ಪಲ್ನಾಡು: ಆಂಧ್ರಪ್ರದೇಶದಲ್ಲಿ ರಕ್ತ ಸಿಕ್ತ ರಾಜಕೀಯಕ್ಕೆ ಸಾಕ್ಷಿ ಎಂಬಂತೆ ಮತ್ತೆ ನೆತ್ತರು ಹರಿದಿದ್ದು, ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ YSRCP ಪಕ್ಷದ ಕಾರ್ಯಕರ್ತನನ್ನು ಬುಧವಾರ ಪಲ್ನಾಡು ಜಿಲ್ಲೆಯ ಜನನಿಬಿಡ ಬೀದಿಯಲ್ಲೇ ಆಡಳಿತಾರೂಢ TDP ಕಾರ್ಯಕರ್ತ ಮಾರಕಾಯುಧದಿಂದ ದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈದಿದ್ದಾನೆ.
ಮೃತ ಯುವಕ ವೈಎಸ್‌ಆರ್‌ಸಿಪಿ ಯುವ ಘಟಕದ ಸದಸ್ಯ ಶೇಖ್ ರಶೀದ್ ಎಂದು ಗುರುತಿಸಲಾಗಿದ್ದು, ಆತನಿಗೆ ಪದೇ ಪದೇ ಇರಿದು ಆತನ ಕೈಗಳನ್ನೂ ಕತ್ತರಿಸಲಾಗಿದೆ. ಬೆಚ್ಚಿಬೀಳಿಸುವ ಸಂಪೂರ್ಣ ಘಟನೆಯು ಸಿಸಿಟಿವಿ ಕೆಮರಾದಲ್ಲಿ ದಾಖಲಾಗಿದ್ದು, ಜನನಿಬಿಡ ರಸ್ತೆಯಲ್ಲೇ ಅಮಾನುಷವಾಗಿ ಹಲ್ಲೆ ನಡೆಸಲಾಗಿದ್ದು, ಜನರು ಮೂಕ ಪ್ರೇಕ್ಷಕರಂತೆ ನಿಂತಿದ್ದರು.
ವೈಎಸ್‌ಆರ್‌ಸಿಪಿ ಪಕ್ಷ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಭೀಕರ ಅಪರಾಧದ ವಿಡಿಯೋವನ್ನು ಹಂಚಿಕೊಂಡಿದ್ದು, ‘ಜಿಲಾನಿ ಎಂಬ ಟಿಡಿಪಿ ಗೂಂಡಾ, ಮಾನವರೂಪಿ ರಾಕ್ಷಸನಾಗಿ ತಿರುಗಿ ಪಲ್ನಾಡು ವೈಎಸ್‌ಆರ್‌ಸಿಪಿ ಕಾರ್ಯಕರ್ತನನ್ನು ಹತ್ಯೆಗೈದಿದ್ದಾನೆ. ವಿನುಕೊಂಡ ವೈಎಸ್‌ಆರ್‌ಸಿಪಿ ಯುವ ಘಟಕದ ಮುಖಂಡ ರಶೀದ್ ಮೇಲೆ ಚಾಕುವಿನಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ. ಎರಡೂ ಕೈಗಳು ತುಂಡಾಗಿದ್ದು, ರಶೀದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾನೆ. ಡಿಸಿಎಂ ಪವನ್ ಕಲ್ಯಾಣ್, ಗೃಹ ಸಚಿವರೇ ರಾಕ್ಷಸಾನಂದಕ್ಕೆ ಇನ್ನೂ ಎಷ್ಟು ಜನ ಬಲಿಯಾಗಬೇಕು? ಸಿಎಂ ಚಂದ್ರಬಾಬು ನಾಯ್ಡು ಯಾರಾದರೂ ಈ ದೇಶದಲ್ಲಿ ಕೆಟ್ಟ ಪಕ್ಷ ರಾಜಕಾರಣ ಮಾಡುತ್ತಿದ್ದಾರೆಯೇ?” ಎಂದು ಆಕ್ರೋಶ ಹೊರ ಹಾಕಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಯಾವುದೇ ರಾಜಕೀಯ ದ್ವೇಷಗಳಿಲ್ಲ ಮತ್ತು ಅಪರಾಧದ ಹಿಂದಿನ ಉದ್ದೇಶ ವೈಯಕ್ತಿಕ ಭಿನ್ನಾಭಿಪ್ರಾಯ ಎಂದು ಹೇಳಿದ್ದಾರೆ.
ವಿನುಕೊಂಡ ಪಟ್ಟಣದಾದ್ಯಂತ ಕಟ್ಟುನಿಟ್ಟಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಶಾಂತಿಯನ್ನು ಪ್ರಚೋದಿಸುವ ಅಥವಾ ಶಾಂತಿ ಕದಡುವ ಯಾವುದೇ ಪ್ರಯತ್ನಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.