ಕೆ ಸಾಕಷ್ಟು ಅನುಕೂಲ ಆಗಲಿದೆ,’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next