Advertisement

ಬಿಜೆಪಿ-ಮಿತ್ರ ಪಕ್ಷಗಳಿಗೆ ತಕ್ಕ ಪಾಠ ಕಲಿಸಿ: ಬಸವರಾಜ್‌

02:12 PM Mar 25, 2019 | pallavi |

ದಾವಣಗೆರೆ: ಕಳೆದ ಐದು ವರ್ಷದ ಅಧಿಕಾರವಧಿಯಲ್ಲಿ ಯಾವುದೇ ಅಭಿವೃದ್ಧಿ ಮಾಡದ, ಕೋಮುವಾದ ಹುಟ್ಟು ಹಾಕುತ್ತಿರುವ ಬಿಜೆಪಿ ಮತ್ತು ಮಿತ್ರ ಪಕ್ಷಗಳಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಭಾರತ ಕಮ್ಯೂನಿಷ್ಟ್ ಪಕ್ಷ (ಮಾರ್ಕ್ಸ್ವಾದಿ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ್‌ ಮನವಿ ಮಾಡಿದ್ದಾರೆ.

Advertisement

ಭಾನುವಾರ ರೋಟರಿ ಬಾಲಭವನದಲ್ಲಿ ಸಿಪಿಐ(ಎಂ)ಜಿಲ್ಲಾ ಮಟ್ಟದ ರಾಜಕೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ನೀಡಿದ್ದಂತಹ ಯಾವುದೇ ಭರವಸೆ ಈಡೇರಿಸಿಲ್ಲ. ಅಚ್ಛೇ ದಿನ್‌ ತರಲೇ ಇಲ್ಲ ಎಂದರು.

ದೇಶಪ್ರೇಮದ ಬಗ್ಗೆ ಭಾರೀ ಮಾತನಾಡುವ ಕೇಂದ್ರ ಸರ್ಕಾರ ದೇಶದ ಬಡವರು, ಕಾರ್ಮಿಕರು, ರೈತರ ಪರ ಒಂದೇ ಒಂದು ಕೆಲಸ ಮಾಡಲಿಲ್ಲ. ಬರೀ ಬಂಡವಾಳಶಾಹಿಗಳ ಪರವಾಗಿಯೇ ಕೆಲಸ ಮಾಡಿದೆ. ಅಚ್ಛೇದಿನ್‌… ತರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅಚ್ಛೇದಿನ್‌ ಬಂದಿದ್ದು ಬಂಡವಾಳಶಾಹಿಗಳಿಗೆ ಮಾತ್ರವೇ ಹೊರತು ಜನ ಸಾಮಾನ್ಯರಿಗೆ ಅಲ್ಲವೇ ಅಲ್ಲ ಎಂದರು.

ಅಧಿಕಾರಕ್ಕೆ ಬಂದಂತಹ ಕೇವಲ 100 ದಿನಗಳಲ್ಲಿ ವಿದೇಶಿಗಳಲ್ಲಿನ ಕಪ್ಪು ಹಣ ತಂದು ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ 15 ಲಕ್ಷ ರೂಪಾಯಿ ಹಾಕುವುದಾಗಿ ಹೇಳಿದ್ದರು. 5 ವರ್ಷ ಕಳೆದರೂ ಒಬ್ಬರ ಖಾತೆಗೆ ಐದು ಪೈಸೆಯನ್ನೂ ಹಾಕಲಿಲ್ಲ. ವಿದೇಶಿ ಬ್ಯಾಂಕ್‌ಗಳಲ್ಲಿ 5 ವರ್ಷಗಳ ಕಾಲ ಬಜೆಟ್‌ ಮಾಡುವಷ್ಟು ಕಪ್ಪು ಹಣ ಇದೆ. ಕೇಂದ್ರ ಸರ್ಕಾರ ಹೇಳಿದ್ದಂತೆಯೇ ಆ ಹಣವನ್ನು ದೇಶಕ್ಕೆ ತಂದಿದ್ದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಆಗುತ್ತಿದ್ದವು ಎಂದು ತಿಳಿಸಿದರು.

ಕೇಂದ್ರ ಸರ್ಕಾರವೇ ಕನಿಷ್ಠ ವೇತನ ಕಾಯ್ದೆಯಡಿ ಮಾಸಿಕ 18 ಸಾವಿರ ರೂಪಾಯಿ ವೇತನ ದೊರೆಯಬೇಕು ಎಂದು ಹೇಳುತ್ತದೆ. ಆದರೆ, ಈಗಲೂ ಲಕ್ಷಾಂತರ ಕಾರ್ಮಿಕರಿಗೆ ಕಡಿಮೆ ವೇತನ ನೀಡಲಾಗುತ್ತಿದೆ. ಒಂದು ಕುಟುಂಬ ನಿರ್ವಹಣೆಗೆ ಅಗತ್ಯ ಪ್ರಮಾಣದಲ್ಲಿ ಹಣ ಸಿಗದೆ ಕಷ್ಟದ ದಿನಗಳಲ್ಲಿಯೇ ಕಾಲ ಕಳೆಯುವ ಸ್ಥಿತಿ ಇದೆ. ಕಾರ್ಮಿಕರು ಕನಿಷ್ಠ ವೇತನಕ್ಕಾಗಿ ನಿರಂತರ ಹೋರಾಟ ಮಾಡಿಕೊಂಡು ಬರಬೇಕಾಗಿದೆ ಎಂದು ತಿಳಿಸಿದರು.

Advertisement

ಅಧಿಕಾರಕ್ಕೆ ಬರುವ ಮುನ್ನ ಡಾ| ಸ್ವಾಮಿನಾಥನ್‌ ವರದಿ ಅನುಷ್ಠಾನದ ಬಗ್ಗೆ ಕೇಂದ್ರ ಸರ್ಕಾರ ಹೇಳಿತ್ತು. ಸ್ವಾಮಿನಾಥನ್‌ ವರದಿ ಜಾರಿಗೆ ತರದ ಕಾರಣಕ್ಕೆ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರೆಯುತ್ತಲೇ ಇಲ್ಲ.

ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಸಾಲ ಮತ್ತಿತರ ಕಾರಣಕ್ಕೆ ಪ್ರತಿ ಅರ್ಧ ಗಂಟೆಗೊಮ್ಮೆ ರೈತರು ಆತ್ಮಹತ್ಯೆಯಂತಹ ಘೋರ ಹಾದಿ ತುಳಿಯುತ್ತಿದ್ದಾರೆ ಎಂದು ತಿಳಿಸಿದರು. ಜಿಎಸ್‌ಟಿ ಮೂಲಕ ಜನರು ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಅಗತ್ಯ ವಸ್ತುಗಳು ಬೆಲೆಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ನಕಲಿ ನೋಟು ತೆಡೆಯುವುದಕ್ಕೆ ನೋಟು ಅಮಾನ್ಯಿಕರಣ ಎಂದು ಹೇಳಲಾಗುತ್ತಿತ್ತು.

ಈಗ ಬ್ಯಾಂಕ್‌ ಮುಂದೆ 2 ಸಾವಿರ ರೂಪಾಯಿ ನೋಟು ನಕಲಿ ಇರುವ ಬಗ್ಗೆ ನಾಮಫಲಕ ಹಾಕಲಾಗುತ್ತಿದೆ ಎಂದು ದೂರಿದರು. ಈ ಲೋಕಸಭಾ ಚುನಾವಣೆಯಲ್ಲಿ ಕೆಲ ಪಕ್ಷಗಳು ಹಣ, ಜಾತಿ, ಧರ್ಮದ ಬಲದಿಂದ ಗೆಲ್ಲುವ ಕಸರತ್ತು ನಡೆಸುತ್ತಿವೆ. ದೇಶದ ಅಭಿವೃದ್ಧಿ ಮತ್ತು ಸಂವಿಧಾನ ಉಳಿಗಾಗಿ ಶ್ರಮಿಸುವ ಪಕ್ಷಕ್ಕೆ ಮತ ನೀಡಬೇಕಾಗಿದೆ. ಯಾವುದೇ ಪಕ್ಷಕ್ಕೂ ಹಣಕ್ಕಾಗಿ ಮತ ಮಾರಿಕೊಳ್ಳಬಾರದು. ಮತದಾರರು ಚಿಂತನೆ ಮಾಡಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು. ಪಕ್ಷದ ರಾಜ್ಯ ಕಾರ್ಯದರ್ಶಿ ಆರ್‌.ಎಸ್‌. ಬಸವರಾಜ್‌, ಜಿಲ್ಲಾ ಸಂಘಟನಾ ಕಾರ್ಯ ದರ್ಶಿ ಟಿ.ವಿ. ರೇಣುಕಮ್ಮ, ಮುಖಂಡ ಕೆ.ಎಲ್‌. ಭಟ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next