Advertisement

ಶೀಘ್ರ ಕಚೇರಿ ಆರಂಭಿಸಲು ಅಧಿಕಾರಿಗಳಿಗೆ ತಾಕೀತು

09:35 PM Sep 18, 2019 | Team Udayavani |

ಬೈಂದೂರು: ತಾ| ಕೇಂದ್ರವಾಗಿ ಬೆಳೆಯುತ್ತಿರುವ ಬೈಂದೂರಿನ ಅಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಶಾಸಕರ ಪ್ರಗತಿ ಪರಿಶೀಲನ ಸಭೆ ಬೈಂದೂರು ಪ್ರವಾಸಿ ಮಂದಿರದಲ್ಲಿ ನಡೆಯಿತು.

Advertisement

ಅಧ್ಯಕ್ಷತೆ ವಹಿಸಿ ಮಾತನಾಡಿದ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಬಹಳ ವರ್ಷಗಳಿಂದ ಬೈಂದೂರಿನ ಅಭಿವೃದ್ಧಿ ಕುರಿತು ಕಂಡಿರುವ ಕನಸು ನನಸಾಗುವ ಕಾಲ ಬಂದಿದೆ. ಈ ಕ್ಷೇತ್ರದ ಮಾಜಿ ಸಂಸದರು ರಾಜ್ಯದ ಮುಖ್ಯ ಮಂತ್ರಿಯಾಗಿದ್ದಾರೆ. ಅವರ ಪುತ್ರ ಬಿ. ವೈ. ರಾಘವೇಂದ್ರ ಸಂಸದರಾಗಿರು ವುದು ಕ್ಷೇತ್ರದ ಅಭಿವೃದ್ಧಿಗೆ ದೊರೆತ ಸುವರ್ಣಾವಕಾಶವಾಗಿದೆ. ಇನ್ನು ಕೆಲವೇ ಸಮಯದಲ್ಲಿ ಬೈಂದೂರಿನ ಚಿತ್ರಣವೆ ಬದಲಾಗಲಿದೆ. ಅಭಿವೃದ್ಧಿ ಕಾರ್ಯದ ಮೂಲಕ ಮಾದರಿ ತಾಲೂಕು ಕೇಂದ್ರ ವಾಗಿ ಮಾರ್ಪಡಲಿದೆ ಎಂದರು.

ಶೀಘ್ರ ಕಚೇರಿಗಳನ್ನು
ಆರಂಭಿಸಲು ಸೂಚನೆ
ತಾಲೂಕು ಕೇಂದ್ರದಲ್ಲಿ ಒಟ್ಟು 36 ಇಲಾಖೆಗಳು ಕಾರ್ಯ ನಿರ್ವಹಿಸ ಬೇಕಾಗಿದೆ. ಅವುಗಳಲ್ಲಿ 16 ಕಚೆೇರಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಕೆಲವು ಕಚೇರಿಗಳಿಗೆ ಜಾಗ ಮಂಜೂರಾಗಿದೆ. ಇನ್ನು ಕೆಲವು ಕಚೇರಿಗಳ ಸಿಬಂದಿ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಬೈಂದೂರು ತಾಲೂಕು ಆಗಿರುವ ಕಾರಣ ಅಧಿಕಾರಿಗಳು ಮೊದಲು ಸೂಕ್ತ ಜಾಗ ನಿಗದಿಪಡಿಸಿ ತತ್‌ಕ್ಷಣ ಕಚೆೇರಿ ಆರಂಭಿಸಬೇಕು. ಸರಕಾರದಿಂದ ದೊರೆಯಬೇಕಾದ ಆವಶ್ಯಕತೆಗಳ ಬಗ್ಗೆ ನೇರ ತಿಳಿಸಿ ಸಂಸದರ ಸಹಕಾರದೊಂದಿಗೆ ಸರಕಾರದಿಂದ ಮಂಜೂರು ಮಾಡಿಸಿ ಕೊಡುತ್ತೇನೆ. ಜನರಿಗೆ ಸಮರ್ಪಕ ಸೇವೆ ದೊರೆಯಬೇಕು ಎಂದರು.

ತಾಲೂಕು ಆಸ್ಪತ್ರೆ ಪ್ರಕ್ರಿಯೆಗೆ ಶೀಘ್ರ ಚಾಲನೆ
ಬೈಂದೂರಿನಲ್ಲಿ ಶೀಘ್ರವೇ ನೂರು ಹಾಸಿಗೆಗಳ ತಾಲೂಕು ಆಸ್ಪತ್ರೆ ಪ್ರಕ್ರಿಯೆ ಗಳಿಗೆ ಚಾಲನೆ ದೊರೆಯಲಿದೆ. ಈಗಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ಮಹಿಳಾ ಮತ್ತು ಮಕ್ಕಳ ವಿಭಾಗವಾಗಿ ವಿಂಗಡಿಸಿ ತಾ.ಪಂ. ಸ್ಥಳವನ್ನು ಆರೋಗ್ಯ ಇಲಾಖೆಗೆ ವರ್ಗಾಯಿಸಲಾಗುವುದು ಹಾಗೂ ಆರೋಗ್ಯ ಇಲಾಖೆಗೆ ಮೀಸಲಿರಿಸಿದ 57 ಸೆಂಟ್ಸ್‌ ಜಾಗವನ್ನು ತಾಲೂಕು ಪಂಚಾಯತ್‌ ಅಧೀನಕ್ಕೆ ನೀಡಲಾಗುವುದು. ನ್ಯಾಯಾಲಯ ಸ್ಥಾಪನೆ, ಕ್ರೀಡಾಂಗಣ ಪ್ರಕ್ರಿಯೆ ಯನ್ನು ಈಗಿರುವ ಗಾಂಧಿ ಮೈದಾನದ ದಾಖಲೆಗಳನ್ನು ಸರಿಪಡಿಸಿ ಕೇಂದ್ರ ಭಾಗದಲ್ಲಿ ಸ್ಟೇಡಿಯಂ ನಿರ್ಮಿಸುವ ಚಿಂತನೆಯಿದೆ ಎಂದರು.ತಾಲೂಕು ಕೇಂದ್ರಕ್ಕೆ ಅವಶ್ಯವಿರುವ ಎಲ್ಲ ಕಚೇರಿಗಳು ಅತೀ ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿವೆ ಎಂದರು.

ವಿವಿಧ ಇಲಾಖೆಗಳ ಅಧಿಕಾರಿಗಳಿಂದ ತಾಲೂಕು ಕೇಂದ್ರದ ಆವಶ್ಯಕತೆಗಳ ಬಗ್ಗೆ ಮಾಹಿತಿ ಪಡೆಯಲಾಯಿತು.ಈ ಸಂದರ್ಭದಲ್ಲಿ ಬೈಂದೂರು ತಾಲೂಕು ದಂಡಾಧಿಕಾರಿ ಬಿ.ಪಿ. ಪೂಜಾರ್‌, ಜಿ.ಪಂ. ಸದಸ್ಯರಾದ ಶಂಕರ ಪೂಜಾರಿ, ಸುರೇಶ್‌ ಬಟ್ವಾಡಿ, ತಾ.ಪಂ. ಅಧ್ಯಕ್ಷೆ ಶ್ಯಾಮಲಾ ಕುಂದರ್‌, ಬಿಜೆಪಿ ಮುಖಂಡ ದೀಪಕ್‌ ಕುಮಾರ್‌ ಶೆಟ್ಟಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಉಪಸ್ಥಿತರಿದ್ದರು.

Advertisement

ವಾರದೊಳಗೆ ಮರಳು ಸಮಸ್ಯೆ ಇತ್ಯರ್ಥ
ಮರಳು ಸಮಸ್ಯೆ ಒಂದು ವಾರದೊಳಗೆ ಬಗೆಹರಿಯಲಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಸಿ.ಆರ್‌.ಝಡ್‌. ನಿಯಮ ವ್ಯಾಪ್ತಿಗನುಗುಣವಾಗಿ 159 ಜನರಿಗೆ ಪರವಾನಿಗೆ ನೀಡಲಾಗುವುದು. ಯಾವುದೇ ಕಾರಣಕ್ಕೂ ಇಲ್ಲಿನ ಮರಳು ಹೊರ ಜಿಲ್ಲೆಗಳಿಗೆ ಹೋಗದಂತೆ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಂಡಾಗ ಮರಳು ಸಮಸ್ಯೆ ಉದ್ಬವಿಸುವುದಿಲ್ಲ ಎಂದರು.ಈಗಿರುವ ಐ.ಟಿ.ಐ. ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲಾಗುವುದು ಮತ್ತು ಪ್ರಥಮ ದರ್ಜೆ ಕಾಲೇಜು ಬಳಿ ಸ್ಥಳಾವಕಾಶ ಇರುವುದರಿಂದ ಈ ಸ್ಥಳದಲ್ಲಿ ಐ.ಟಿ.ಐ. ಕಟ್ಟಡ ನಿರ್ಮಿಸುವ ಚಿಂತನೆಯಿದೆ ಎಂದು ಶಾಸಕ ಸುಕುಮಾರ ಶೆಟ್ಟಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next