Advertisement

ವಿಶ್ವಾಸ ದ್ರೋಹಿಗಳಿಗೆ ತಕ್ಕ ಪಾಠ ಕಲಿಸಿ

09:47 PM Sep 21, 2019 | Team Udayavani |

ಹೊಸಕೋಟೆ: ಅನರ್ಹಗೊಂಡ ಶಾಸಕರ 15 ಕ್ಷೇತ್ರಗಳಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಸಂಪೂರ್ಣ ಜಯಗಳಿಸಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ನಗರದ ಬಸ್‌ ನಿಲ್ದಾಣದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್‌ ಸ್ವಾಭಿಮಾನ ಸಮಾವೇಶಕ್ಕೆ ಕಹಳೆ ಊದುವ ಮೂಲಕ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಅಲ್ಪಮತದ ಸರ್ಕಾರ ಉಪಚುನಾವಣೆ ನಂತರ ಪತನಗೊಂಡು ಮತ್ತೆ ಕಾಂಗ್ರೆಸ್‌ ಅಧಿಕಾರ ಪಡೆಯುವು ಶತಃಸಿದ್ಧ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್‌ ಪಕ್ಷಕ್ಕಷ್ಟೇ ಅಲ್ಲದೆ ಮತದಾರರಿಗೂ ದ್ರೋಹ ಎಸಗಿದವರನ್ನು ರಾಜಕೀಯದಲ್ಲಿ ಉಳಿಯಲು ಬಿಡಬಾರದು ಎಂದರು.

Advertisement

ವಿಶ್ವಾಸ ದ್ರೋಹಿಗಳಿಗೆ ತಕ್ಕ ಪಾಠ ಕಲಿಸಿ: ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ತಮ್ಮ ನಿವಾಸದಲ್ಲಿ ಮಾಧ್ಯಮದವರ ಮುಂದೆ ಘೋಷಿಸಿ ನಂತರ ಏಕಾಏಕಿ ಮುಂಬೈಗೆ ಜಿಗಿದು ಸಮ್ಮಿಶ್ರ ಸರಕಾರ ಪತನಕ್ಕೆ ಕಾರಣವಾದ ಅನರ್ಹ ಶಾಸಕ ಡಾ. ಸುಧಾಕರ್‌ ಮತದಾರರಿಗೆ ಮಾಡಿರುವ ಅಪಮಾನವಾಗಿದೆ. ಇಂತಹ ವಿಶ್ವಾಸ ದ್ರೋಹಿಗಳಿಗೆ ತಕ್ಕ ಪಾಠ ಕಲಿಸಲು ಮತದಾರರು ಉಪ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ ಪಕ್ಷಗಳನ್ನು ಸೋಲಿಸಲು ಸ್ವಾಭಿಮಾನಿ ಕಾಂಗ್ರೆಸ್‌ ಕಾರ್ಯಕರ್ತರು ಪಣತೊಡಬೇಕು ಎಂದು ತಿಳಿಸಿದರು.

ಸುಮಲತಾ ಗೆಲುವು ಆದರ್ಶವಾಗಲಿ: ಹಣ ಖರ್ಚು ಮಾಡಿದರೆ ಮತ ಪಡೆಯಬಹುದು ಎಂಬ ಭ್ರಮೆಯಲ್ಲಿರುವವರಿಗೆ ಮತದಾರರು ಮತ ಮಾರಾಟಕ್ಕಿಟ್ಟಿಲ್ಲ ಎಂಬುದನ್ನು ನಿರೂಪಿಸಬೇಕು. ಎಂಟಿಬಿ ನಾಗರಾಜ್‌ ಕಾಂಗ್ರೆಸ್‌ ತೊರೆದರೂ ಸಹ ತಾಲೂಕಿನಲ್ಲಿ ಇನ್ನೂ ಶೇ.80ರಷ್ಟು ಕಾಂಗ್ರೆಸ್‌ ಕಾರ್ಯಕರ್ತರು ಪಕ್ಷದಲ್ಲಿಯೇ ಉಳಿದಿದ್ದು, ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಸ್ವಾಭಿಮಾನದ ಹೆಸರಿನಲ್ಲಿ ಜಯಗಳಿಸಿರುವುದು ಕಾರ್ಯಕರ್ತರಿಗೆ ಆದರ್ಶವಾಗಬೇಕೆಂದರು.

ಐಟಿ, ಇಡಿ ದಾಳಿಗೆ ಹೆದರಿ ಬಿಜೆಪಿಗೆ ಬೆಂಬಲ: ಪಕ್ಷದಲ್ಲಿ ಎಂಟಿಬಿ ನಾಗರಾಜ್‌ಗಿಂತಲೂ ಹಿರಿಯರಾದ ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ. ರೇವಣ್ಣರನ್ನು ಹೊರತುಪಡಿಸಿ ಹಿಂದೆ ನೀಡಿದ್ದ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ ಸಮ್ಮಿಶ್ರ ಸರಕಾರದಲ್ಲಿ ಪ್ರಮುಖವಾದ ವಸತಿ ಖಾತೆಯನ್ನು ನೀಡಿ ಈಗ ಪಶ್ವಾತ್ತಾಪ ಪಡುವಂತಾಗಿದೆ. ಬಹುಶ: ಐಟಿ, ಇಡಿ ದಾಳಿಗೆ ಹೆದರಿ ಆಸ್ತಿ ಉಳಿಸಿಕೊಳ್ಳಲು ಬಿಜೆಪಿಗೆ ಬೆಂಬಲಿಸಿರಬಹುದು ಎಂದು ಅಭಿಪ್ರಾಯಪಟ್ಟರು.

ದೇಶದ ಆರ್ಥಿಕ ಸ್ಥಿತಿ ಅಧೋಗತಿ: ಕೇಂದ್ರ ಬಿಜೆಪಿ ಸರ್ಕಾರ 2014ರ ಚುನಾವಣೆಯಲ್ಲಿ ನೀಡಿದ್ದ ಯಾವುದೇ ಭರವಸೆ ಈಡೇರಿಸಲು ವಿಫ‌ಲವಾಗಿದ್ದು, 2019ರಲ್ಲಿ ಹಿಂದುತ್ವ, ಜಮ್ಮು ಮತ್ತು ಕಾಶ್ಮೀರ, ರಾಮನ ಹೆಸರನ್ನು ಭಾವನಾತ್ಮಕವಾಗಿ ಬಳಸಿಕೊಂಡು ಗೆಲುವು ಸಾಧಿಸಿದೆ. ಧರ್ಮಗಳ ನಡುವೆ ಸಂಘರ್ಷ ನಿರ್ಮಿಸಿ ರಾಷ್ಟ್ರದ ಆರ್ಥಿಕ ಸ್ಥಿತಿಯನ್ನು ಅಧೋಗತಿಗೆ ತಂದಿರುವುದೆ ಬಿಜೆಪಿ ಸಾಧನೆ. ಉದ್ಯೋಗ ಸೃಷ್ಟಿಯಲ್ಲಿ ಸಂಪೂರ್ಣ ವಿಫ‌ಲವಾಗಿದ್ದು, ಜಿಎಸ್‌ಟಿ ಉದ್ಯಮಿಗಳಿಗೆ ಶಾಪವಾಗಿ ಜಿಡಿಪಿ ಸಹ ಕುಸಿತಗೊಂಡು ಬಹಳಷ್ಟು ಕಾರ್ಖಾನೆಗಳು ಮುಚ್ಚುವ ಹಂತ ತಲುಪಿವೆ ಎಂದರು.

Advertisement

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ಶಾಸಕರನ್ನು ಖರೀದಿಸಲು ಬಿಜೆಪಿ 500-1000 ಕೋಟಿ ರೂ. ವೆಚ್ಚ ಮಾಡಿದ್ದು, ಭ್ರಷ್ಟಾಚಾರದ ತಳಹದಿಯ ಮೇಲೆ ರಾಜ್ಯ ಸರಕಾರ ನಿಂತಿದೆ. ಪ್ರವಾಹಕ್ಕೆ ಒಳಗಾಗಿರುವ ಸಂತ್ರಸ್ತರಿಗೆ ಪರಿಹಾರ ಒದಗಿಸಲು ನಿರ್ಲಕ್ಷ್ಯ ತೋರುತ್ತಿರುವ ಕೇಂದ್ರ ಸರಕಾರ ನೆರವು ನೀಡುತ್ತಿಲ್ಲ. ಇದನ್ನು ಖಂಡಿಸಿ ಸೆ.26ರಂದು ಕಾಂಗ್ರೆಸ್‌ ಪಕ್ಷದಿಂದ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ವಾರದೊಳಗಾಗಿ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅನರ್ಹ ಶಾಸಕರ ಅತಂತ್ರ ಸ್ಥಿತಿಯಲ್ಲಿದ್ದಾರೆ. ಚುನಾವಣೆಗೆ ಯಾರೇ ಸ್ಪರ್ಧಿಸಿದರೂ ಸಹ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಮಾಜಿ ಸಚಿವ ಕೃಷ್ಣಬೈರೇಗೌಡ, ತಾಲೂಕಿನಲ್ಲಿ ಎಂಟಿಬಿ ನಾಗರಾಜ್‌ ಬರುವುದಕ್ಕೆ ಮೊದಲಿನಿಂದಲೂ ಕಾಂಗ್ರೆಸ್‌ ಅಸ್ತಿತ್ವದಲ್ಲಿತ್ತು. ಮಾಜಿ ಸಚಿವ ಎನ್‌.ಚಿಕ್ಕೇಗೌಡ ಸಹ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದೆ ಇದಕ್ಕೆ ಸಾಕ್ಷಿ. ಯಾವುದೇ ಅಕ್ರಮಗಳು ಪತ್ತೆಯಾದಲ್ಲಿ ಡಿ.ಕೆ.ಶಿವಕುಮಾರ್‌ರಂತೆ ಜೈಲಿಗೆ ಹೋಗಲು ತಾವು ಸಿದ್ಧ ಎಂದು ಸವಾಲು ಎಸೆದ ಎಂಬಿಟಿ ನಾಗರಾಜ್‌ ಪಕ್ಷದ ಸಂಘಟನೆಯಿಂದ ಆತಂಕಗೊಂಡು ವಿನಾಕಾರಣ ಕಾಂಗ್ರೆಸ್‌ ಜಿಲ್ಲಾಧ್ಯಕ್ಷನ್ನುಜೈಲಿಗೆ ಕಳುಹಿಸಿ ಭೀತಿ ಮೂಡಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಎಂಟಿಬಿಯಿಂದ ಸಾಲ ಪಡೆದಿದ್ದು ಸತ್ಯ, ಆದರೆ ಒಂದು ಪೈಸೆಯೂ ಬಾಕಿಯಿಲ್ಲದಂತೆ ಪೂರ್ಣವಾಗಿ ತೀರಿಸಲಾಗಿದೆ. ತಾಲೂಕಿನಲ್ಲಿ ಪೊಲೀಸರನ್ನು ದುರುಪಯೋಗ ಮಾಡಿಸಿಕೊಂಡು ಕಾಂಗ್ರೆಸ್‌ ಕಾರ್ಯಕರ್ತರನ್ನು ಬಗ್ಗು ಬಡಿಯುವ ಪ್ರಯತ್ನಕ್ಕೆ ಹೆದರದೆ ಆತ್ಮವಿಶ್ವಾಸದಿಂದ ಸಂಘಟನೆಯಲ್ಲಿ ತೊಡಗಬೇಕು ಎಂದರು. ಕಾರ್ಯಕ್ರಮದಲ್ಲಿ ಶಾಸಕ ಬೈರತಿ ಸುರೇಶ್‌, ಮಾಜಿ ಶಾಸಕ ನಜೀರ್‌ ಅಹಮದ್‌, ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪುಷ್ಪ ಅಮರನಾಥ್‌ ಮಾತನಾಡಿದರು. ಇದಕ್ಕೂ ಮುನ್ನ ಪ್ರವಾಸಿ ಮಂದಿರ ವೃತ್ತದಿಂದ ಕೆ.ಆರ್‌.ರಸ್ತೆ ಮೂಲಕ ಬಸ್‌ ನಿಲ್ದಾಣದ ವರೆಗೆ ಮೆರವಣಿಗೆ ನಡೆಸಲಾಯಿತು.

ಸಂವಿಧಾನಕ್ಕೆ ಗೌರವ ನೀಡುವ ಉದ್ದೇಶದಿಂದ ಯಾವುದೇ ಸಮರ್ಪಕವಾದ ಕಾರಣ ನೀಡದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರನ್ನು ಕಾನೂನುಬದ್ಧವಾಗಿ ಅನರ್ಹಗೊಳಿಸಲಾಗಿದೆ. ಕಾಂಗ್ರೆಸ್‌ ಪಕ್ಷದ ಚಿಹ್ನೆಯಲ್ಲಿ ಜಯಗಳಿಸಿ ನಂತರ ರಾಜೀನಾಮೆ ನೀಡಿರುವುದು ತಾಳಿ ಕಟ್ಟಿದ ಪತ್ನಿಯನ್ನು ತೊರೆದು ಮತ್ತೂಬ್ಬರೊಂದಿಗೆ ಸಂಸಾರ ನಡೆಸುವ ಮೂಲಕ ಅನರ್ಹ ಶಾಸಕರು ನಮ್ಮಕ್‌ ಹರಾಮ್‌ಗಳಾಗಿದ್ದಾರೆ.
-ರಮೇಶ್‌ ಕುಮಾರ್‌, ಮಾಜಿ ಸ್ಪೀಕರ್‌

Advertisement

Udayavani is now on Telegram. Click here to join our channel and stay updated with the latest news.

Next