ಅಮರಾವತಿ:ಮುನ್ಸಿಪಲ್ ಕಾರ್ಪೋರೇಶನ್ ಚುನಾವಣಾ ಪ್ರಚಾರಕ್ಕಾಗಿ ಚಿತ್ತೂರ್ ಗೆ ತೆರಳುತ್ತಿದ್ದ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ಟಿಡಿಪಿ ವರಿಷ್ಠ ಎನ್.ಚಂದ್ರಬಾಬು ನಾಯ್ಡು ಅವರನ್ನು ಪೊಲೀಸರು ತಡೆದಿರುವುದನ್ನು ವಿರೋಧಿಸಿ ತಿರುಪತಿ ವಿಮಾನ ನಿಲ್ದಾಣದಲ್ಲಿ ಸೋಮವಾರ(ಮಾರ್ಚ್ 01, ಧರಣಿ ನಡೆಸಿರುವ ಘಟನೆ ನಡೆದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಿರುಪತಿ ಪೊಲೀಸರು, ನಾವು ಒಂದು ವೇಳೆ ನಾಯ್ಡು ಅವರನ್ನು ಚಿತ್ತೂರ್ ಗೆ ತೆರಳಲು ಅನುಮತಿ ನೀಡಿದರೆ ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ನಾಯ್ಡು ಅವರನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಎಎನ್ ಐ ವರದಿ ಮಾಡಿದೆ.
ರಾಜ್ಯದಲ್ಲಿ ಪ್ರವಾಸ ಮಾಡಲು ಮತ್ತು ಸಭೆ ನಡೆಸಲು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಯಾವುದೇ ಹಕ್ಕು ಇಲ್ಲವೇ ಎಂಬ ಬಗ್ಗೆ ವೈಎಸ್ ಆರ್ ಸಿ ಪಿ ನಾಯಕರು ವಿವರಣೆ ನೀಡಬೇಕು ಎಂದು ಆಂಧ್ರಪ್ರದೇಶದ ಟಿಡಿಪಿ ಅಧ್ಯಕ್ಷ, ಮಾಜಿ ಸಚಿವ ಕೆ.ಅಚ್ಚನ್ ನಾಯ್ಡು ಒತ್ತಾಯಿಸಿದ್ದರು.
ಚಂದ್ರಬಾಬು ನಾಯ್ಡು ಅವರು 14 ವರ್ಷಗಳ ಕಾಲ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಸುಮಾರು 40 ವರ್ಷಗಳ ಕಾಲ ರಾಜಕೀಯ ಜೀವನ ಅವರದ್ದಾಗಿದೆ ಎಂದು ಅಚ್ಚನ್ ನಾಯ್ಡು ತಿಳಿಸಿದ್ದು, ಇಂತಹ ಹಿರಿಯ ನಾಯಕರ ಪ್ರವಾಸವನ್ನು ತಡೆಯುವ ಹಕ್ಕು ವೈಎಸ್ ಆರ್ ಸಿಪಿ ಮುಖಂಡರಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದರು.
ರಾಜ್ಯದಲ್ಲಿ ವೈಎಸ್ ಆರ್ ಸಿಪಿ ಅಧಿಕಾರಕ್ಕೆ ಬಂದ ಮೇಲೆ ಜಂಗಲ್ ರಾಜ್ ಆಡಳಿತ ನಡೆಸುತ್ತಿದ್ದಾರೆಯೇ ಎಂಬ ಅನುಮಾನ ಜನಸಾಮಾನ್ಯರಲ್ಲಿ ಮೂಡತೊಡಗಿದೆ ಎಂದು ಅಚ್ಚನ್ ನಾಯ್ದು ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸರ್ವಾಧಿಕಾರಿ ಹಿಟ್ಲರ್ ಮತ್ತು ಮುಸಲೊನಿ ರೀತಿ ವರ್ತಿಸುತ್ತಿದ್ದಾರೆ. ರೆಡ್ಡಿ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಿದ್ಧಾಂತರ ಮೇಲೆ ದಾಳಿ ನಡೆಸುತ್ತಿದ್ದಾರೆ. ಯಾವ ಆಧಾರದ ಮೇಲೆ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದ್ದಾರೆ ಎಂದು ಅಚ್ಚನ್ ಪ್ರಶ್ನಿಸಿದ್ದಾರೆ.