ಕಲಬುರಗಿ: ಇಂದಿನ ಅಗತ್ಯತೆಗಳ ಜೊತೆಯಲ್ಲಿ ಶಿಕ್ಷಣದೊಂದಿಗೆ ಮಕ್ಕಳಿಗೆ ಸಂಸ್ಕಾರವನ್ನು ಶಿಕ್ಷಕರು ಕಲಿಸಬೇಕಾದ ಗುರುತರ ಜವಾಬ್ದಾರಿ ಇದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.
ಇಲ್ಲಿನ ಸಂಗಮೇಶ್ವರ ಸಭಾಗೃಹದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನೂತನ ವಿದ್ಯಾಲಯ ಸಂಸ್ಥೆಯ 111ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೇವಲ ಪಠ್ಯ ಬೋಧನೆ ಮಾಡಿದರೆ ಸಾಲದು. ವಿದ್ಯಾರ್ಥಿಗಳಿಗೆ ಸಂಸ್ಕಾರವು ಅತ್ಯಂತ ಅಗತ್ಯವಾಗಿದೆ.
ನೂತನ ವಿದ್ಯಾಲಯ ಸಂಸ್ಥೆಯ ಕೊಡುಗೆ ಈ ನಿಟ್ಟಿನಲ್ಲಿ ಶ್ಲಾಘನೀಯವಾದುದು ಎಂದು ಹೇಳಿದರು. ಎಲ್ಲ ವರ್ಗದವರು ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ, ಉನ್ನತ ಹುದ್ದೆಗಳಿಗೆ ಹೋಗಿದ್ದಾರೆ. ಸೌಲತ್ತುಗಳು ಇರದೇ ಇದ್ದ ಸಂದರ್ಭದಲ್ಲಿ ವಿಠಲರಾವ್ ದೇವಳಗಾಂವ್ ಸಂಸ್ಥೆಯನ್ನು ಹುಟ್ಟು ಹಾಕಿದರು.
ಇಂದು ಹೆಮ್ಮರವಾಗಿ ಸಂಸ್ಥೆ ಬೆಳೆದಿದೆ. ಈ ಸಂಸ್ಥೆಯಲ್ಲಿ ಕಲಿತವರಲ್ಲಿ ನಾನೂ ಒಬ್ಬ ಎಂದು ಸಚಿವರು ನೆನಪಿಸಿಕೊಂಡರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಾ| ಸರ್ವೋತ್ತಮರಾವ ಮಾತನಾಡಿ, ಮೊದಲು ಸೌಲತ್ತುಗಳು ಇರಲಿಲ್ಲ. ಈಗ ಎಲ್ಲ ಸೌಲತ್ತುಗಳಿವೆ.
ಆದಾಗ್ಯೂ, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಅತ್ಯಂತ ಕಷ್ಟದಾಯಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೂ ನೂತನ ವಿದ್ಯಾಲಯ ಸಂಸ್ಥೆಯು ಇನ್ನು ವಿಸ್ತಾರಗೊಳ್ಳುತ್ತಿದೆ ಎಂದು ಹೇಳಿದರು. ಸಂಸ್ಥೆಯ ಕಾರ್ಯದರ್ಶಿ ಗೌತಮ ಜಹಾಗೀರದಾರ, ಆಡಳಿತ ಮಂಡಳಿ ಸದಸ್ಯರಾದ ದೇವರಾವ್ ದೇಶಮುಖ, ಶ್ರೀಕಾಂತ ಕುಲಕರ್ಣಿ,
-ಎಸ್.ಬಿ. ಜಾಜಿ, ಚಂದ್ರಕಾಂತ, ಸತೀಶ ಮಣ್ಣೂರ, ಅಜಿತ್ ದೇಶಮುಖ ಮುಂತಾದವರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸಂಸ್ಥೆಯ ಮಾಜಿ ವಿದ್ಯಾರ್ಥಿಗಳನ್ನು ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.