ಉಡುಪಿ: ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಶಾಲೆಯ ಪಾಠ ಅಗತ್ಯ. ಅದರ ಜತೆಗೆ ಮನೆ ಮನೆಗಳಲ್ಲಿ ಮಕ್ಕಳಿಗೆ ನಮ್ಮ ವಿಶಿಷ್ಠ, ಶ್ರೇಷ್ಠ ಸಂಸ್ಕೃತಿಯನ್ನು ತಿಳಿಸಿಕೊಡುವ ಕೆಲಸವಾಗಬೇಕಿದೆ ಎಂದು ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು.
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ವತಿಯಿಂದ ವಿಪ್ರ ಬಾಲಕ-ಬಾಲಕಿಯರಿಗೆ ಎ.14ರಿಂದ 29ರವರೆಗೆ
ವಸಂತ ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಸಣ್ಣ ಮಗುವಿನಿಂದ ವೃದ್ಧರವರೆಗೆ ಹೆಣ್ಣು-ಗಂಡೆಂಬ ಬೇಧವಿಲ್ಲದೆ ಎಲ್ಲ ವಯೋಮಾನದವರನ್ನು ಕೂಡ ಗೌರವಿಸಿ ಪೂಜಿಸುವ ಹಿಂದೂ ಸಂಸ್ಕೃತಿ ಪ್ರಪಂಚದಲ್ಲೇ ವಿಶಿಷ್ಟವಾದುದು. ನಾವು ವ್ಯಕ್ತಿಯನ್ನು ನೋಡದೆ ವ್ಯಕ್ತಿಯೊಳಗಿನ ದೇವರನ್ನು ನೋಡುತ್ತೇವೆ. ಇಂಥ ಸಂಸ್ಕೃತಿಯನ್ನು ಉಳಿಸಬೇಕಾದರೆ ಪ್ರತಿ ಮನೆಗಳಲ್ಲಿ ಕೂಡ ದಿನದ ಕನಿಷ್ಠ 2 ನಿಮಿಷವಾದರೂ ಮಕ್ಕಳಿಗೆ ಸಂಸ್ಕೃತಿಯ ಬಗ್ಗೆ ತಿಳಿಸಿಕೊಡುವ ಕೆಲಸವಾಗಬೇಕು. ಅದಕ್ಕಾಗಿಯೇ ಸಮಯ ಮೀಸಲಿಡಬೇಕು. ಇಂಥ ಕೆಲಸಗಳಿಗೆ ಧಾರ್ಮಿಕ ಶಿಬಿರಗಳು ಪೂರಕ ಎಂದು ಶ್ರೀಗಳು ಹೇಳಿದರು.
ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ “ಯಾವ ಸಂದರ್ಭದಲ್ಲಿ ಕೋಪ, ನಾಚಿಕೆ ಮಾಡಬೇಕು ಎಂಬ ಪರಿಜ್ಞಾನ ಮಕ್ಕಳಿಗಿರಬೇಕು. ಉತ್ತಮ ಕೆಲಸಗಳನ್ನು ಮಾಡುವಾಗ ಹಿಂಜರಿಕೆ, ನಾಚಿಕೆ ಸಲ್ಲದು. ಒಂದು ವೇಳೆ ಕೋಪ ಮಾಡಿಕೊಂಡರೂ ವಿಧುರ ಹೇಳಿರುವಂತೆ ಆ ಕೋಪದಿಂದ ಉಪಯೋಗವಾಗಬೇಕು. ಅದರಿಂದ ಇತರರಿಗೆ ಒಳ್ಳೆಯದಾಗಬೇಕೇ ಹೊರತು ಕೋಪ ನೋವು, ದುಃಖಗಳಿಗೆ ಕಾರಣವಾಗಬಾರದು’ ಎಂದು ಹೇಳಿದರು.
ಶಿಬಿರಾರ್ಥಿಗಳಿಗೆ ಇಬ್ಬರು ಶ್ರೀಗಳು ಕೂಡ ಪರೀಕ್ಷೆ ನಡೆಸಿ ಪ್ರಮಾಣಪತ್ರ, ಬಹುಮಾನ ವಿತರಿಸಿದರು.
ವಿದ್ವಾಂಸ ಕೊರ್ಲಹಳ್ಳಿ ವೆಂಕಟೇಶ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯರ ಕೊರತೆ
ಕಾರ್ಯಕ್ರಮವನ್ನು ನಿರ್ವಹಿಸಿದ ವಿದ್ವಾಂಸ ಕಲ್ಮಂಜೆ ವಾಸುದೇವ ಉಪಾಧ್ಯ ಅವರು ಮಾತನಾಡಿ “ಹಿಂದಿನ ಕಾಲದಲ್ಲಿ ಒಂದೇ ಕುಟುಂಬದಲ್ಲಿ ಹಿರಿಯರು-ಕಿರಿಯರು ವಾಸಿಸುತ್ತಿದ್ದರು. ಆಗ ಸಹಜವಾಗಿಯೇ ಹಿರಿಯರು ಅನುಸರಿಸಿಕೊಂಡು ಬಂದ ಆಚಾರ ವಿಚಾರ, ಸಂಸ್ಕೃತಿ ಕಿರಿಯರಿಗೆ ಪರಭಾರೆಯಾಗುತ್ತಿತ್ತು. ಆದರೆ ಇಂದು ಅಂಥ ವಾತಾವರಣ ಕಡಿಮೆಯಾಗುತ್ತಿದೆ. ಶಾಲೆಗಳಲ್ಲಿ ಲೌಕಿಕ ವಿಚಾರ ಕಲಿಸುವಂತೆಯೇ ಮನೆಗಳಲ್ಲಿ ಆಧ್ಯಾತ್ಮ, ಸಂಸ್ಕೃತಿ ಬಗ್ಗೆ ತಿಳಿಸಿಕೊಡಬೇಕಾಗಿದೆ. ಶಿಬಿರಗಳ ಮೂಲಕ ಇದನ್ನು ತಿಳಿಸಿಕೊಡುವ ಪ್ರಯತ್ನ ನಮ್ಮದಾಗಿದೆ’ ಎಂದು ಹೇಳಿದರು.