ಅದೊಂದು ದಿನ, ನಮಗೆಲ್ಲ ಸರ್‌ಪ್ರೈಸ್ ಕಾದಿತ್ತು. ನಮ್ಮ ಸೀನಿಯರ್‌ಗಳು ಟೀ ಪಾರ್ಟಿಯನ್ನು ಆಯೋಜಿಸಿದ್ದರು. ಇಂಥ ಚಹಾಕೂಟ ಆಯೋಜಿಸಿ, ಪರಸ್ಪರ ಪರಿಚಯ ಮಾಡಿಕೊಳ್ಳುವುದು ಇಲ್ಲಿ ಪರಿಪಾಠವಾಗಿಯೂ ನಡೆದುಬಂದಿದೆ. ಅಲ್ಲಿಯ ತನಕ ನನಗೆ ಚಹಾಕೂಟ ಅಂದರೇನೆಂದು ತಿಳಿದೇ ಇರಲಿಲ್ಲ…
ಚಹಾದ ಪರಿಮಳದಲ್ಲೇ ಏನೋ ಚಮತ್ಕಾರವಿದೆ. ಅದು ನನಗೆ ಮೊದಲು ಮನದಟ್ಟಾಗಿದ್ದು, ಟಿವಿಯಲ್ಲಿ ಕಾಡುವ ಆ ಜಾಹೀರಾತಿನಿಂದ: “ಒಳಗೆ ಬನ್ನಿ…’ ಅಂತ ವೃದ್ಧ ದಂಪತಿಗೆ ಒಬ್ಬಳು ಮಹಿಳೆ ಪ್ರೀತಿಯಿಂದ ಆಹ್ವಾನಿಸುತ್ತಾರೆ. ಆದರೆ, ಅನ್ಯಧರ್ಮ ಎಂಬ ಕಾರಣಕ್ಕೆ, ಆ ವೃದ್ಧ ಒಳಗೆ ಹೋಗಲು ಒಪ್ಪುವುದೇ ಇಲ್ಲ. ಪತ್ನಿ ಹೋಗೋಣ ಬನ್ನಿ ಅಂತ ಕೈಹಿಡಿದು ಜಗ್ಗಿದರೂ, ಆತ ಕೇಳುವುದಿಲ್ಲ. ಕೆಲ ನಿಮಿಷಗಳ ನಂತರ ಆ ಮಹಿಳೆಯ ಮನೆಯಿಂದ ಚಹಾದ ಪರಿಮಳ ಬರುತ್ತೆ. ವೃದ್ಧನ ಮೂಗು ಅರಳುತ್ತೆ. ಆತ ಪರಿಮಳವನ್ನು ಆಸ್ವಾದಿಸುತ್ತಾ, “ಚಹಾದ ಒಳ್ಳೆಯ ಪರಿಮಳ ಬರುತ್ತೆ ಅವರ ಮನೆಯಿಂದ’ ಎನ್ನುತ್ತಾ, ಮನೆಯೊಳಗೆ ಕಾಲಿಡಲು ನಿರ್ಧರಿಸುತ್ತಾನೆ. “ಇನ್ನೊಂದು ಕಪ್ ಚಹಾ ಸಿಗಬಹುದಾ?’ ಎಂಬ ಆತನ ಪ್ರಶ್ನೆಯಲ್ಲಿ ಮಾನವೀಯ ಪ್ರೀತಿಯೊಂದು ಇಣುಕುತ್ತದೆ.
ಹಾಗಾಗಿ, ಈ ಜಾಹೀರಾತು ಬಂದಾಗ ನಾನು ರಿಮೋಟ್ ಹಿಡಿದೇ ಧ್ಯಾನಸ್ಥನಾಗುತ್ತೇನೆ. ಚಾನೆಲ್ ಬದಲಿಸಲು ಮುಂದಾಗಲಾರೆ. ಚಹಾದ ಬಗ್ಗೆ ನನಗೆ ಮೋಹ ಹುಟ್ಟಿದ್ದು ಇಲ್ಲಿಂದಲೇ. ಮಾನಸ ಗಂಗೋತ್ರಿಗೆ ಬಂದ ಮೇಲಂತೂ ಈ ಪೇಯದ ಮೇಲೆ ಅತೀವ ಪ್ರೀತಿ ಹುಟ್ಟಿತು. ಮೈಸೂರು ವಿವಿ! ಶತಮಾನದಷ್ಟು ಹಳೆಯ ಜ್ಞಾನದೇಗುಲ. ಕುವೆಂಪು ಅವರ ಚಿಂತನೆಗಳೇ ಆ ದೇಗುಲದ ಮಂತ್ರ. ಪ್ರಕೃತಿಯ ರಮ್ಯ ವಾತಾವರಣದ ನಡುವೆ ಸ್ವತ್ಛ ಮಾನಸ ಗಂಗೋತ್ರಿಯಲ್ಲಿ ನಡೆದಾಡುವುದೇ ಒಂದು ಸೊಗಸು.
ಮೊದ ಮೊದಲ ದಿನಗಳು. ಭಯವೇ ಹೃದಯ ಬಾಗಿಲಲ್ಲಿ ಬಂದು ನಿಂತಿತ್ತು. ನನ್ನೊಳಗೆ ಮೌನದ್ದೇ ಮೇಳ. ಎಲ್ಲಿ ನೋಡಿದರೂ ಹೊಸ ಮುಖಗಳು. ಯಾರಿಗ್ಯಾರೂ ಇಲ್ಲಿ ಪರಿಚಿತರಿಲ್ಲ. ಕೆಲ ದಿನಗಳು ಹಾಗೆಯೇ ಉರುಳಿದವು. ನಂತರ ಹಾಯ್ ಬಾಯ್ ಎನ್ನುತ್ತಾ ಸಣ್ಣಪುಟ್ಟ ನಗುವನ್ನು ತೇಲಿಸುವಷ್ಟು ಸಲುಗೆ ಚಿಗುರಿತು. ನನ್ನ ಸ್ನೇಹಿತರಿಗೆಲ್ಲ ಪುಟ್ಟ ಪುಟ್ಟ ಹರಟೆ ಖುಷಿ ಕೊಟ್ಟು, ಟೈಮ್ ಹೇಗೆ ಕಳೆಯುತ್ತಿದೆ ಅನ್ನೋದೇ ತಿಳಿಯದಾಗುತ್ತಿತ್ತು. ಆದರೆ, ನಾನಂತೂ ಕ್ಲಾಸಿನಲ್ಲಿ ಮೂಕಪ್ರೇಕ್ಷಕನಂತೆ ಕೂತಿರುತ್ತಿದ್ದೆ. ಯಾರೊಂದಿಗೂ ಜಾಸ್ತಿ ಬೆರೆಯುತ್ತಿರಲಿಲ್ಲ. ಇನ್ನೊಬ್ಬರ ಬಳಿ ಮಾತನಾಡಲು ಏನೋ ಮುಜುಗರ. ಅದೊಂದು ದಿನ, ನಮಗೆಲ್ಲ ಸರ್‌ಪ್ರೈಸ್ ಕಾದಿತ್ತು. ನಮ್ಮ ಸೀನಿಯರ್‌ಗಳು ಟೀ ಪಾರ್ಟಿಯನ್ನು ಆಯೋಜಿಸಿದ್ದರು. ಇಂಥ ಚಹಾಕೂಟ ಆಯೋಜಿಸಿ, ಪರಸ್ಪರ ಪರಿಚಯ ಮಾಡಿಕೊಳ್ಳುವುದು ಇಲ್ಲಿ ಪರಿಪಾಠವಾಗಿಯೂ ನಡೆದುಬಂದಿದೆ. ಅಲ್ಲಿಯ ತನಕ ನನಗೆ ಚಹಾಕೂಟ ಅಂದರೇನೆಂದು ತಿಳಿದೇ ಇರಲಿಲ್ಲ. ನನಗೆ ಗೊತ್ತಿದ್ದಿದ್ದು, ಒಂದೇ ಟೀ ಪಾರ್ಟಿ… ಅದು 1773ರ ಬೋಸ್ಟನ್ ಟೀ ಪಾರ್ಟಿಯ ಕತೆ!
ಜೂನಿಯರ್ಗೆ ಹೂ ನೀಡಿ ಸುಸ್ವಾಗತ ಕೋರುವ ಕಾರ್ಯಕ್ರಮ ಶುರುವಾಯಿತು. ಸ್ವಲ್ಪ ತರಲೆ, ಅಷ್ಟೇ ಕೀಟಲೆ, ಟೋಟಲ್ಲಾಗಿ ತಮಾಷೆಯಿಂದ ಕೂಡಿದ್ದ ದೃಶ್ಯ. ಈ ಮಧ್ಯದಲ್ಲಿ ನಮ್ಮ ಅರಿವಿಗೆ ಬಾರದ ಹಾಗೆ ರ್ಯಾಗಿಂಗ್ ಸಾಗುತ್ತಲೇ ಇತ್ತು. ಸೀನಿಯರ್ ಹುಡುಗಿಯರಿಗೆ ನಾವು ಪ್ರಪೋಸ್ ಮಾಡಬೇಕಿತ್ತು. ಇಷ್ಟ ಇಲ್ಲದೇ ಇದ್ದರೂ, “ಜಸ್ಟ್ ಫಾರ್ ಫನ್’ ಅಂತ ಹೇಳಿ ನಮ್ ಹುಡುಗರು ಪ್ರಫೋಸ್ ಮಾಡಿಯೇಬಿಟ್ಟರು. ಆದರೆ, ನನಗೆ ಮಾತ್ರ ಭಯ. ಸಣ್ಣಗೆ ಕಂಪಿಸುತ್ತಿದ್ದೆ. ಸದ್ಯ ನನಗೆ ಮಿಮಿಕ್ರಿ ಮಾಡುವ ಟಾಸ್ಕ್ ಬಂತು. ಅಬ್ಟಾ, ಬದುಕಿದೆ ಎಂಬ ನಿಟ್ಟುಸಿರಿನಲ್ಲಿ, ಏನೋ ಸಣ್ಣಪುಟ್ಟ ಮಿಮಿಕ್ರಿ ಮಾಡಿ ಬಚಾವಾಗಿಬಿಟ್ಟೆ.
ವಾಪಸು ಬಂದು ಮುಗ್ಧನಂತೆ (ಮುಗ್ಧನೇ ನಾನು!) ಬಂದು ಕುಳಿತೆ. ಪಕ್ಕದಲ್ಲಿ ಛೇರ್ ಖಾಲಿ ಇತ್ತು. ಹಿಂದಿನಿಂದ ಒಂದು ದನಿ, “ಎಕ್ಸ್‌ಕ್ಯೂಸ್ ಮಿ… ಇಲ್ಲಿ ನಾನು ಕೂರಬಹುದಾ?’ ಎನ್ನುತ್ತಾ, ಪುಟ್ಟ ನಗುವನ್ನು ನನ್ನೆಡೆಗೆ ತೇಲಿಸಿದ್ದಳು. ನಾನು “ಬನ್ನಿ, ಪ್ಲೀಸ್…’ ಎನ್ನುತ್ತಾ ಕುರ್ಚಿಯೆಡೆಗೆ ಕೈತೋರಿಸಿದೆ. ನಾನಾ ಪ್ರಶ್ನೆಗಳ ಮೂಲಕ ಪರಸ್ಪರ ಪರಿಚಿತರಾದೆವು. ಅಷ್ಟೊತ್ತಿಗೆ, ಬಿಸಿಬಿಸಿ ಚಹಾ ಬಂತು. ಆ ಚಹಾದ ಸ್ವಾದದಲ್ಲಿ ಇಬ್ಬರೂ ಕಳೆದುಹೋದೆವು. ಮತ್ತೆ ನಮ್ಮ ಅಭಿರುಚಿ, ಅದೂ ಇದು ಮಾತಿಗೆ ವಸ್ತುವಾದವು. ಒಂದು ಕಪ್ ಮುಗಿದು, ಮತ್ತೂಂದು ಕಪ್ ಚಹಾ ಹೀರುತ್ತಾ, ಮಾತುಕತೆಯನ್ನು ಮುಂದುವರಿಸುತ್ತಲೇ ಇದ್ದೆವು. ನಾಚಿಕೆಯೆಲ್ಲ ಬರಿದಾಗಿ, ಅದೆಲ್ಲಿಂದ ಧೈರ್ಯ ಬಂದು ಆಕೆಯೊಂದಿಗೆ ಮಾತನಾಡಿದೆನೋ ಎಂಬುದು ಇಂದಿಗೂ ನನಗೆ ತಿಳಿಯುತ್ತಿಲ್ಲ. ಬಹುಶಃ ಆ ಧೈರ್ಯಕ್ಕೂ ಚಹಾವೇ ಕಾರಣ ಇದ್ದಿರಬಹುದು!
ಈಗಲೂ ನಾವಿಬ್ಬರೂ ಪರಸ್ಪರ ಭೇಟಿ ಆಗುತ್ತೇವೆ. ನಮ್ಮ ಸ್ನೇಹ ನಿತ್ಯವೂ ಪಕ್ವಗೊಳ್ಳುವುದು ಅದೇ ಚಹಾದಿಂದ. ಏನೇ ಸಣ್ಣಪುಟ್ಟ ಮನಃಸ್ತಾಪಗಳು ಎದುರಾದರೂ, ಆ ಚಹಾ ನಮ್ಮ ಸ್ನೇಹವನ್ನು ಗಟ್ಟಿಮಾಡುತ್ತದೆ. ಹೊಂದಿಕೊಂಡು ಹೋಗಲು ಸಹಬಾಳ್ವೆಯ ಸೂತ್ರವನ್ನು ನಮ್ಮೊಳಗೆ ಹುದುಗಿಸುತ್ತದೆ. ಈ ಸ್ನೇಹ ಚಿರಕಾಲ ಇರಲಿ. ಇಷ್ಟೆಲ್ಲ ಚಮತ್ಕಾರಕ್ಕೆ ಕಾರಣವಾದ ಆ ಚಹಾಕ್ಕೆ ಒಂದು ಥ್ಯಾಂಕ್ಸ್ ಹೇಳಲೇಬೇಕೆನಿಸಿತಷ್ಟೇ.
– ಚಂದ್ರಶೇಖರ್ ಬಿ.ಎನ್.