ಬೆಳಗಾವಿ: ತಂದೆ-ತಾಯಿಗಳನ್ನು ವೃದ್ಧಾಶ್ರಮಗಳಿಗೆ ಕಳುಹಿಸುತ್ತಿರುವುದು ನಿಲ್ಲಬೇಕು. ಮಕ್ಕಳಿಗೆ ಸಂಸ್ಕೃತಿ ಮತ್ತು ಸೇವಾ ಮನೋಭಾವ ಕಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದ 13ನೇ ವಾರ್ಷಿಕೋತ್ಸವ ನಿಮಿತ್ತ ರವಿವಾರ ನಡೆದ ಗಡಿನಾಡು ಸಾಹಿತ್ಯ, ಸಂಸ್ಕೃತಿ ಉತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಭವಿಷ್ಯಕ್ಕಾಗಿ ತಂದೆ-ತಾಯಿಗಳು ಏನೆಲ್ಲ ತ್ಯಾಗ ಮಾಡುತ್ತಾರೆ. ಆದರೆ ದೊಡ್ಡವರಾದ ನಂತರ ಮಕ್ಕಳು ಪಾಲಕರನ್ನು ಮರೆಯುತ್ತಿದ್ದಾರೆ. ದೊಡ್ಡವರಾದ ನಂತರ ಮಕ್ಕಳು ತಂದೆ-ತಾಯಿಗಳಿಗೆ ಆಶ್ರಯರಾಗಬೇಕು. ಪಾಲಕರು ಮಕ್ಕಳ ಬದುಕಿಗೆ ಬೇಕಾಗಿರುವ ಉತ್ತಮ ಶಿಕ್ಷಣದ ಜೊತೆಗೆ ಅವರಿಗೆ ಸಂಸ್ಕೃತಿ ಮತ್ತು ಸೇವಾ ಮನೋಭಾವನೆ ಕಲಿಸಬೇಕು ಎಂದರು.
ಎಲೆ ಮರೆಯ ಕಾಯಿಗಳಂತೆ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವ ಕಾರ್ಯ ಶ್ಲಾಘನೀಯ. ಸಮಾಜ ಸೇವೆಯಲ್ಲಿ ತೊಡಗಿರುವವರನ್ನು ಗುರುತಿಸಬೇಕು. ಸಾಧಕರನ್ನು ಗೌರವಿಸುವ ಮೂಲಕ ಅವರ ಒಳ್ಳೆಯ ಕಾರ್ಯಗಳನ್ನು ಜನರಿಗೆ ಹಾಗೂ ಸರಕಾರಕ್ಕೆ ಪರಿಚಯಿಸಬೇಕು. ಇದರಿಂದ ಸಾಧಕರಿಗೆ ಪ್ರೇರಣೆ ಹಾಗೂ ಆನಂದ ಸಿಗುತ್ತದೆ. ಸರ್ಕಾರ ಮತ್ತು ಸಾಮಾಜಿಕ ಸಂಘಟನೆಗಳು ನೀಡುವ ಪ್ರಶಸ್ತಿಗಳಿಗೆ ಸಮಾನವಾದ ಗೌರವವಿದೆ ಎಂದರು.
ಕಾರಂಜಿಮಠದ ಶ್ರೀಗುರುಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಥಣಿಯ ಹಿರಿಯ ಸಾಹಿತಿ ಹಾಗೂ ನಾಟಕಕಾರ ಕೆ.ಎಲ್. ಕುಂದರಗಿ ಸರ್ವಾಧ್ಯಕ್ಷತೆ ವಹಿಸಿದ್ದರು. ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಪ್ರೊ| ಎಸ್.ಎಂ. ಹುರಕಡ್ಲಿ, ಕನ್ನಡ ಚಲನಚಿತ್ರ ಕಲಾವಿದೆ ಅಂಜಲಿ ಕಾಂಬಳೆ ಮಾತನಾಡಿದರು.
ಪ್ರತಿಷ್ಠಾನದ ಅಧ್ಯಕ್ಷ ಶಶಿಧರ ಘಿವಾರಿ ಸ್ವಾಗತಿಸಿದರು. ವಿಜಯಲಕ್ಷ್ಮೀ ಪುಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೈತ್ರೇಯಿಣಿ ಗದಿಗೆಪ್ಪಗೌಡರ ಪರಿಚಯಿಸಿದರು. ರುದ್ರಣ್ಣ ಚಂದರಗಿ, ವಿ.ಬಿ. ದೊಡಮನಿ, ಆಶಾ ಯಮಕನಮರಡಿ, ನಿರ್ಮಲಾ ಬಟ್ಟಲ ಸೇರಿದಂತೆ ಇತರರು ಇದ್ದರು. ವಿವಿಧ ಕ್ಷೇತ್ರಗಳ ಅನೇಕ ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.