Advertisement

ಮಕ್ಕಳಿಗೆ ಕೃಷಿ ಕಾರ್ಯ ಕಲಿಸಿ: ಡಾ|ವೀರೇಂದ್ರ ಹೆಗ್ಗಡೆ

01:30 AM Jun 29, 2022 | Team Udayavani |

ಬ್ರಹ್ಮಾವರ: ಎಲ್ಲ ಹೆತ್ತವರೂ ಮಕ್ಕಳಿಗೆ ಬೆಣ್ಣೆ ತಿನ್ನಿಸುವುದನ್ನು ಕಲಿಸುತ್ತಾರೆ. ಇದರ ಜತೆಗೆ ಕೃಷಿ ಕಾಯಕದ ಮೂಲಕ ನಮ್ಮ ಮಣ್ಣಿನ ಗುಣವನ್ನೂ ತಿಳಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಅವರು ಮಂಗಳವಾರ ಬಾರಕೂರು ಕೂಡ್ಲಿ ಉಡುಪರ ಮನೆ ವಠಾರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ವತಿಯಿಂದ 2022-23ನೇ ಸಾಲಿನಲ್ಲಿ ರಾಜ್ಯದ 20,000 ಹೆಕ್ಟೇರ್‌ ಪ್ರದೇಶದಲ್ಲಿ ಅನುಷ್ಠಾನಗೊಳ್ಳಲಿರುವ ಯಾಂತ್ರೀಕೃತ ಭತ್ತ ಬೇಸಾಯ (ಯಂತ್ರಶ್ರೀ), ಹಡಿಲು ಭೂಮಿ ಪುನಃಶ್ಚೇತನ ಯೋಜನೆಗಳಿಗೆ ಚಾಲನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಪರಿಸ್ಥಿತಿ
ಮೊದಲು ಮನೆಯಲ್ಲಿರುವ ಹತ್ತಾರು ಮಕ್ಕಳೇ ಕೃಷಿ ಕೆಲಸಕ್ಕೆ ಸಾಲುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಇರುವ ಎರಡು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಊರಿನಿಂದ ಹೊರಗೆ ಕಳುಹಿಸಲಾಗಿದೆ. ಪ್ರಸ್ತುತ ಗ್ರಾಮೀಣ ಭಾಗದಲ್ಲಿ ಕೃಷಿ ಭೂಮಿ ಇದ್ದರೂ ಹಡಿಲು ಬೀಳುವ ಪರಿಸ್ಥಿತಿ ಎದುರಾಗಿದೆ ಎಂದರು.

ಶ್ರಮಿಕರಿಗೆ ಪ್ರೇರಣೆ
ಶ್ರಮಿಕರಿಗೆ ಪ್ರೋತ್ಸಾಹ, ಮಾರ್ಗದರ್ಶನ ಒದಗಿಸಬೇಕು. ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ನಾವು ಪ್ರೇರಣೆ ನೀಡುತ್ತಿದ್ದೇವೆ. ಆಸಕ್ತರಿಗೆ ಅಗತ್ಯವಿರುವ ಬೆಂಬಲವನ್ನು ಯೋಜನೆ ಮೂಲಕ ನೀಡುತ್ತಿದ್ದೇವೆ. ಅಂತೆಯೇ ರೈತರಿಗೆ ಶಕ್ತಿ ನೀಡುವ ಉದ್ದೇಶದಿಂದಲೇ ಕೇಂದ್ರ ಸರಕಾರ ಇ-ಶ್ರಮ್‌, ಫಸಲ್‌ ವಿಮೆ ಮೊದಲಾದ ಯೋಜನೆಗಳನ್ನು ಅನುಷ್ಠಾನಿಸಿದೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಸದೃಢರಾಗಬೇಕು ಎಂದರು.

10,000 ರೈತ ಉತ್ಪಾದಕ
ಸಂಸ್ಥೆ: ಸಚಿವೆ ಶೋಭಾ
ಸಣ್ಣ ರೈತರನ್ನು ಸಂಘಟಿಸುವ ಉದ್ದೇಶದಿಂದ ಕೇಂದ್ರ ಸರಕಾರ 10 ಸಾವಿರ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸುತ್ತಿದೆ. ಈ ಮೂಲಕ ಕೃಷಿ ಉತ್ಪಾದನೆ, ಮಾರುಕಟ್ಟೆ ಒದಗಿಸುವುದು ಗುರಿಯಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಈ ಸಂಸ್ಥೆಗಳು ಸಹಕಾರಿಯಾಗಲಿವೆ. ಜತೆಗೆ ಕೇಂದ್ರ ಸರಕಾರವು ಬೆಳೆ ವಿಮೆ, ಹನಿ ನೀರಾವರಿ ಇತ್ಯಾದಿ ಹತ್ತು ಹಲವು ಯೋಜನೆ ಜಾರಿಗೆ ತಂದಿದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಸಂರಕ್ಷಣೆ, ರಫ್ತು ವಿಚಾರದಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಧರ್ಮಸ್ಥಳ ಮಾದರಿ
ಸರಕಾರ ಮಾಡುವ ಕಾರ್ಯವನ್ನು ಎನ್‌ಜಿಒ ಕೂಡ ಮುಂಚೂಣಿಯಲ್ಲಿ ನಿಂತು ಸಾಧಿಸಬಹುದು ಎನ್ನುವುದನ್ನು ಧರ್ಮಸ್ಥಳ ಗ್ರಾ.ಅ. ಯೋಜನೆ ತೋರಿಸಿದೆ. ಡಾ| ಹೆಗ್ಗಡೆ ಅವರ ನೇತೃತ್ವದಲ್ಲಿ ಧರ್ಮಸ್ಥಳ ಕ್ಷೇತ್ರವು ದೇಶಕ್ಕೆ ಮಾದರಿಯಾಗಿದೆ ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್‌, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ, ಯಡ್ತಾಡಿ ಗ್ರಾ.ಪಂ. ಅಧ್ಯಕ್ಷೆ ಸವಿತಾ ದೇವಾಡಿಗ, ಪ್ರಮುಖರಾದ ಅಪ್ಪಣ್ಣ ಹೆಗ್ಡೆ, ಬಿ. ಶಾಂತಾರಾಮ ಶೆಟ್ಟಿ, ಡಾ| ಕೆ. ವೆಂಕಟರಮಣ ಉಡುಪ, ಆನಂದ ಸಿ. ಕುಂದರ್‌, ಬಿ. ಶ್ರೀನಿವಾಸ ಶೆಟ್ಟಿಗಾರ್‌, ಸಂಪತ್‌ ಸಾಮ್ರಾಜ್ಯ ಉಪಸ್ಥಿತರಿದ್ದರು.

ಗ್ರಾ. ಯೋಜನೆಯ ಕಾ.ನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌ ಸ್ವಾಗತಿಸಿ, ದಿನೇಶ್‌ ಶೇರೆಗಾರ್‌ ವಂದಿಸಿದರು. ಸುಧೀರ್‌ ಜೈನ್‌, ದಿನೇಶ್‌ ಸಿ. ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next