Advertisement
ಮಲೆನಾಡು ಎಂದರೆ ಹೇಳಬೇಕೆ? ಗುಡ್ಡಬೆಟ್ಟಗಳ ನಡುವೆ ಅಂಕುಡೊಂಕಿನ ರಸ್ತೆ. ಸುತ್ತಲೂ ಹಚ್ಚಹಸಿರು. ಅಲ್ಲೊಂದು ಇಲ್ಲೊಂದು ಮನೆ. ಇಂತಹ ಪರಿಸರದಲ್ಲಿ ಕಳೆದ ಅನೇಕ ವರ್ಷಗಳಿಂದ ರೈಟ್ ರೈಟ್ ಎಂದು ಸೇವೆ ಸಲ್ಲಿಸುತ್ತಿದ್ದ ಸಹಕಾರಿ ಸಾರಿಗೆ ಬಸ್ ಈ ನಡುವೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತನ್ನ ಸೇವೆಯನ್ನು ನಿಲ್ಲಿಸಿದ್ದರಿಂದ ಮಲೆನಾಡು ಜನರ ಬದುಕಿನ ಅಂಗವಾಗಿದ್ದ ಸಹಕಾರ ಸಾರಿಗೆ ಕೊಂಡಿಯೇ ಕಳಚಿದಂತಾಗಿತ್ತು. ಸಂಸ್ಥೆಯಲ್ಲಿ 300 ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದು. ಬಸ್ ಸಂಚಾರ ಸ್ಥಗಿತವಾಗಿದ್ದರಿಂದ ಸಂಸ್ಥೆಯನ್ನೇ ನಂಬಿ ಜೀವನ ನಡೆಸುತ್ತಿದ್ದ ಕಾರ್ಮಿಕರ ಬದುಕು ಬೀದಿಗೆ ಬಂದಿತ್ತು. ಕಾರ್ಮಿಕರ ಮತ್ತು ಸಂಸ್ಥೆಯ ಶ್ರೇಯೋಭಿವೃದ್ಧಿಯೊಂದಿಗೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಮೂಲದ ಬೆಂಗಳೂರು ಉದ್ಯಮಿ ಮಹೇಂದ್ರ ಸಂಸ್ಥೆಯೊಂದಿಗೆ ಕೈಜೋಡಿಸಿದ್ದು ಸಂಸ್ಥೆ ಮತ್ತೆ ಮರುಜೀವ ಪಡೆದುಕೊಂಡಿದೆ. ಅ.26ರ ವಿಜಯದಶಮಿ ದಿನದಂದು ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಜಿಲ್ಲಾದ್ಯಂತ 76 ಬಸ್‌ಗಳ ಪೈಕಿ 60 ಬಸ್‌ಗಳು ಮತ್ತೆ ರಸ್ತೆಗಿಳಿಯಲಿವೆ.
Related Articles
Advertisement
ಸಂಸ್ಥೆಯ ನೆರವಿಗೆ ಬಾರದ ಸರ್ಕಾರ: ಕಾರ್ಮಿಕರೇ ಕಟ್ಟಿ ಬೆಳೆಸಿದ ಸಂಸ್ಥೆ ಇತ್ತೀಚಿನ ದಿನಗಳಲ್ಲಿ ಡೀಸೆಲ್ ಬೆಲೆ ಏರಿಕೆಯಿಂದ ತಿಂಗಳಿಗೆ 24ಲಕ್ಷ ನಷ್ಟ ಅನುಭವಿಸುತ್ತಿತ್ತು. ವರ್ಷಕ್ಕೆ ಒಂದೂವರೆ ಕೋಟಿ ಟ್ಯಾಕ್ಸ್, ಜೊತೆಗೆ, ರಿಯಾಯಿತಿ ಪಾಸ್ ಸೇರಿ ಒಟ್ಟು ವರ್ಷಕ್ಕೆ 6 ಕೋಟಿ ಹೊರೆ ಸಂಸ್ಥೆಯ ಮೇಲೆ ಬಿದ್ದಿತ್ತು. ಸಂಸ್ಥೆ ಡೀಸೆಲ್ ಸಬ್ಸಿಡಿ, ಟ್ಯಾಕ್ಸ್ ಕಡಿತ ಹಾಗೂ ಪಾಸ್ ಉಳಿಕೆ ಹಣವನ್ನು ನೀಡುವಂತೆ ಸರ್ಕಾರದ ಸಹಾಯ ಹಸ್ತವನ್ನು ಚಾಚಿತು.
ಸಿದ್ದರಾಮಯ್ಯ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮನವಿ ಸಲ್ಲಿಲಾಗಿತ್ತು. ಆರ್ಥಿಕ ನೆರವು ನೀಡುವ ಭರವಸೆಯನ್ನು ನೀಡಲಾಗಿತ್ತು. ಆದರೆ, ಅದೇ ಸಮಯಕ್ಕೆ ಸಿದ್ಧರಾಮಯ್ಯ ಅವರ ಸರ್ಕಾರದ ಅವಧಿ ಮುಗಿದಿತ್ತು. ಮತ್ತೆ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ, ಅಷ್ಟರಲ್ಲಿ ಸಮ್ಮಿಶ್ರ ಸರ್ಕಾರ ಬಿದ್ದ ಪರಿಣಾಮ
ಮತ್ತೆ ಭರವಸೆಯಾಗೇ ಉಳಿಯಿತು. ಮುಂದೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ನಂತರ ಮತ್ತೆ ಸಂಸ್ಥೆ ತನ್ನ ಪ್ರಯತ್ನವನ್ನು ಮುಂದುವರಿಸಿತು. ಸರ್ಕಾರ ನೆರವು ನೀಡುವಂತೆ ಪ್ರತಿಭಟನೆಯ ಹಾದಿ ಹಿಡಿಯಬೇಕಾಯಿತು. ಸಂಸ್ಥೆಯ ಮನವಿಗೆ ಸ್ಪಂದಿ ಸಿದ ಸರ್ಕಾರ ಆರ್ಥಿಕ ನೆರವು ನೀಡಲು ಮುಂದಾಯಿತು. ಹಣಕಾಸು ಇಲಾಖೆಯಲ್ಲಿ ತಡೆಯೊಡ್ಡಿದ್ದರಿಂದ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾಯಿತು ಸಂಸ್ಥೆಯ ಸ್ಥಿತಿ. ಇದರ ಬೆನ್ನಲ್ಲೇ ಕೋವಿಡ್-19 ಮಹಾಮಾರಿಯಿಂದ ಮುಚ್ಚುವ ನಿರ್ಧಾರಕ್ಕೆ ಸಂಸ್ಥೆ ಬಂದಿತ್ತು. ಸದ್ಯ ಉದ್ಯಮಿ ಮಹೇಂದ್ರ ಅವರು ಆರ್ಥಿಕ ನೆರವಿಗೆ ಮುಂದಾಗಿದ್ದು ವಿಜಯ ದಶಮಿಯಂದು ಸಹಕಾರ ಸಾರಿಗೆ ಬಸ್ ಮರಳಿ ರಸ್ತೆಗಿಳಿಯಲಿದ್ದು ಸಂಸ್ಥೆ ಎತ್ತರಕ್ಕೆ ಬೆಳೆಯಲಿ ಎಂಬುದು ಮಲೆನಾಡಿಗರ ಹಾರೈಕೆಯಾಗಿದೆ.
ಉದ್ಯಮಿ ಮಹೇಂದ್ರ ಅವರು ಸಂಸ್ಥೆಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ದು, ಸಹಕಾರಿ ಸಾರಿಗೆ ಬಸ್ ಮತ್ತೆ ಪುನಾರಂಭಗೊಳ್ಳಲಿದೆ.– ಧರ್ಮಪ್ಪ, ಸಹಕಾರ ಸಾರಿಗೆ ಸಂಸ್ಥೆ ಅಧ್ಯಕ್ಷ
-ಸಂದೀಪ ಜಿ.ಎನ್. ಶೇಡ್ಗಾರ್