Advertisement

ತೆರಿಗೆದಾರರ ಹಣ ವ್ಯರ್ಥವಾಗಬಾರದು

11:59 PM Oct 25, 2019 | mahesh |

ಆರ್ಥಿಕ ಸಂಕಷ್ಟದಲ್ಲಿರುವ ಭಾರತ್‌ ಸಂಚಾರ್‌ ನಿಗಮ್‌ ನಿಯಮಿತ (ಬಿಎಸ್‌ಎನ್‌ಎಲ್‌) ಮತ್ತು ಮಹಾನಗರ ಟೆಲಿಫೋನ್‌ ನಿಗಮ ನಿಯಮಿತ (ಎಂಟಿಎನ್‌ಎಲ್‌) ಪುನರುತ್ಥಾನಕ್ಕೆ ಕೇಂದ್ರ ಮುಂದಾಗಿದೆ. ದಿಢೀರ್‌ ನಿರ್ಧಾರವೊಂದರಲ್ಲಿ ಈ ಎರಡು ಸಂಸ್ಥೆಗಳನ್ನು ವಿಲೀನಗೊಳಿಸಿ, ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿಯ ಕೊಡುಗೆ ನೀಡುವುದರ ಜೊತೆಗೆ ಸಂಸ್ಥೆಗಳ ಕೆಲವು ಆಸ್ತಿಗಳನ್ನು ನಗದಾಗಿ ಪರಿವರ್ತಿಸಿಕೊಳ್ಳುವ ಪ್ರಸ್ತಾವವನ್ನು ಸರಕಾರ ಮಂಡಿಸಿದೆ. ಬಿಎಸ್‌ಎನ್‌ಎಲ್‌ಗೆ 4ಜಿ ತರಂಗ ನೀಡುವುದೂ ಈ ಪ್ಯಾಕೇಜ್‌ನ ಒಂದು ಅಂಶ. ಸದ್ಯಕ್ಕೆ ಸಾಕಲು ಅಸಾಧ್ಯವಾದ ಬಿಳಿಯಾನೆಯಾಗಿರುವ ಈ ಎರಡು ಸಂಸ್ಥೆಗಳಿಗೆ 74,000 ಕೋ. ರೂ. ಅಗಾಧ ಮೊತ್ತವನ್ನು ವ್ಯಯಿಸಲು ಸರಕಾರ ಮುಂದಾಗಿದೆ. ದಶಕಗಳಿಂದ ನಷ್ಟದಲ್ಲಿರುವ ಸಂಸ್ಥೆಗಾಗಿ ತೆರಿಗೆದಾರರ ಇಷ್ಟು ದೊಡ್ಡ ಮೊತ್ತದ ಹಣವನ್ನು ವ್ಯಯಿಸುವುದು ಸರಿಯೇ? ಇಷ್ಟೆಲ್ಲ ನೆರವು ನೀಡಿದ ಅನಂತರವೂ ಬಿಎಸ್‌ಎನ್‌ಎಲ್‌ ಚೇತರಿಸದಿದ್ದರೆ ಏನು ಗತಿ ಎಂಬಿತ್ಯಾದಿ ಪ್ರಶ್ನೆಗಳು ಈಗ ಉದ್ಭವವಾಗಿವೆ.

Advertisement

ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಅವನತಿಗೆ ಅಪಾರ ಸಂಖ್ಯೆಯ ನೌಕರರೂ ಒಂದು ಕಾರಣ. ನೌಕರರ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿಯೇ ಸ್ವಯಂ ನಿವೃತ್ತಿ ಕೊಡುಗೆಯನ್ನು ನೀಡಲಾಗಿದೆ. ಇವರು ಬಿಎಸ್‌ಎನ್‌ಎಲ್‌ ಏಕಸ್ವಾಮ್ಯ ಹೊಂದಿದ್ದ ಕಾಲದವರು. ಈಗಿನ ಸ್ಪರ್ಧಾತ್ಮಕ ಯುಗಕ್ಕೆ ಬದಲಾಗಲು ಅವರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ನೌಕರರ ಮನೋಧರ್ಮವನ್ನು ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಬದಲಾಯಿಸಲು ಸಾಧ್ಯವಾಗದಿದ್ದರೆ ಈ ಪ್ರಯತ್ನ ವ್ಯರ್ಥವಾಗಲಿದೆ.

ಬಿಎಸ್‌ಎನ್‌ಎಲ್‌ಗೆ 4ಜಿ ಸ್ಪೆಕ್ಟ್ರಂ ನೀಡುವ ನಿರ್ಧಾರ ಕೈಗೊಳ್ಳುವಾಗ ಸರಕಾರ ಪ್ರಸ್ತುತ ಇರುವ ಮಾರುಕಟ್ಟೆ ಪರಿಸ್ಥಿತಿಯನ್ನು ಸರಿಯಾಗಿ ಅಧ್ಯಯನ ಮಾಡಿರುವಂತೆ ಕಾಣಿಸುವುದಿಲ್ಲ. ಖಾಸಗಿ ವಲಯದ ಟೆಲಿಕಾಂ ಸಂಸ್ಥೆಗಳು ಈಗಾಗಲೇ 4ಜಿ ಸೇವೆ ನೀಡುತ್ತಿವೆ ಹಾಗೂ ಸದ್ಯದಲ್ಲೇ 5ಜಿ ಸೇವೆ ಒದಗಿಸಲು ತಯಾರಿ ನಡೆಸುತ್ತಿವೆ. ಬಿಎಸ್‌ಎನ್‌ಎಲ್‌ 4ಜಿ ಸ್ಪೆಕ್ಟ್ರಂ ಪಡೆದು ಅದರ ಸೇವೆಯನ್ನು ಜಾರಿಗೆ ತರಲು ಟೆಂಡರ್‌ ಕರೆದು ಈ ಪ್ರಕ್ರಿಯೆ ಮುಗಿಯುವ ವೇಳೆಗೆ ಖಾಸಗಿ ಕಂಪೆನಿಗಳ 5ಜಿ ಸೇವೆ ಆರಂಭವಾದರೂ ಆಶ್ಚರ್ಯವಿಲ್ಲ. ಹೀಗಾದರೆ ಬಿಎಸ್‌ಎನ್‌ಎಲ್‌ಗೆ 4ಜಿ ಸ್ಪೆಕ್ಟ್ರಂ ನೀಡುವುದರಿಂದ ಆಗುವ ಲಾಭವಾದರೂ ಏನು?

ಖಾಸಗಿ ವಲಯದ ತೀವ್ರ ಸ್ಪರ್ಧೆಯ ಜೊತೆಗೆ ಸರಕಾರಿ ವ್ಯವಸ್ಥೆಯ ಅಧಿಕಾರಶಾಹಿ ಧೋರಣೆಗಳು ಸರಕಾರಿ ಉದ್ದಿಮೆಗಳ ಅವನತಿಗೆ ಕಾರಣವಾಗುತ್ತಿವೆ ಎನ್ನುವುದಕ್ಕೆ ಏರ್‌ ಇಂಡಿಯಾ ಉತ್ತಮ ಉದಾಹರಣೆ. ಖಾಸಗಿ ಟೆಲಿಕಾಂ ಕಂಪೆನಿಗಳಿಗೆ ಹೋಲಿಸಿದರೆ ಬಿಎಸ್‌ಎನ್‌ಎಲ್‌ನ ಅಧಿಕಾರಶಾಹಿ ಧೋರಣೆಯೂ ಏರ್‌ ಇಂಡಿಯಾಕ್ಕಿಂತ ಹೆಚ್ಚೇನೂ ಭಿನ್ನವಾಗಿಲ್ಲ. ಖಾಸಗಿ ವಲಯದಲ್ಲಿರುವ ಚುರುಕುತನವನ್ನು ಸರಕಾರಿ ಸಂಸ್ಥೆಗಳೂ ಮೈಗೂಡಿಸಿಕೊಂಡರೆ ಮಾತ್ರ ಸರಕಾರದಿಂದ ಸಿಗುವ ಆರ್ಥಿಕ ನೆರವುಗಳು ಪ್ರಯೋಜನಕ್ಕೆ ಬರಬಹುದು. ಸೇವಾ ದಕ್ಷತೆಯಲ್ಲಿ ಕ್ರಾಂತಿಕಾರಿ ಎನ್ನುವಂಥ ಸುಧಾರಣೆಗಳು ಆಗಬೇಕು. ಸಂಸ್ಥೆಯ ಒಟ್ಟು ಸ್ವರೂಪವನ್ನೇ ಬದಲಾಯಿಸುವಂಥ ದಿಟ್ಟ ನಿರ್ಧಾರ ತೆಗೆದುಕೊಂಡರೆ ಮಾತ್ರ ಅಗಾಧ ಮೊತ್ತದ ಪ್ಯಾಕೇಜ್‌ನಿಂದ ಪ್ರಯೋಜನವಾಗಬಹುದು. ಇಲ್ಲದಿದ್ದರೆ ಸಾವು ಖಾತರಿಯಾಗಿರುವ ರೋಗಿಯ ಅಂತ್ಯಕ್ರಿಯೆಗೆ ಅದ್ದೂರಿ ತಯಾರಿ ಮಾಡಿದಂತಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next