Advertisement

ಸಿಎಎ ಬಗ್ಗೆ ಅಪಪ್ರಚಾರ ಮಾಡುವ ದೇಶದ್ರೋಹಿಗಳಿಗೆ ಪಾಠ ಕಲಿಸಿ : ಸದಾನಂದಗೌಡ

10:05 AM Jan 28, 2020 | Team Udayavani |

ಮಂಗಳೂರು: ದೇಶದಲ್ಲಿ ಸಿಎಎ ಹಾಗೂ ಎನ್‌ಆರ್‌ಸಿ ಬಗ್ಗೆ ಅಪಪ್ರಚಾರ ಮಾಡಿ ಪ್ರಚೋದನೆಗಾಗಿ ಸುಳ್ಳು ಸುದ್ದಿ ಹರಡಿಸುವ ದೇಶದ್ರೋಹಿಗಳಿಗೆ ಪಾಠ ಕಲಿಸುವುದು ನಮ್ಮ ಜವಾಬ್ದಾರಿ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

Advertisement

ನಗರ ಕೂಳೂರಿನಲ್ಲಿರುವ ಗೋಲ್ಡ್‌ಫಿಂಚ್‌ ಸಿಟಿ ಮೈದಾನದಲ್ಲಿ ಕೇಂದ್ರ ಸರಕಾರದ ಭಾರತೀಯ ಪೌರತ್ವ ಕಾಯ್ದೆ(ಸಿಎಎ) ಪರವಾಗಿ ಬಿಜೆಪಿ ವತಿಯಿಂದ ಸೋಮವಾರ ನಡೆದ ಜನಜಾಗೃತಿ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಎನ್‌ಆರ್‌ಸಿ ಮತ್ತು ಎನ್‌ಆರ್‌ಸಿಗೆ ಯಾವುದೇ ಸಂಬಂಧವಿಲ್ಲ. ಆದರೆ, ಇವೆರಡರ ಮಧ್ಯೆ ಸಂಬಂಧ ಕಲ್ಪಿಸಿ ಅಪಪ್ರಚಾರ ಮಾಡಲಾಗುತ್ತಿದೆ. ಈ ರೀತಿ ಜನರಲ್ಲಿ ಎರಡೂ ಕಾಯ್ದೆ ಬಗ್ಗೆ ಗೊಂದಲ ಸೃಷ್ಟಿಸುವ ದೇಶದ್ರೋಹಿಗಳ ಬಗ್ಗೆ ದೇಶದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ನುಡಿದರು.

ದೇಶದ್ರೋಹಿ ಸಂಘಟನೆಗಳು ಕಾಂಗ್ರೆಸ್‌ನ ಆಶ್ರಯ ಪಡೆದು ಕಾಂಗ್ರೆಸ್‌ ಮುಖಾಂತರ ಬೀದಿಗಿಳಿದಿದ್ದಾರೆ. ಯಾವುದೇ ನಾಗರಿಕನಿಗೆ ಕಾಯಿದೆಯಿಂದ ತೊಂದರೆಯಾಗಿಲ್ಲ. ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾಕರಿಗೆ ರಕ್ಷಣೆ ನೀಡಬೇಕು ಎಂದು ನೆಹರೂ ಮತ್ತು ಲಿಯಾಖತ್‌ ಆಲಿ ನಡುವೆ ನಡೆದಿದ್ದ ಒಪ್ಪಂದವನ್ನು ಕಾಂಗ್ರೆಸ್‌ ಜಾರಿಗೆ ತರಲಿಲ್ಲ. ನರೇಂದ್ರ ಮೋದಿಯವರು ನುಡಿದಂತೆ ನಡೆಯುತ್ತಿದ್ದಾರೆ. ಅಸ್ಸಾಂನಲ್ಲಿ ಎನ್‌ಆರ್‌ಸಿ ಸುಪ್ರೀಂಕೋರ್ಟ್‌ನ ಆದೇಶದ ಅನುಸಾರವಾಗಿ ನಡೆಯುತ್ತಿದೆ. ಎನ್‌ಆರ್‌ಸಿ ಮತ್ತು ಸಿಎಎಗೆ ಯಾವುದೇ ಸಂಬಂಧವಿಲ್ಲ. ಪ್ರಚೋದನೆಗಾಗಿ ಸುಳ್ಳು ಸುದ್ದಿ ಹರಡಿಸುವ ದೇಶದ್ರೋಹಿಗಳಿಗೆ ಪಾಠ ಕಲಿಸುವುದು ನಮ್ಮ ಜವಾಬ್ದಾರಿ. ಸಿಎಎ ಜಗತ್ತಿಗೆ ಮಾನವೀಯತೆಯ ಸಂದೇಶ ಸಾರುವ ಕಾಯಿದೆ ಎಂದು ಅವರು ತಿಳಿಸಿದರು.

ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ 370 ಕಲಂನಡಿ ನೀಡಲಾಗಿದ್ದ ವಿಶೇಷ ಸ್ಥಾನ-ಮಾನವನ್ನು ರದ್ದುಗೊಳಿಸಿದ ಬಳಿಕ ಕಾಶ್ಮೀರ ಜನರು ಸ್ವಾಭಿಮಾನದಿಂದ ಬದುಕು ನಡೆಸುತ್ತಿದ್ದಾರೆ. ಕೇಂದ್ರ ಸರಕಾರದ ಈ ಕ್ರಮವನ್ನು ವಿರೋಧಿಸುತ್ತಿರುವವರು ಒಮ್ಮೆ ಜಮ್ಮು-ಕಾಶ್ಮೀರಕ್ಕೆ ಹೋಗಿ ಅಲ್ಲಿನ ವಾಸ್ತವಾಂಶ ತಿಳಿದುಕೊಂಡು ಬರಲಿ ಎಂದು ಸದಾನಂದಗೌಡರು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next