Advertisement

“ಕ್ಷಯ ರೋಗಿಗಳ ಚಿಕಿತ್ಸೆಗೆ ಸರಕಾರದಿಂದ ತಲಾ 5 ಲಕ್ಷ ರೂ.’

12:36 AM Mar 25, 2021 | Team Udayavani |

ಕಂಕನಾಡಿ: ಕ್ಷಯ ರೋಗವನ್ನು 2030ರ ವೇಳೆಗೆ ನಿರ್ಮೂಲನ ಮಾಡುವ ರಾಷ್ಟ್ರೀಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಉಚಿತ ಚಿಕಿತ್ಸೆ ಒದಗಿಸಲು ಸರಕಾರ ಒಬ್ಬೊಬ್ಬ ರೋಗಿಗೆ ತಲಾ 5 ಲಕ್ಷ ರೂ. ಖರ್ಚು ಮಾಡುತ್ತಿದೆ. ಆದ್ದರಿಂದ ರೋಗಿಗಳು, ವೈದ್ಯರು ಮತ್ತು ವೈದ್ಯಕೀಯ ಸಿಬಂದಿ ಸೇರಿಕೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕಾರ ನೀಡಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಹೇಳಿದರು.

Advertisement

ಅವರು ಬುಧವಾರ ಕಂಕನಾಡಿ ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜು ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿಗಳ ಕಚೇರಿ ಮತ್ತು ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕ್ಷಯ ರೋಗಿಯು 6 ತಿಂಗಳುಗಳ ಕಾಲ ತೀವ್ರತರವಾದ ಚಿಕಿತ್ಸೆ ಪಡೆದರೆ ರೋಗದಿಂದ ಮುಕ್ತಿ ಹೊಂದಬಹುದು. ಆದರೆ ರೋಗಿಗಳ ನಿರ್ಲಕ್ಷ್ಯ ಭಾವನೆ, ಕೆಲವು ಮಂದಿ ವೈದ್ಯರು ಶಿಷ್ಟಾಚಾರದ ಪ್ರಕಾರ ಚಿಕಿತ್ಸೆ ಒದಗಿಸದೆ ಉದಾಸೀನ ನೀತಿ ಅನುಸರಿಸುವುದರಿಂದ ರೋಗಿ ಗುಣಮುಖ ಹೊಂದುವುದಿಲ್ಲ. ರೋಗಿಳು, ವೈದ್ಯರು, ಆರೋಗ್ಯ ಇಲಾಖೆಯ ಸಿಬಂದಿ ಮನಸ್ಸು ಮಾಡಿದರೆ ಈ ರೋಗವನ್ನು ಸುಲಭವಾಗಿ ಹೊಡೆದೋಡಿಸಬಹುದು. ಕ್ಷಯ ರೋಗಕ್ಕೆ ಕ್ರಮ ಬದ್ಧವಾಗಿ ಚಿಕಿತ್ಸೆ ಪಡೆಯುವ ಬಗ್ಗೆ ಪ್ರತಿಯೊಬ್ಬ ವ್ಯಕ್ತಿ ಕನಿಷ್ಠ 10 ಮಂದಿಗೆ ಮಾಹಿತಿ ತಲುಪಿಸುವಂತಾಗಬೇಕು ಎಂದರು.

ಪ್ರಸ್ತಾವನೆಗೈದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಮಚಂದ್ರ ಬಾಯರಿ, ರಾಜ್ಯದಲ್ಲಿ 1 ಲಕ್ಷ ಜನ ಸಂಖ್ಯೆಗೆ 153 ಮಂದಿ ಕ್ಷಯ ರೋಗಿಗಳಿದ್ದು, ಇದನ್ನು 10ಕ್ಕೆ ಇಳಿಸಬೇಕಾಗಿದೆ. ಇದು ಸವಾಲಿನ ಕೆಲಸ. ದ.ಕ. ಜಿಲ್ಲೆಯಲ್ಲಿ ಕ್ಷಯ ರೋಗದ ಪ್ರಮಾಣ 0.1ಕ್ಕಿಂತ ಕಡಿಮೆ ಇದೆ. ಮುಂದಿನ 3- 4 ವರ್ಷಗಳಲ್ಲಿ ಜಿಲ್ಲೆಯಲ್ಲಿ ಕೆಲವು ಕ್ಷಯ ಮುಕ್ತ ಪಂಚಾಯತ್‌ಗಳನ್ನು ಸೃಷ್ಟಿಸಲು ಈಗಿಂದೀಗಲೇ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ ಎಂದರು.

ಮಾದರಿ ಜಿಲ್ಲೆಯಾಗಲಿ
ಅಧ್ಯಕ್ಷತೆ ವಹಿಸಿದ್ದ ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜಿನ ಡೀನ್‌ ಡಾ| ಜೆ.ಪಿ. ಆಳ್ವ ಅವರು “ಕಾಲ ಘಟಿಸುತ್ತಿದೆ’ (ಕ್ಲಾಕ್‌ ಈಸ್‌ ಟಿಕಿಂಗ್‌) ಎನ್ನುವುದು ವಿಶ್ವ ಕ್ಷಯ ರೋಗ ದಿನಾಚರಣೆಯ ಈ ವರ್ಷದ ಘೋಷಣ ವಾಕ್ಯವಾಗಿದ್ದು, ದ.ಕ. ಆದಷ್ಟು ಶೀಘ್ರದಲ್ಲಿ ಸಂಪೂರ್ಣ ಕ್ಷಯ ರೋಗ ಮುಕ್ತ, ಮಾದರಿ ಜಿಲ್ಲೆಯಾಗಲಿ ಎಂದು ಆಶಿಸಿದರು.

Advertisement

ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ| ಬದ್ರುದ್ದೀನ್‌ ಎಂ.ಎನ್‌. ಸ್ವಾಗತಿಸಿದರು. ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ| ರಾಜೇಶ್‌, ಮಂಗಳೂರು ವಿಭಾಗದ ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಡಾ| ದೇವಿಗನ್‌ ಸಿ., ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜಿನ ಸಂಶೋಧನ ನಿರ್ದೇಶಕ ಡಾ| ಬಿ. ಸಂಜೀವ ರೈ, ಡಾ| ಆ್ಯಂಟನಿ ಸಿಲ್ವನ್‌ ಡಿ’ಸೋಜಾ, ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲರಾದ ಭ| ಜಸಿಂತಾ ಉಪಸ್ಥಿತರಿದ್ದರು. ವೆನಾÉಕ್‌ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ| ಶರತ್‌ ಬಾಬು ಎಸ್‌. ಅವರು ಕ್ಷಯ ರೋಗ ದಿನಾಚರಣೆಯ ಈ ವರ್ಷದ ಘೋಷಣ ವಾಕ್ಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಲೊಕೇಶ್‌ ವಂದಿಸಿದರು.

ಮಾಸ್ಕ್ ನಿಂದ ರಕ್ಷಣೆ
ಒಂದು ವರ್ಷದಿಂದ ಮಾಸ್ಕ ನ್ನು ಕೊರೊನಾ ಸೋಂಕು ಹರಡುವುದನ್ನು ತಡೆಯಲು ಒಂದು ಅಸ್ತ್ರವಾಗಿ ಬಳಕೆ ಮಾಡಲಾಗುತ್ತಿದೆ. ಆದರೆ ಮಾಸ್ಕ್ ಧಾರಣೆಯಿಂದ ಇತರ ಪ್ರಯೋ ಜನಗಳೂ ಇವೆ. ಸಾಂಕ್ರಾಮಿಕ ರೋಗ ಹರಡುವುದನ್ನು ಇದು ತಡೆಯುತ್ತದೆ. ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ಕ್ಷಯ ರೋಗ ಪ್ರಮಾಣ ಕಡಿಮೆ ಮಾಡುವಲ್ಲಿ ಮಾಸ್ಕ್ ಧಾರಣೆ ಬಹಳಷ್ಟು ಪರಿಣಾಮಕಾರಿಯಾಗಿ ನೆರವಾಗಿದೆ ಎಂದು ಡಿಸಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next