Advertisement

ಕಾಲಮಿತಿಯಲ್ಲಿ ಟಿಡಿಆರ್‌ ಹಗರಣ ತನಿಖೆಗೆ ಆದೇಶ

12:20 AM Sep 25, 2019 | Lakshmi GovindaRaju |

ಬೆಂಗಳೂರು: ನಗರದ ವ್ಯಾಪ್ತಿಯಲ್ಲಿ 2007ರಿಂದ ಬಿಬಿಎಂಪಿ ಹಾಗೂ ಬಿಡಿಎ ವಿತರಣೆ ಮಾಡಿರುವ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್‌) ಹಾಗೂ 2018ರಿಂದ ವಿತರಿಸಿದ ಸ್ವಾಧೀನಾನುಭವ ಪತ್ರ (ಒಸಿ) ಕುರಿತು ತನಿಖೆಗಾಗಿ ಎಸ್‌ಐಟಿ ರಚಿಸಲು ಹೈಕೋರ್ಟ್‌ ಏಕ ಸದಸ್ಯ ನ್ಯಾಯಪೀಠ ಹೊರಡಿಸಿದ್ದ ಆದೇಶವನ್ನು ವಿಭಾಗೀಯ ಪೀಠ ಮಂಗಳವಾರ ರದ್ದುಪಡಿಸಿದೆ.

Advertisement

ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಪೊಲೀಸ್‌ ಅಧೀಕ್ಷಕ ಅಬ್ದುಲ್‌ ಅಹದ್‌ ನೇತೃತ್ವದಲ್ಲಿ ಎಸ್‌ಐಟಿ ರಚಿಸಲು ಹೊರಡಿಸಿದ್ದ ಏಕಸದಸ್ಯ ನ್ಯಾಯಪೀಠ ಹೊರಡಿಸಿದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯು ಮುಖ್ಯನ್ಯಾ. ಎ.ಎಸ್‌.ಓಕಾ ಹಾಗೂ ನ್ಯಾ. ಎ.ಎಸ್‌. ಕೃಷ್ಣಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ವಾದ-ಪ್ರತಿವಾದ ಆಲಿಸಿದ ಬಳಿಕ ರಾಜ್ಯ ಸರ್ಕಾರದ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಪೀಠ, ಎಸ್‌ಐಟಿ ರಚನೆಗೆ ಏಕ ಸದಸ್ಯ ನ್ಯಾಯಪೀಠ ಜು. 26ರಂದು ಹೊರಡಿಸಿದ್ದ ಆದೇಶ ರದ್ದುಪಡಿಸಿತು. ಅಲ್ಲದೆ, ಟಿಡಿಆರ್‌ ಹಾಗೂ ಸ್ವಾಧೀನಾನುಭ ಪತ್ರ ವಿತರಣೆಯ ಹಗರಣದ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹ ಎಸಿಬಿ ಮುಂದುವರಿಸಬೇಕು. ಆದರೆ, ತನಿಖಾಧಿಕಾರಿ ಯಾರಾಗಬೇಕೆಂಬುದನ್ನು ಎಸಿಬಿಯ ಐಜಿಪಿ ನಿರ್ಧಾರ ಮಾಡಲಿ.

ಇದು ಗಂಭೀರ ಪ್ರಕರಣವಾಗಿದ್ದು ಎಸಿಬಿ ತನಿಖೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ವಿಭಾಗೀಯ ನ್ಯಾಯಪೀಠ ನಿರ್ದೇಶನ ನೀಡಿದೆ. “ಇಂತಹ ಪ್ರಕರಣಕ್ಕೆ ಇಂತಹವರೇ ತನಿಖಾಧಿಕಾರಿ ಆಗಬೇಕು, ಆ ತನಿಖಾಧಿಕಾರಿ ತನ್ನ ಮೇಲಧಿಕಾರಿಗಳಿಗೆ ತನಿಖಾ ಪ್ರಗತಿ ವರದಿ ಸಲ್ಲಿಸುವಂತಿಲ್ಲ, ಉತ್ತರಿಸುವಂತಿಲ್ಲ. ಅಲ್ಲದೇ ಮೇಲಧಿಕಾರಿಗಳು ಆ ತನಿಖಾಧಿಕಾರಿಯ ಕೆಲಸದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಮತ್ತು

ತನಿಖಾಧಿಕಾರಿಯು ವರದಿಯನ್ನು ನ್ಯಾಯಾಲಯಕ್ಕೆ ಮಾತ್ರ ಸಲ್ಲಿಸಬೇಕು ಎಂದು ಏಕಸದಸ್ಯ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದ್ದ ಅಂಶಗಳನ್ನು ಒಪ್ಪದ ವಿಭಾಗೀಯ ನ್ಯಾಯಪೀಠ, ಈ ರೀತಿಯ ನಿರ್ದೇಶನಗಳನ್ನು ನೀಡುವುದು ರಿಟ್‌ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ’. ಹಾಗಾಗಿ ಏಕಸದಸ್ಯ ನ್ಯಾಯಪೀಠ 2019ರ ಜು. 26ರಂದು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಲಾಗಿತ್ತಿದೆ ಎಂದು ವಿಭಾಗೀಯ ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.

Advertisement

ಪ್ರಕರಣದಲ್ಲಿ ಕೆಲವೊಂದು ತಾಂತ್ರಿಕ ಹಾಗೂ ಕಾನೂನು ಅಂಶಗಳ ಆಧಾರದಲ್ಲಿ ಆದೇಶ ರದ್ದುಗೊಳಿಸಲಾಗುತ್ತಿದೆ. ಹಗರಣದ ಗಂಭೀರತೆಯ ಬಗ್ಗೆ ಏಕಸದಸ್ಯ ಪೀಠ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಸರ್ಕಾರ ಅಷ್ಟೇ ಗಂಭೀರವಾಗಿ ಪರಿಗಣಿಸಬೇಕೆಂದು ಉಲ್ಲೇಖೀಸಿದೆ.

ಪ್ರಕರಣವೇನು?: ನಗರದ ವ್ಯಾಪ್ತಿಯಲ್ಲಿ 2007ರಿಂದ 2015ರವರೆಗೆ ಬಿಬಿಎಂಪಿ ಮತ್ತು 2015ರ ನಂತರ ಬಿಡಿಎಯು ನಗರ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ಬಹುಮಹಡಿ ಹಾಗೂ ಸಣ್ಣ ಕಟ್ಟಡಗಳಿಗೆ ವಿತರಣೆ ಮಾಡಿರುವ ಟಿಡಿಆರ್‌ ಹಾಗೂ 2018ರ ಜ.1ರಿಂದ ವಿತರಣೆ ಮಾಡಿರುವ ಒಸಿ ಕುರಿತು ತನಿಖೆಯನ್ನು ಪೊಲೀಸ್‌ ಅಧೀಕ್ಷಕ ಅಬ್ದುಲ್‌ ಅಹದ್‌ ಅವರ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ಮಾಡಬೇಕು.ಆರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ, ಕೋರ್ಟ್‌ಗೆ ವರದಿ ಸಲ್ಲಿಸಬೇಕು ಎಂದು ಏಕ ಸದಸ್ಯ ನ್ಯಾಯಪೀಠ ಜು. 26ರಂದು ಸರ್ಕಾರಕ್ಕೆ ಆದೇಶಿಸಿತ್ತು.

ಇದರ ಆಧಾರದಲ್ಲಿ ಎಸ್‌ಐಟಿ ರಚಿಸಿ ಆ.31ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಆ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತು. ಪ್ರಕರಣದ ತನಿಖೆಯನ್ನು ಎಸಿಬಿ ನಡೆಸುತ್ತಿದೆ. ತನಿಖಾ ವರದಿಯನ್ನು ಎಸಿಬಿಯ ಐಜಿಪಿಯನ್ನು ಮೀರಿ ಏಕಸದಸ್ಯ ಪೀಠಕ್ಕೆ ನೇರವಾಗಿ ಸಲ್ಲಿಸಲು ಆಗುವುದಿಲ್ಲ. ಹೀಗಾಗಿ, ಏಕಸದಸ್ಯ ನ್ಯಾಯಪೀಠದ ಆದೇಶ ರದ್ದುಪಡಿಸಬೇಕೆಂದು ಸರ್ಕಾರ ವಿಭಾಗೀಯ ಪೀಠಕ್ಕೆ ಮನವಿ ಮಾಡಿತ್ತು. ಈ ವಾದವನ್ನು ವಿಭಾಗೀಯ ಪೀಠ ಪುರಸ್ಕರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next